
ಗದಗ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸೆಪ್ಟೆಂಬರ್ 2025 ರ ಮಾಹೆಯವರೆಗೆ ತಲಾ 2,000 ರೂ.ಗಳಂತೆ ಗದಗ ತಾಲೂಕಿನ 79125 ಫಲಾನುಭವಿಗಳಿಗೆ 15.82 ಕೋಟಿ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಸಭೆಯ ಅಧ್ಯಕ್ಷರಾದ ಅಶೋಕ ಮಂದಾಲಿ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ವಿ.ಸಿ.ಹಾಲ್‌ದಲ್ಲಿ ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಅಶೋಕ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಳಂಬವಾಗದೇ ನಿಗದಿತ ಸಮಯದಲ್ಲೇ ದೊರಕುವಂತಾಗಬೇಕು. ಪಂಚ ಗ್ಯಾರಂಟಿ ಯೋಜನೆಗಳ ಗುರಿ ಸಾಧನೆ ಶೇ 100 ರಷ್ಟಾಗಲು ಸಂಬಂಧಿತ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಗದಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಸೆಪ್ಟೆಂಬರ್ -2025 ರ ಮಾಹೆಯಲ್ಲಿ ಒಟ್ಟು 2,50,165 ಫಲಾನುಭವಿಗಳಿಗೆ 50,03,30,000 / ರೂ. ಪಾವತಿಸಲಾಗಿದೆ ಪಾವತಿಗೆ ಬಾಕಿ ಉಳಿದಿರುವ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಗದಗ ಮತಕ್ಷೇತ್ರದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರ ಪಟ್ಟಿಯನ್ನು ಗ್ಯಾರಂಟಿ ಸಮಿತಿಗೆ ಸಲ್ಲಿಸಬೇಕು. ಅರ್ಹ ಫಲಾನುಭವಿಯು ಪಡಿತರ ಚೀಟಿ ಸೌಲಭ್ಯದಿಂದ ವಂಚಿತನಾಗಬಾರದು. ಯಾವುದೇ ಅಮಿಷಕ್ಕೊಳಗಾಗದೇ ಬಡಜನರಿಗೆ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು.
ಗದಗ ಬೆಟಗೇರಿ ನಗರ ಪ್ರದೇಶ ಹಾಗೂ ಗದಗ ತಾಲೂಕು ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲು ವಾಕರಸಾಸಂಸ್ಥೆಯ ಸಣ್ಣ ಶೆಲ್ಟರ್‌ನಿಂದ ಕೂಡಿದ ಬಸ್ ನಿಲುಗಡೆಯ ಅವಶ್ಯಕತೆ ಇವೆಯೋ ಅಂತಹ ಸ್ಥಳಗಳ ಪಟ್ಟಿಯನ್ನು ಸಲ್ಲಿಸಬೇಕು. ವಾಕರಸಾ ಸಂಸ್ಥೆಯ ಅಧಿಕಾರಿಗಳು ಗದಗ ಮತಕ್ಷೇತ್ರದಲ್ಲಿನ ಬಸ್ ನಿಲ್ದಾಣಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿನ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ಶ್ರಮಿಸಬೇಕು. ಹೊಂಬಳ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಗದಗ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರಾದ ಕೃಷ್ಣಗೌಡ ಎಚ್ ಪಾಟೀಲ ಅವರು ಮಾತನಾಡಿ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಪಾವತಿಯಲ್ಲಿ ವಿಳಂಬವಾದರೂ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಬದ್ಧತೆ ಸರ್ಕಾರದ್ದಾಗಿದೆ. ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಆರ್ಥಿಕಾಭಿವೃದ್ಧಿಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸದಾ ಸನ್ನದ್ಧ ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿದೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವುದು ಅವಶ್ಯಕವಾಗಿದೆ. ಅಂದಾಗ ಮಾತ್ರ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತ್ವರಿತಗತಿಯಲ್ಲಿ ಲಭ್ಯವಾಗುತ್ತವೆ ಎಂದರು.
ಪಡಿತರದಾರರ ಅಂಗಡಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಕಗಳನ್ನು ಪ್ರದರ್ಶಿಸಲು ಕ್ರಮ ವಹಿಸಬೇಕು ಎಂದು ಕೃಷ್ಣಗೌಡ ಪಾಟೀಲ ಅವರು ಹೇಳಿದಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರಮೇಶ ಅವರು ಮಾತನಾಡಿ ಈ ಕುರಿತು ರಾಜ್ಯ ಮಟ್ಟದಲ್ಲಿ ಸಭೆಯು ಜರುಗಲಿದೆ. ಸಭೆಯಲ್ಲಿ ಆದೇಶವಾದ ನಂತರ ಪಂಚ ಗ್ಯಾರಂಟಿ ಯೋಜನೆಗಳ ಫಲಕಗಳನ್ನು ಅಳವಡಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಎಮ್.ಎಸ್. ರಮೇಶ ಅವರು ಮಾತನಾಡಿ ನವೆಂಬರ್ -2025 ರ ಮಾಹೆಯಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿ ಹಂಚಿಕೆಯಡಿ ಗದಗ ಗ್ರಾಮೀಣ ಭಾಗದಲ್ಲಿ ಒಟ್ಟು 47493 ( ಅಂತ್ಯೋದಯ (ಎಎವೈ ) + ಬಿಪಿಎಲ್ ( ಪಿಎಚ್‌ಎಚ್ ) ಕಾರ್ಡುದಾರರಿಗೆ 7349.90 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಎನ್‌ಎಫ್‌ಎಸ್‌ಎ ಅಕ್ಕಿ ಹಂಚಿಕೆಯಡಿ ( ಕೇಂದ್ರ ಸರ್ಕಾರ) 47493 ( ಅಂತ್ಯೋದಯ ( ಎಎವೈ ) + ಬಿಪಿಎಲ್ ( ಪಿ ಎಚ್ ಎಚ್ ) ಕಾರ್ಡುದಾರರಿಗೆ ಒಟ್ಟು 8775.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ಗ್ರಾಮೀಣ ಭಾಗದಲ್ಲಿ 47493 ಕಾರ್ಡುದಾರರಿಗೆ 16125.25 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ನವೆಂಬರ್ -2025 ರ ಮಾಹೆಯಲ್ಲಿ ಗದಗ ಶಹರದಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿ ಹಂಚಿಕೆಯಡಿ ಒಟ್ಟು 31759 ಕಾರ್ಡುದಾರರಿಗೆ ( ಅಂತ್ಯೋದಯ + ಬಿಪಿಎಲ್ ಕಾರ್ಡುದಾರರು) 5201.65 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಎನ್‌ಎಫ್‌ಎಸ್‌ಎ ಅಕ್ಕಿ ಹಂಚಿಕೆಯಡಿ( ಕೇಂದ್ರ ಸರ್ಕಾರ) 31759 ಕಾರ್ಡುದಾರರಿಗೆ (ಅಂತ್ಯೋದಯ + ಬಿಪಿಎಲ್ ಕಾರ್ಡುದಾರರು) 5466.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಒಟ್ಟಾರೆಯಾಗಿ 31759 ಕಾರ್ಡುದಾರರಿಗೆ 10668 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ ಎಂದು ಸಭೆಗೆ ವಿವರಿಸಿದರು.
ಗೃಹಜ್ಯೋತಿ ಯೋಜನೆಯಡಿ 30-11-2025 ರವರೆಗೆ ಗದಗ ಶಹರ ವಿಭಾಗದಲ್ಲಿ 48708 ಸ್ಥಾವರಗಳು ಅರ್ಹವಾಗಿದ್ದು 48481 ಸ್ಥಾವರಗಳ ನೋಂದಣಿಯಾಗಿವೆ. ಶೇ 99,53 ರಷ್ಟು ಸಾಧನೆಯಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ 53110 ಸ್ಥಾವರಗಳು ಅರ್ಹವಾಗಿದ್ದು ಆ ಪೈಕಿ 52909 ಸ್ಥಾವರಗಳ ನೋಂದಣಿಯಾಗಿದ್ದು ಶೇ. 99.62 ರಷ್ಟು ಸಾಧನೆಯಾಗಿದೆ ಎಂದು ಹೆಸ್ಕಾಂ ಅಧಿಕಾರಿ ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಶಕ್ತಿ ಹಾಗೂ ಯುವ ನಿಧಿ ಯೋಜನೆ ಪ್ರಗತಿ ಪರಿಶೀಲನೆ ಜರುಗಿತು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಶಂಭು ಕಾಳೆ, ಶ್ರೀಮತಿ ಮೀನಾಕ್ಷಿ ಬೆನಕಣ್ಣವರ, ಶ್ರೀಮತಿ ಸಾವಿತ್ರಿ ಹೂಗಾರ, ದಯಾನಂದ ಪವಾರ, ಸಂಗು ಕರೆಕಲಮಟ್ಟಿ, ಎನ್.ಬಿ.ದೇಸಾಯಿ, ಸಂಗಮೇಶ ಎಂ ಹಾದಿಮನಿ, ರಮೇಶ ಹೊನ್ನಿನಾಯ್ಕರ , ದೇವರಡ್ಡಿ ತಿರ್ಲಾಪುರ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್‌ಬಾರಕೇರ , ಭಾಷಾ ಮಲ್ಲಸಮುದ್ರ, ತಾ.ಪಂ. ಕಾರ್ಯನಿರ್ವಹಣಾದಿಕಾರಿ ಮಲ್ಲಯ್ಯ ಕೊರವನವರ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ,ವಿ ಸೇರಿದಂತೆ ಗ್ಯಾರಂಟಿ ಯೋಜನೆಯ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP