ಮುಂದಿನ ಐವತ್ತು ವರ್ಷಗಳಲ್ಲಿ ಕನ್ನಡದ ಅವನತಿ : ಪುರುಷೋತ್ತಮ ಬಿಳಿಮಲೆ
ಅನ್ಯ ಭಾಷೆಗಳ ಪ್ರಭಾವ : ಮುಂದಿನ ಐವತ್ತು ವರ್ಷಗಳಲ್ಲಿ ಕನ್ನಡದ ಅವನತಿ : ಪುರುಷೋತ್ತಮ ಬಿಳಿಮಲೆ
ಚಿತ್ರ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕೋಲಾರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದರು. ಕೋಲಾರ ಜಿಲ್ಲಾಧಿಕಾರಿ ರವಿ ಚಿತ್ರದಲ್ಲಿದ್ದಾರೆ.


ಕೋಲಾರ, ೧೨ ಫೆಬ್ರವರಿ (ಹಿ.ಸ.) :

ಆ್ಯಂಕರ್ : ಮುಂದಿನ ಐವತ್ತು ವರ್ಷಗಳಲ್ಲಿ ನಮ್ಮ ಕನ್ನಡ ಭಾಷೆಯು ಕೇವಲ ಮಾತನಾಡುವ ಭಾಷೆಯಾಗಿ ಮಾತ್ರ ಉಳಿಯುತ್ತದೆ ಎಂಬ ಕಳವಳ ಇದೆ. ಯಾಕೆಂದರೆ ಅನ್ಯ ಭಾಷೆಗಳು ನಮ್ಮ ಭಾಷೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ತಮ್ಮ ಮನೆಗಳಲ್ಲಿ ಹೆಚ್ಚಾಗಿ ಕನ್ನಡ ಭಾಷೆಯನ್ನು ಮಾತಾಡಿ ಮತ್ತು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಮಾತನಾಡಿಸಿ ಇದರ ಬಗ್ಗೆ ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಾಧಿಕಾರದ ಮುಖ್ಯ ಕೆಲಸ ಸರ್ಕಾರ ಕನ್ನಡಪರ ತೀರ್ಮಾನಗಳನ್ನು ತೆಗೆದುಕೊಂಡರೆ, ಅಂತಹ ತೀರ್ಮಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಈ ನಿಟ್ಟಿನಲ್ಲಿ ಸರ್ಕಾರವು ೩೦೦೦ ಕ್ಕೂ ಹೆಚ್ಚಿನ ಆದೇಶಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.

ಗಡಿಪ್ರದೇಶದ ಶಾಲೆಗಳು ಹೆಚ್ಚಾಗಿ ಕನ್ನಡೀಕರಣ ಗೊಳಿಸಬೇಕು ಮತ್ತು ಹೊರಗಿನಿಂದ ಬರುವವರನ್ನು ಕನ್ನಡಿಗರೊಂದಿಗೆ ವ್ಯವಹಾರ ಮಾಡುವಾಗ ಅವರನ್ನು ಕನ್ನಡದಲ್ಲಿಯೇ ಮಾತನಾಡಿ ಅವರಿಗೆ ಕನ್ನಡ ಭಾ?ಯನ್ನು ಕಲಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.

ಜಾಗತಿಕ ಮಾರುಕಟ್ಟೆಗಳು ಭಾಷೆಯ ಮೇಲೆ ಮಹತ್ತರ ಪರಿಣಾಮ ಉಂಟುಮಾಡಿವೆ ಮುಂದೆ ಕರ್ನಾಟಕಕ್ಕೆ ಹತ್ತು ಲಕ್ಷ ಕೋಟಿ ಹೂಡಿಕೆ ಬರುವ ನಿರೀಕ್ಷೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ದೊಡ್ಡ ಭಾಷಗಳ ಆಕ್ರಮಣದಿಂದ ಸಣ್ಣ ಸಮುದಾಯಗಳು ಮತ್ತು ಭಾಷೆಗಳನ್ನು ಸಾಯಿಸುತ್ತವೆ ಎಂದು ಕಳವಳ ವ್ಯಕ್ತ ಪಡಿಸಿದರು.

ಭಾರತದಲ್ಲಿ ೧೯೫೬೯ ತಾಯ್ನುಡಿಗಳು ಚಾಲ್ತಿಯಲಿವೆ ಅವುಗಳಲ್ಲಿ ಸಂವಿಧಾನ ಮಾನ್ಯತೆ ಕೊಟ್ಟಿರುವ ಕೇವಲ ೨೨ ಭಾಷೆಗಳಿವೆ. ಅದರಲ್ಲೂ ೧೮ ಭಾಷೆಗಳು ಉತ್ತರ ಭಾರತದ್ದಾಗಿದ್ದು, ಕೇವಲ ೪ ದಕ್ಷಿಣ ಭಾರತದ ಭಾಷೆಗಳನ್ನು ಪ್ರತಿನಿಧಿಸುತ್ತವೆ. ಜಗತ್ತಿನ ಶೇ.೯೨ರಷ್ಟು ಜನರು, ಶೇ.೮ರಷ್ಟು ಜನರ ಭಾಷೆ ಮಾತನಾಡುವ ಪರಿಸ್ಥಿತಿ ಉಂಟಾಗಿದೆ. ೨೨೦೦ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಮೃದ್ಧವಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯ ಪರಿಣಾಮ ನಮ್ಮ ಭಾಷಿಕರಿಗೆ ಅವಕಾಶಗಳು ತಪ್ಪಿಸುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು.

ಭಾಷೆಯನ್ನು ಜನಸಂಖ್ಯೆಯ ಆಧಾರದ ಮೇಲೆ ಅವೈಜ್ಞಾನಿಕವಾಗಿ ಅಳೆಯಲಾಗುತ್ತಿದೆ ಆದರೆ ನಮ್ಮ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಕಾನೂನುಗಳು ಸಮರ್ಥವಾಗಿಲ್ಲ. ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕಾದರೆ, ನಮ್ಮ ಭಾಗದ ಯುವಕರಿಗೆ ಅಂದು ಕೌಶಲ್ಯದ ತರಬೇತಿ ಇರುವುದಿಲ್ಲ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಕೆಲಸಗಳನ್ನು ಕೊಡುವುದು ಕಡಿಮೆ ಆದ್ದರಿಂದ ಕಂಪನಿಗಳಲ್ಲಿ ಕೆಲಸಗಳನ್ನು ಪಡೆಯಲು ಕೌಶಲ್ಯ ತರಬೇತಿಗಳನ್ನು ಪಡೆದುಕೊಳ್ಳಿ ನಿಮ್ಮಲ್ಲಿ ಕೌಶಲ್ಯ ಇದ್ದರೆ ನಿಮ್ಮನ್ನು ಹುಡುಕಿ ಕೆಲಸಗಳನ್ನು ಕೊಡುತ್ತಾರೆ ಎಂದು ತಿಳಿಸಿದರು.

ಅಧಿಕಾರಿಗಳು ಕನ್ನಡ ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಅಧಿಕಾರಿಗಳು ಕನ್ನಡ ಭಾಷೆಯನ್ನು ತಮ್ಮ ಇಲಾಖೆಗಳಲ್ಲಿ ಅನುಷ್ಠಾನ ಗೊಳಿಸಲು ಸಮಸ್ಯೆಗಳಿದ್ದರೆ, ಇಂತಹ ಸಭೆಗಳಲ್ಲಿ ಚರ್ಚಿಸಿದರೆ ನಾವು ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬಗೆಹರಿಸಲಾಗುವುದು. ಪ್ರತಿಯೊಂದು ಇಲಾಖೆಯಲ್ಲಿ ಒಂದು ಹೆಜ್ಜೆ ಮುಂದೆ ಬಂದು ನಾವೆಲ್ಲರೂ ಸೇರಿ ನಮ್ಮ ಮಾತೃಭಾ?ಯನ್ನು ಉಳಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಸುಮಾರು ೬೫ಸಾವಿರ ಗ್ರಾಮಗಳ ಹೆಸರುಗಳು ಕನ್ನಡ ಭಾಷೆಯಲ್ಲಿದೆ. ಅದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯಾ ಊರಿನ ಹೆಸರುಗಳ ಮಹತ್ವವನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಲೀಡ್ ಬ್ಯಾಂಕ್ ಅಧಿಕಾರಿಗಳು ನೂತನವಾಗಿ ಬರುವ ಉದ್ಯೋಗಿಗಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕು. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮರಣೋತ್ತರ ಪ್ರಮಾಣ ಪತ್ರವನ್ನು ಕನ್ನಡದಲ್ಲಿಯೇ ನೀಡಬೇಕು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಮರಣಕ್ಕೆ ಕಾರಣವನ್ನಾದರು ಕನ್ನಡದಲ್ಲಿ ದಾಖಲಿಸಲು ಪ್ರಯತ್ನಿಸಬೇಕು. ಅಲ್ಪ ಸಂಖ್ಯಾತರ, ಉರ್ದು ಶಾಲೆಗಳಲ್ಲಿ ಹಾಗೂ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿಯೂ ೫ ಜನ ಸದಸ್ಯರ ಜಾಗೃತಿ ಸಮಿತಿಯನ್ನು ಮಾಡಲಾಗಿದೆ. ಅವರಿಗೆ ಸರ್ಕಾರದ ಕಛೇರಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಸಹಕಾರವನ್ನು ನೀಡಬೇಕು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ್ ಹಾನಗಲ್ ಮಾತನಾಡಿ ಕಳೆದ ೩೦ ವರ್ಷಗಳಿಂದ ಕನ್ನಡಕ್ಕಾಗಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ೧೯೯೭ ರಿಂದ ಇಂದಿನ ವರೆಗೂ ೧೬ ಅಧ್ಯಕ್ಷರು ಕಾರ್ಯನಿರ್ವಹಿಸಿ ಹಲವಾರು ನ್ಯೂನ್ಯತೆಗಳನ್ನು ಸರಿಪಡಿಸಿ ಸರ್ಕಾರಕ್ಕೂ ವರದಿ ಮಾಡಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅದರ ಭಾಗವಾಗಿ ಇಂದು ಕೋಲಾರ ಜಿಲ್ಲೆಗೆ ಬರಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ ಸರ್ಕಾರದ ಇಲಾಖೆಗಳಲ್ಲಿ ಅಂತರ್ಜಾಲವನ್ನು ಬಳಸಿಕೊಂಡು ಇ-ಅಪೀಸ್ ತಂತ್ರಾಂಶ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ತಂತ್ರಾಂಶದಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚು ಮಾಡಬೇಕು. ಆ ತಂತ್ರಾಂಶವನ್ನು ಕನ್ನಡಲ್ಲಿ ಬಳಕೆ ಮಾಡಲು ಅಧಿಕಾರಿಗಳಿಗೆ ತರಬೇತಿಯನ್ನು ನೀಡಬೇಕು. ನೇಮಕಾತಿಯ ವಿಚಾರದಲ್ಲಿ ಹೊರಗುತ್ತಿಗೆ ನೀಡುವುದರಿಂದ, ಅವರಿಗೆ ಇರುವ ಕನ್ನಡ ಭಾ?ಯ ಜ್ಞಾನದ ಕುರಿತು ನಾವು ಅರಿಯಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ತಿಮ್ಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ.ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಕೆಜಿಎಫ್ ಪೋಲಿಸ್ ವರಿಷ್ಠಾಧಿಕಾರಿ ಶಾಂತರಾಜು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಕನ್ನಡಪರ ಸಂಘಟನೆಯ ಮುಖ್ಯಸ್ಥರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

ಚಿತ್ರ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕೋಲಾರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದರು. ಕೋಲಾರ ಜಿಲ್ಲಾಧಿಕಾರಿ ರವಿ ಚಿತ್ರದಲ್ಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande