ಕೈವಾರದಲ್ಲಿ ಸಂತ ಯೋಗಿ ನಾರೇಯಣ ತಾತಯ್ಯನವರ ಸಂಭ್ರಮದ ಜಯಂತಿ
ಕೈವಾರದಲ್ಲಿ ಸಂತ ಯೋಗಿ ನಾರೇಯಣ ತಾತಯ್ಯನವರ ಸಂಭ್ರಮದ ಜಯಂತಿ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಸಂತ ಯೋಗಿ ನಾರೇಯಣ ತಾತಯ್ಯನವರ ಜಯಂತಿಯಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಪ್ರವಚನ ನೀಡಿದರು.


ಕೋಲಾರ, ೧೩ ಮಾರ್ಚ್ (ಹಿ.ಸ) :

ಆ್ಯಂಕರ್ : ಕೋಲಾರ, ೧೩ ಮಾರ್ಚ್ (ಹಿ.ಸ) ಆಂಕರ್ : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಜಯಂತೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಾತ:ಕಾಲದಿಂದಲೇ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ನೆರವೇರಿಸಲಾಯಿತು. ನಂತರ ಸದ್ಗುರು ತಾತಯ್ಯನವರಿಗೆ ಪಂಚಾಮೃತ ಹಾಗೂ ಮಂಗಳದ್ರವ್ಯಗಳಿAದ ಅಭಿಷೇಕವನ್ನು ಮಾಡಿ, ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಯಿತು. ನಂತರ ಅಷ್ಟಾವಧಾನ ಸೇವೆಯನ್ನು ಸಲ್ಲಿಸಲಾಯಿತು. ಮಹಾಮಂಗಳಾರತಿಯನ್ನು ಬೆಳಗಲಾಯಿತು. ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಮೂಲ ವಿಗ್ರಹವನ್ನು ಸರ್ವಾಲಂಕೃತವಾಗಿ ಅಲಂಕರಿಸಲಾಗಿತ್ತು.

ಮಹಾಮಂಗಳಾರತಿಯ ನಂತರ ತಾತಯ್ಯನವರ ಉತ್ಸವ ವಿಗ್ರಹವನ್ನು ರಥದಲ್ಲಿ ಕುಳ್ಳರಿಸಿ ದೇವಾಲಯದ ಆವರಣದಲ್ಲಿ ರಥೋತ್ಸವವನ್ನು ನೆರವೇರಿಸಲಾಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕೈವಾರದ ಶ್ರೀಯೋಗಿನಾರೇಯಣ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆತ್ಮಧ್ಯಾನ ಮಂದಿರವನ್ನು ಧರ್ಮಾಧಿಕಾರಿಗಳಾದ ಡಾ. ಎಂ.ಆರ್.ಜಯರಾಮ್ ದಂಪತಿಗಳು ಉದ್ಘಾಟಿಸಿದರು. ಆತ್ಮಧ್ಯಾನಮಂದಿರದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಆತ್ಮಧ್ಯಾನ ಮಂದಿರದಲ್ಲಿ ಸದ್ಗುರು ತಾತಯ್ಯನವರ ಬೃಹತ್ ಭಾವಚಿತ್ರವನ್ನು ಅಳವಡಿಸಲಾಗಿದೆ. ಪೂಜೆಗಳನ್ನು ಸಲ್ಲಿಸಿ ಸಾಮೂಹಿಕವಾಗಿ ಧ್ಯಾನವನ್ನು ಮಾಡುವ ಮೂಲಕ ಚಾಲನೆ ನೀಡಲಾಯಿತು.

ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ರವರು ಮಾತನಾಡಿ “ಧ್ಯಾನಮಾರ್ಗ ಬಹಳ ಶ್ರೇಷ್ಠವಾದುದು. ಗುರುಪಾದದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲುವಂತೆ ಧ್ಯಾನಿಸಬೇಕು. ಈ ಸಾಧನೆಯಿಂದ ಭಕ್ತಿ ತಾನೇ ತಾನಾಗಿ ಬರುತ್ತದೆ. ನಮ್ಮ ಪೂರ್ವಜನ್ಮದ ಕರ್ಮಗಳ ರಾಶಿ ಗುರುಧ್ಯಾನದಿಂದ ನಾಶವಾಗುತ್ತದೆ.ಇಂದ್ರಿಯಗಳ ನಿಗ್ರಹವನ್ನು ಮಾಡುವುದೂ ಕೂಡ ಗುರುಧ್ಯಾನವೇ ಆಗಿದೆ. ಧ್ಯಾನದಿಂದ ಆತ್ಮಸಾಧನೆಯ ಹಾದಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಧ್ಯಾನದಿಂದ ಆತ್ಮಜ್ಞಾನದ ಚಿಂತನೆ ಪ್ರಾರಂಭವಾಗುತ್ತದೆ ಎಂದರು.

ಕೈವಾರ ತಾತಯ್ಯನವರ ಜಯಂತೋತ್ಸವದ ಅಂಗವಾಗಿ ವಿಶೇಷ ಸಂಗೀತೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು. ಪೂಜೆಯನ್ನು ಸಲ್ಲಿಸಿ ಸಂಗೀತ ಕಾರ್ಯಕ್ರಮಗಳು ಆರಂಭವಾಯಿತು. ವಿವಿಧ ಸಂಗೀತ ವಿದ್ವಾಂಸರುಗಳು ತಮ್ಮ ಗಾಯನ ಸೇವೆಯನ್ನು ಸಮರ್ಪಿಸಿದರು. ಪ್ರಥಮವಾಗಿ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರಿಂದ ಗಾಯನ ಸೇವೆ ನಡೆಯಿತು.

ಫಾಲ್ಗುಣ ಹುಣ್ಣಿಮೆಯಾದ ಇಂದು ಸದ್ಗುರು ತಾತಯ್ಯನವರ ಜಯಂತಿ. ೧೪.೩.೨೦೨೫ ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಶ್ರೀಯೋಗಿನಾರೇಯಣ ಮಠದಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿಯನ್ನು ಹಮ್ಮಿಕೊಳ್ಳಲಾಗಿದೆ. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಅಮರನಾರೇಯಣಸ್ವಾಮಿ ದೇವಾಲಯಕ್ಕೆ ಸಂಕೀರ್ತನೆಯೊ೦ದಿಗೆ ಕರೆತರಲಾಗುವುದು. ಶ್ರೀಕೃಷ್ಣಗಂಧೋತ್ಸವ ಸೇವೆಯನ್ನು ಸಮರ್ಪಿಸಲಾಗುವುದು. ಮಧ್ಯಾಹ್ನ ೧ ಗಂಟೆಗೆ ಶ್ರೀಅಮರನಾರೇಯಣಸ್ವಾಮಿ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಗುವುದು. ಸಂಜೆ ೪ ಗಂಟೆಗೆ ಆಲಂಬಗಿರಿಯಲ್ಲಿ ಗಿರಿಪ್ರದಕ್ಷಿಣೆ ಇರುತ್ತದೆ. ಸಂಜೆ ೭ ಗಂಟೆಗೆ ನಾದಸುಧಾರಸ ವೇದಿಕೆಯಲ್ಲಿ ನಾಟ್ಯಾಂಜಲಿ ಕಲಾಕೇಂದ್ರದ ಪರಿಮಳ ಅರಳುಮಲ್ಲಿಗೆ ತಂಡದವರಿAದ ಭರತನಾಟ್ಯ ಕಾರ್ಯಕ್ರಮವಿರುತ್ತದೆ. ರಾತ್ರಿ ೯ ಗಂಟೆಗೆ ನಾಗದೇನಹಳ್ಳಿ ಶ್ರೀಯೋಗಿನಾರೇಯಣ ಕೃಪಾ ಪೋಷಿತ ನಾಟಕ ಮಂಡಳಿರವರಿAದ ದಾನವೀರ ಶೂರ ಕರ್ಣ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.

ಚಿತ್ರ : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಸಂತ ಯೋಗಿ ನಾರೇಯಣ ತಾತಯ್ಯನವರ ಜಯಂತಿಯಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಪ್ರವಚನ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande