ನಗರಾಭಿವೃದ್ಧಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಗೆ ಒತ್ತಾಯ
ನಗರಾಭಿವೃದ್ಧಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು ಮುಖ್ಯಮಂತ್ರಿಗಳಿಗೆ ಎಎಪಿ ರಮೇಶ್ ಒತ್ತಾಯ
ನಗರಾಭಿವೃದ್ಧಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಗೆ ಒತ್ತಾಯ


ಬೆಂಗಳೂರು, ೧೨ ಮಾರ್ಚ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿನ ಖಾಸಗಿ ಬಡಾವಣೆಗಳ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಸಚಿವರ ಒಪ್ಪಿಗೆ ಪಡೆಯಬೇಕೆಂಬ ನೂತನ ಆದೇಶ ವ್ಯಾಪಕ ಭ್ರಷ್ಟಾಚಾರಕ್ಕೆ ನಾಂದಿ ಮಾಡಿಕೊಡುತ್ತದೆ. ಆದುದರಿಂದ ಈ ಆದೇಶವನ್ನು ತಕ್ಷಣವೇ ತಡೆಯಲು ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಅವರು,ರಾಜ್ಯದ ಅನೇಕ ನಗರ, ಪಟ್ಟಣಗಳಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಸುಸಜ್ಜಿತವಾದ ಬಡಾವಣೆಗಳು ನಿರ್ಮಾಣವಾಗಿ ಜನತೆಗೆ ಕೈಗೆಟುಕುವ ಬೆಲೆಯಲ್ಲಿ ಸೂರನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದುವರೆಗೂ ೧೯೬೧ ರ ಆರ್.ಡಿ.ಪಿ.ಅರ್ ಕಾಯ್ದೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರಗಳು ಆಯಾ ಖಾಸಗಿ ನಿವೇಶನಗಳ ನೀಲಿ ನಕಾಶೆಯನ್ನು ತಯಾರಿಸಿ ಅನುಮತಿಯನ್ನು ನೀಡಿ ಖಾಸಗಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತು.

ಆದರೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರು ತಮ್ಮ ಇತ್ತೀಚಿನ ಸಭೆಯಲ್ಲಿ ರಾಜ್ಯದಲ್ಲಿನ ಯಾವುದೇ ಖಾಸಗಿ ಬಡಾವಣೆಗಳ ನಿರ್ಮಾಣಕ್ಕಾಗಿ ಅಂತಿಮ ಅನುಮತಿಯನ್ನು ಸಚಿವಾಲಯದ ಮೂಲಕವೇ ಆಗಬೇಕೆಂದು, ಕಾಯ್ದೆಗೆ ತಿದ್ದುಪಡಿ ತರಲು ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಮಂತ್ರಿಗಳ ಈ ನಡೆ ಸಂಪೂರ್ಣವಾಗಿ ಅಧಿಕಾರ ವಿಕೇಂದ್ರೀಕರಣದ ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಬೀಳುವಂತಿದೆ. ನಗರಾಭಿವೃದ್ಧಿ ಸಚಿವಾಲಯದಿಂದ ನೇರವಾಗಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಈ ರೀತಿಯ ತಿದ್ದುಪಡಿಯನ್ನು ಮಾಡಲು ಹೊರಟಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ತಿದ್ದುಪಡಿಯು ನಗರ/ ಪಟ್ಟಣ ಯೋಜನಾ ಪ್ರಾಧಿಕಾರಗಳ ಸ್ವಾಯತ್ತತೆಗೆ ಧಕ್ಕೆ ತರುವಂತಿದೆ.

ಈ ಕೂಡಲೇ ತಾವು ಮಧ್ಯಪ್ರವೇಶ ಮಾಡಿ ನಿಮ್ಮ ನಗರಾಭಿವೃದ್ದಿ ಮಂತ್ರಿಯವರ ಕಾಯ್ದೆಯ ತಿದ್ದುಪಡಿಯ ಯೋಚನೆಯನ್ನು ತಕ್ಷಣವೇ ನಿಲ್ಲಿಸಬೇಕು. ಈ ಮೂಲಕ ಮುಂದಾಗಬಹುದಾದ ವ್ಯಾಪಕ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಮತ್ತು ವಿಕೇಂದ್ರೀಕರಣದ ಪರಿಕಲ್ಪನೆಯ ಮಹತ್ವವನ್ನು ಎತ್ತಿ ಹಿಡಿಯಬೇಕು ಎಂದು ವಿ ರಮೇಶ್ ಒತ್ತಾಯಿಸಿದ್ದಾರೆ.

ಚಿತ್ರ ; ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande