ಗದಗ, 12 ಮಾರ್ಚ್ (ಹಿ.ಸ.):
ಆ್ಯಂಕರ್ : ಕಲಿಯುಗದಲ್ಲಿ ವೀರಶೈವ ಧರ್ಮವನ್ನು ಬೋಧಿಸಲು ಬಂದ ಆಚಾರ್ಯರಲ್ಲಿ ಜಗದ್ಗುರು ರೇಣುಕಾಚಾರ್ಯರು ಒಬ್ಬರು. ಅವರು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಮಹಾಮಹಿಮರಾಗಿದ್ದಾರೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಇಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಲವಾರು ಮಹಾನ್ ವ್ಯಕ್ತಿಗಳ, ಯೋಗಿಗಳ ಜಯಂತಿಯನ್ನು ಆಚರಿಸುವ ಮೂಲ ಉದ್ದೇಶವೆಂದರೆ ಅವರ ಸಂದೇಶಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಆಗಿರುತ್ತದೆ. ಜಗದ್ಗುರು ರೇಣುಕಾಚಾರ್ಯರನ್ನು ರೇವಣಾರಾಧ್ಯ ಅಥವಾ ರೇವಣಸಿದ್ಧ ಎಂದು ಕರೆಯುತ್ತಾರೆ. ಜಗದ್ಗುರು ರೇಣುಕಾಚಾರ್ಯರು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿದ್ದಾರೆ. ಸಮಾಜದಲ್ಲಿ ಅಸ್ಪೃಶ್ಯತೆ, ಮೂಡನಂಬಿಕೆಗಳನ್ನು ಹೋಗಲಾಡಿಸಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಬದುಕನ್ನು ಬೋಧಿಸಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಅವರು ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಅವರ ಈ ಸಂದೇಶಕ್ಕೆ ತಲೆಬಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿಯ ಅರ್ಥಪೂರ್ಣ ಆಚರಣೆ ಆದಂತಾಗುತ್ತದೆ ಎಂದರು.
ವೀರೇಶ್ವರ ಪುಣ್ಯಾಶ್ರಮದ ಶಿವಕುಮಾರ ಶಾಸ್ತ್ರೀಗಳು ಉಪನ್ಯಾಸ ನೀಡಿ ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯರು ಅಧರ್ಮಿಗಳಿಂದ ಧರ್ಮ ಪರಿಪಾಲನೆ ಮಾಡಿದವರು. ರೇಣುಕಾಚಾರ್ಯರು ಸೋಮೇಶ್ವರ ಲಿಂಗದಿಂದ ಜನಿಸಿದರು ಎಂದು ಹೇಳಲಾಗುತ್ತದೆ. ಭೂಲೋಕಗಳ ಸಂಕಷ್ಟಗಳ ನಿವಾರಣೆಗೆ ಇವರು ಉದ್ಭವಿಸಿದವರು. ಜಗತ್ತಿಗೆ ಲಿಂಗದ, ರುದ್ರಾಕ್ಷಿಯ ಮಹಿಮೆಯನ್ನು ಸಾರಿದ್ದಾರೆ. ಪಂಚವತಿಯ ಮಹಾನ್ ಋಷಿ ಅಗಸ್ತ್ಯರು ಗುರುವಾಗಿದ್ದರು. ರಾವಣನ ಮರಣದ ನಂತರ ಅವನ ಸಹೋದರ ವಿಭೀಷಣನ ಆಜ್ಞೆಯ ಮೇರೆಗೆ ತ್ರಿಕೋಟಿ ಲಿಂಗಗಳನ್ನು ಪ್ರತಿಷ್ಟಾಪಿಸಿದರೆಂದು ಹೇಳಲಾಗುತ್ತದೆ. ವೀರಶೈವ ಧರ್ಮವೆಂದರೆ ವಿಕಲ್ಪರಹಿತ ಧರ್ಮ ವೆಂದು ರೇಣುಕಾಚಾರ್ಯರು ಸಾರಿದ್ದಾರೆ. ಮನುಷ್ಯನು ಧರ್ಮ ರಹಿತನಾಗಬಾರದು. ಧರ್ಮದಿಂದಲೇ ಲೋಕಕ್ಕೆ ಶಾಂತಿ ಎಂದು ಧರ್ಮದ ಕುರುಹನ್ನು ತಿಳಿಸಿದವರಾಗಿದ್ದಾರೆ ಎಂದ ಶಿವಕುಮಾರ ಶಾಸ್ತಿçಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ಮತ್ತು ಸಂದೇಶಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳು ಮಾತನಾಡಿ ದೇಶಾದ್ಯಂತ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತಲೆದೋರಿದಾಗ ಅವುಗಳನ್ನು ಹೊಡೆದೋಡಿಸಲು ಆವಿರ್ಭವಿಸಿದ ಮಹಾನ್ ಗುರುಗಳು ರೇಣುಕಾಚಾರ್ಯರು. ಜಾತಿ ಜಾತಿಗಳ ಕಂದಕಗಳನ್ನು ತೊಡೆದು ಭೂಮಿಗೆ ಶಿವಸಿದ್ಧಾಂತ ಬೋಧಿಸಿದವರು ರೇಣುಕಾಚಾರ್ಯ ಭಗವತ್ಪಾದರು. ಜಗದ್ಗುರು ರೇಣುಕಾಚಾರ್ಯರ ಕುರಿತು ಶೃದ್ಧೆಯಿಂದ ಅಧ್ಯಯನವಾಗಬೇಕು. ಇವರು ಧರ್ಮಕ್ಕೂ ಸಹ ಸಂವಿಧಾನ ಕೊಟ್ಟಿದ್ದಾರೆ. ರೇಣುಕಾಚಾರ್ಯರು ಪರಮಗುರುಗಳು, ಮಹಾನ್ ಸ್ವಾಮಿ, ಮಹಾನ್ ಗುರುಗಳಾಗಿದ್ದಾರೆ ಎಂದು ಹಾನಗಲ್ ಕುಮಾರಸ್ವಾಮಿಗಳು ತಿಳಿಸಿದ್ದಾರೆ. ರೇಣುಕಾಚಾರ್ಯರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಮಕ್ಕಳಿಗೆ ಬೋಧನೆ ಮಾಡುವ ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಠದ ಚಂದ್ರಶೇಖರ ದೇವರು, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಬಿ.ಬಿ.ಅಸೂಟಿ, ತಾಲೂಕಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಅಶೋಕ ಮಂದಾಲಿ, ಗಣ್ಯರಾದ ಡಿ.ಆರ್.ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ , ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಗಣ್ಯರು, ಹಿರಿಯರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP