ಬೆಂಗಳೂರು, 14 ಮಾರ್ಚ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ, ನಿರಾಮಯ ಆರೋಗ್ಯ ವಿಮಾ ಯೋಜನೆ ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗಳು ಜಾರಿಯಲ್ಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಶುಕ್ರವಾರ ವಿಧಾನಪರಿಷತ್ ಕಲಾಪದಲ್ಲಿ ವೈ.ಎಂ.ಸತೀಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಕಲಚೇತನರಿಗಾಗಿ ಪ್ರಮುಖ ಮೂರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ಶಸ್ತ್ರಚಿಕಿತ್ಸೆಯ ಮುಖಾಂತರ ವಿಕಲಚೇತನತೆಯನ್ನು ನಿವಾರಣೆ ಮಾಡಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಅಥವಾ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 1 ಲಕ್ಷ ರೂಪಾಯಿ ವರೆಗೆ ಸಹಾಯ ಧನ ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ ನ್ಯಾಷನಲ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ನಿರಾಮಯ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟಂಬದ ವಿಕಲಚೇತನ ವ್ಯಕ್ತಿ ಒಂದು ಬಾರಿ ವಾರ್ಷಿಕ 250 ರೂಪಾಯಿಗಳನ್ನು ಸರ್ಕಾರದಿಂದ ವಿಮಾ ಕಂತಾಗಿ ಪಾವತಿಸಿ ಪ್ರತಿವರ್ಷ ಒಂದು ಲಕ್ಷಗಳವರೆಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯಬಹುದು ಎಂದರು.
ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ಕಡ್ಡಾಯ ನವಜಾತ ಶಿಶುಗಳ ಶ್ರವಣ ತಪಾಸಣೆ ನಡೆಸಿ, ಗುರುತು ಹಚ್ಚಿದ ತೀವ್ರತರವಾದ/ಗಂಭೀರ ಸ್ವರೂಪದ ಶ್ರವಣದೋಷವುಳ್ಳ 6 ವರ್ಷದ ಕೆಳಗಿನ ಮಕ್ಕಳಿಗೆ ಶ್ರವಣ ಸಾಧನಗಳನ್ನು ನೀಡಲಾಗುವುದು. ಜೊತೆಗೆ ಟ್ರಯಲ್ ಆಡಿಟರಿವರ್ಬಲ್ ಥೆರಪಿಯನ್ನು ಒದಗಿಸಲಾಗುವುದು, ವಿವಿಧ ಥೆರಪಿ ಚಿಕತ್ಸೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, 2016-17 ರಿಂದ ಇಲ್ಲಿಯವರೆಗೆ 665 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜೊತೆಗೆ ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ 4 ಬಗೆಯ ವಿಕಲಚೇತನರಿಗೆ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಯ ಗರಿಷ್ಠ 1 ಲಕ್ಷದವರೆಗೆ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ವೆಚ್ಚಗಳನ್ನು ಕೇಂದ್ರ ಸರ್ಕಾರ ಗುರುತಿಸಿರುವ ಸಂಸ್ಥೆಯ ಮುಖಾಂತರ ಪಡೆಯುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa