
ನವದೆಹಲಿ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಿದರು.
ನಿಖರವಾಗಿ 82 ವರ್ಷಗಳ ಹಿಂದೆ, 1943ರ ಡಿಸೆಂಬರ್ 30ರಂದು, ನೇತಾಜಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಧೈರ್ಯ ಹಾಗೂ ಶೌರ್ಯದಿಂದ ಹಾರಿಸಿದ ಐತಿಹಾಸಿಕ ಘಟನೆಯನ್ನು ಪ್ರಧಾನಿ ಮೋದಿ ಸ್ಮರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “1943ರ ಡಿಸೆಂಬರ್ 30ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್‌ನಲ್ಲಿ ಧೈರ್ಯ ಮತ್ತು ಶೌರ್ಯದಿಂದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆ ಕ್ಷಣವು ಸ್ವಾತಂತ್ರ್ಯ ಕೇವಲ ಆಕಾಂಕ್ಷೆಯಿಂದ ಹುಟ್ಟುವುದಿಲ್ಲ ಶಕ್ತಿ, ಕಠಿಣ ಪರಿಶ್ರಮ, ನ್ಯಾಯ ಮತ್ತು ಸಂಘಟಿತ ಸಂಕಲ್ಪದಿಂದಲೇ ಅದು ರೂಪುಗೊಳ್ಳುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ” ಎಂದು ಹೇಳಿದ್ದಾರೆ.
ಈ ಸಂದೇಶದೊಂದಿಗೆ ಪ್ರಧಾನಿ ಮೋದಿ ಅವರು ಒಂದು ಸಂಸ್ಕೃತ ಸುಭಾಷಿತವನ್ನೂ ಹಂಚಿಕೊಂಡಿದ್ದಾರೆ.
“ಶಕ್ತಿಯ ಮೂಲ ಸ್ವಾತಂತ್ರ್ಯ,
ಶ್ರಮದ ಮೂಲ ವೈಭವ;
ಉತ್ತಮ ರಾಜ್ಯದ ಮೂಲ ನ್ಯಾಯ,
ಮಹಾನ್ ಶಕ್ತಿಯ ಮೂಲ ಸಂಘಟನೆ.”
ಈ ಸುಭಾಷಿತದ ಅರ್ಥವನ್ನು ವಿವರಿಸಿದ ಪ್ರಧಾನಿ, ಸ್ವಾತಂತ್ರ್ಯದ ಬೇರು ಶಕ್ತಿಯಲ್ಲಿ, ಸಮೃದ್ಧಿಯ ಬೇರು ಕಠಿಣ ಪರಿಶ್ರಮದಲ್ಲಿ, ಉತ್ತಮ ಆಡಳಿತದ ಬೇರು ನ್ಯಾಯದಲ್ಲಿ ಹಾಗೂ ಮಹಾನ್ ರಾಷ್ಟ್ರಶಕ್ತಿಯ ಬೇರು ಸಂಘಟಿತ ಶಕ್ತಿಯಲ್ಲಿ ಅಡಗಿದೆ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಘಟನೆ ಎರಡನೇ ಮಹಾಯುದ್ಧದ ಕಾಲಘಟ್ಟದಲ್ಲಿ ಸಂಭವಿಸಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ಫೌಜ್ ಜಪಾನಿನ ಸೇನೆಯ ಸಹಾಯದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡು, ಪೋರ್ಟ್ ಬ್ಲೇರ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಆ ಪ್ರದೇಶವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತೀಯ ಭೂಭಾಗವೆಂದು ಘೋಷಿಸಿತ್ತು. ಈ ಘಟನೆ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa