ಕೋಲಾರ, ೧೨ ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಾರ್ಚ್ ೧೭ ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಗ್ರೇಟ್ ನಂ ೪ ರಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವ ಸಂಕಲ್ಪ ಸಮಾವೇಶ ಹಾಗೂ ರಾಜ್ಯ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವಂತೆ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಆರ್.ಕೆ ದಿವ್ಯ ತಿಳಿಸಿದರು.
ನಗರದ ಹೊರವಲಯದ ಆರಾಧ್ಯ ಹೋಟೆಲ್ ನಲ್ಲಿ ಬುಧವಾರ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸೈಯದ್ ಆಫ್ರಿದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಕುರಿತಂತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಆಯ್ಕೆಯಾದ ರಾಜ್ಯ ಘಟಕದಿಂದ ಜಿಲ್ಲಾ ಸಮಿತಿ, ವಿಧಾನ ಸಭಾ ಸಮಿತಿ ಹಾಗೂ ಬ್ಲಾಕ್ ಸಮಿತಿ ಪದಾಧಿಕಾರಿಗಳು ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಯುವ ಸಮುದಾಯವನ್ನು ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಯುವಕರೇ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಗಿದ್ದು, ಯುವಕರೇ ಮುಂದೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಾಗಿದೆ ಪಕ್ಷದಲ್ಲಿ ಶಿಸ್ತು ಪಾಲನೆ ಅತೀ ಮುಖ್ಯವಾಗಿದೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರವು ಸುಳ್ಳು ಹೇಳುತ್ತಲೇ ಅಧಿಕಾರ ನಡೆಸುತ್ತಿದೆ. ಇಂದು ದೇಶದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇದನ್ನು ಸೋಶಿಯಲ್ ಮೀಡಿಯಾ ಮೂಲಕ ಜನತೆಗೆ ತಿಳಿಸುವ ಕೆಲಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ನೇತೃತ್ವ ವಹಿಸಬೇಕು ಎಂದರು.
ಚಿತ್ರ : ಕೋಲಾರ ನಗರದ ಹೊರವಲಯದ ಆರಾಧ್ಯ ಹೋಟೆಲ್ನಲ್ಲಿ ಬುಧವಾರ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಆರ್.ಕೆ ದಿವ್ಯ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ