ಕಾಂಗೊ, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪೂರ್ವ ಕಾಂಗೋನ ಇಟುರಿ ಪ್ರಾಂತ್ಯದಲ್ಲಿ ನಡೆದ ಸಶಸ್ತ್ರ ದಾಳಿಯಲ್ಲಿ ಕನಿಷ್ಠ 55 ನಾಗರಿಕರು ಸಾವನ್ನಪ್ಪಿದ್ದಾರೆ. ಈ ದಾಳಿ ವಿಶೇಷವಾಗಿ ಸ್ಥಳಾಂತರಗೊಂಡ ಜನರ ಹಳ್ಳಿಯನ್ನು ಗುರಿಯಾಗಿಸಿಕೊಂಡು ನಡೆದಿದ್ದು, ಹಲವಾರು ಮನೆಗಳು ಸುಟ್ಟುಹೋಗಿವೆ, ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ ಜೈಬಾ ಗ್ರಾಮದಲ್ಲಿ ಸಿಒಡಿಇಸಿಒ ಎಂಬ ಸಶಸ್ತ್ರ ಗುಂಪಿನ ಹೋರಾಟಗಾರರು ದಾಳಿ ನಡೆಸಿದ್ದಾರೆ. ಈ ಗುಂಪು ಲೆಂಡು ಸಮುದಾಯಕ್ಕೆ ಸಂಬಂಧಿಸಿದಂತದ್ದಾಗಿದೆ.
ವಿಶ್ವಸಂಸ್ಥೆ ಈ ರೀತಿಯ ಹಿಂಸಾಚಾರವನ್ನು ಯುದ್ಧ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಪರಿಗಣಿಸಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ವಿಶ್ವಸಂಸ್ಥೆಯ ಶಾಂತಿಪಾಲಕರು ಮತ್ತು ಕಾಂಗೋ ಮಿಲಿಟರಿ ಸರ್ಕಾರಿ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ, ದಾಳಿಕೋರರ ಹೆಚ್ಚಿನ ಸಂಖ್ಯೆಯ ಕಾರಣದಿಂದಾಗಿ ಶಕ್ತಿಯುತ ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರರು ಕೊಡಲಿ ಮತ್ತು ಬಂದೂಕುಗಳಿಂದ ಜನರ ಮೇಲೆ ದಾಳಿ ನಡೆಸಿದ್ದರು. ಇತ್ತೀಚೆಗೆ ಈ ಪ್ರದೇಶವು ಹಿಂಸಾಚಾರಕ್ಕೆ ತುತ್ತಾಗಿದ್ದು, ಹೀಗೆ ಇತ್ತೀಚಿನ ತಿಂಗಳುಗಳಲ್ಲಿ ಇಂತಹ ದಾಳಿಗಳು ಹೆಚ್ಚಾಗಿವೆ.
ತಜ್ಞರ ಪ್ರಕಾರ, ಕಾಂಗೋದಲ್ಲಿ ಸಕ್ರಿಯವಾಗಿರುವ 120 ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣ ಭೂಮಿ ಮತ್ತು ಅಮೂಲ್ಯ ಖನಿಜ ಸಂಪತ್ತಿನ ಮೇಲೆ ನಿಯಂತ್ರಣಕ್ಕಾಗಿ ನಡೆಯುವ ಸ್ಪರ್ಧೆಯಾಗಿದೆ. ಈ ದಾಳಿ, ಕಾಂಗೋದ ಪೂರ್ವ ಭಾಗದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಮತ್ತೊಮ್ಮೆ ತೋರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa