
ಕೋಲಾರ, ೩೧ ಡಿಸೆಂಬರ್ (ಹಿ.ಸ) :
ಆ್ಯಂಕರ್ : ರಸ್ತೆ ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ಅಪಘಾತವಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ತಿಳಿಸಿದರು.
ಅವರು ಡಿ. ೩೧ರ ಬುಧವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಿ0ದ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
೨೦೨೬ರ ಜನವರಿ ೦೧ ರಿಂದ ೩೧ ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸಾರಿಗೆ ಇಲಾಖೆ, ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಸ್ಥಳೀಯ ವಕೀಲರ ಸಂಘ, ವಿಮಾ ಕಂಪನಿಗಳ ಪ್ರತಿನಿಧಿಗಳ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ ಕುರಿತು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕೆಂದು ಸಲಹೆ ನೀಡಿದರು.
ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ, ಸುಪ್ರೀಂ ಕೋರ್ಟ್ನ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ಯೋಜನೆ ಜಾರಿ ಹಾಗೂ ಅನುಷ್ಠಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ವಾಹನ ಅಪಘಾತವಾದ ಸಂದರ್ಭಗಳಲ್ಲಿ ನಗದು ರಹಿತ ಚಿಕಿತ್ಸೆ, ವಿಮಾ ಮೊತ್ತ ಪಾವತಿಗೆ ಸಂಬ0ಧಿಸಿದ0ತೆ ನಮೂನೆಗಳ ಭರ್ತಿ ಇನ್ನಿತರೆ ಅಂಶಗಳ ಕುರಿತು ತರಬೇತಿ, ಕಾರ್ಯಾಗಾರ, ಸೆಮಿನಾರ್, ಪ್ಯಾನಲ್ ಚರ್ಚೆ, ಇನ್ನಿತರ ಕಾರ್ಯಕ್ರಮಗಳ ಮೂಲಕ ಅರಿವು ಮತ್ತು ಮಾಸ್ಟರ್ ಟ್ರೈನರ್ ಗಳಿಗೆ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಪಾಲುದಾರ ಇಲಾಖೆಗಳಾದ ಸಾರಿಗೆ, ಪೋಲಿಸ್, ಸಿಬ್ಬಂದಿಯವರಿಗೆ ನೀಡಲಾಗುತ್ತದೆ ಎಂದರು.
ಬಿ.ಎ0.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‌ಗಳ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಬಸ್ ಚಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಪರಿಣಾಮಕಾರಿಯಾದ ರಸ್ತೆ ಸುರಕ್ಷತೆ ಮಾಸಾಚರಣೆ ಅವಧಿಯಲ್ಲಿ ಹೆಚ್ಚಿನ ಹಾಗೂ ಪರಿಣಾಮಕಾರಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು.
ವಾಕಥಾನ್, ಮ್ಯಾರಾಥಾನ್, ವಿಂಟೇಜ್ ಕಾರ್ ರ‍್ಯಾಲಿ, ಸೈಕಲ್ ಜಾಥಾ, ಮಾನವ ಸರಪಳಿ ನಿರ್ಮಾಣದ ಮೂಲಕ ಜಾಗೃತಿ, ಸಂಚಾರ ಲೈವ್ ಪ್ರಾತ್ಯಕ್ಷಿಕೆ, ಪ್ಯಾನಲ್ ಚರ್ಚೆ, ಕಾರ್ಯಗಾರ, ವಾಣಿಜ್ಯ ವಾಹನ ಮಾಲೀಕರು, ವಾಹನ ಚಾಲಕರ ವಿವಿಧ ಸಂಘಟನೆಗಳ ಸದಸ್ಯರಿಗೆ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತ ದಾನ ಶಿಬಿರ, ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ರಚನೆ, ಕಿರು ನಾಟಕ, ಚಿತ್ರಕಲಾ ಸ್ಪರ್ಧೆ, ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಸುರಕ್ಷತೆಯ ಸ್ಲೋಗನ್ ಪ್ರದರ್ಶನ, ಪತ್ರಿಕಾ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ, ರೇಡಿಯೋ ಜಿಂಗಲ್ಸ್ ಮತ್ತು ಸಿನಿಮಾ ಮಂದಿರಗಳಲ್ಲಿ ಜಾಹೀರಾತು ಪ್ರದರ್ಶನ ಇತ್ಯಾದಿಗಳ ಮೂಲಕ ಪರಿಣಾಮಕಾರಿಯಾಗಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸಾರಿಗೆ ಇಲಾಖೆಯ ಆಯುಕ್ತರಾದ ಯೋಗೇಶ್ ಗೌಡ, ಹೆಚ್ಚುವರಿ ಆಯುಕ್ತಾರದ ಮಲ್ಲಿಕಾರ್ಜುನ್, ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾ ರೆಡ್ಡಿ, ಎಲ್ಲಾ ಜಿಲ್ಲೆಗಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಪತ್ರಕರ್ತರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು.
ಚಿತ್ರ : ಜನವರಿ ೧ ರಿಂದ ೩೧ರ ತನಕ ರಸ್ತೆ ಸುರಕ್ಷತಾ ಅಭಿಯಾನದ ಬಗ್ಗೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್