ನೌಕಾಯಾನ ‘ಕೌಂಡಿನ್ಯಾ’ ಪೋರಬಂದರ್‌ನಿಂದ ಓಮನ್‌ಗೆ ಚೊಚ್ಚಲ ಸಮುದ್ರಯಾನ
ನವದೆಹಲಿ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತದ ಪ್ರಾಚೀನ ಹಡಗು ನಿರ್ಮಾಣ ಮತ್ತು ಕಡಲ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದೊಂದಿಗೆ ಭಾರತೀಯ ನೌಕಾಪಡೆಯ ಪ್ರಾಚೀನ ನೌಕಾಯಾನ ಹಡಗು ‘ಐಎನ್‌ಎಸ್‌ವಿ ಕೌಂಡಿನ್ಯಾ’ ಸೋಮವಾರ ಗುಜರಾತ್‌ನ ಪೋರಬಂದರ್‌ನಿಂದ ತನ್ನ ಚೊಚ್ಚಲ ಸಮುದ್ರಯಾನವನ್ನು ಆರ
Koundinya


ನವದೆಹಲಿ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತದ ಪ್ರಾಚೀನ ಹಡಗು ನಿರ್ಮಾಣ ಮತ್ತು ಕಡಲ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದೊಂದಿಗೆ ಭಾರತೀಯ ನೌಕಾಪಡೆಯ ಪ್ರಾಚೀನ ನೌಕಾಯಾನ ಹಡಗು ‘ಐಎನ್‌ಎಸ್‌ವಿ ಕೌಂಡಿನ್ಯಾ’ ಸೋಮವಾರ ಗುಜರಾತ್‌ನ ಪೋರಬಂದರ್‌ನಿಂದ ತನ್ನ ಚೊಚ್ಚಲ ಸಮುದ್ರಯಾನವನ್ನು ಆರಂಭಿಸಿತು.

ಈ ಹಡಗು ಸಾವಿರಾರು ವರ್ಷಗಳಿಂದ ಭಾರತವನ್ನು ವಿಶಾಲ ಹಿಂದೂ ಮಹಾಸಾಗರಕ್ಕೆ ಸಂಪರ್ಕಿಸಿದ್ದ ಐತಿಹಾಸಿಕ ಸಮುದ್ರ ಮಾರ್ಗಗಳನ್ನು ಸಾಂಕೇತಿಕವಾಗಿ ಮರುಪರಿಶೀಲಿಸುತ್ತಾ ಓಮನ್‌ನ ಮಸ್ಕತ್‌ಗೆ ಪ್ರಯಾಣ ಬೆಳೆಸಲಿದೆ.

ಸಂಪೂರ್ಣವಾಗಿ ಸಾಂಪ್ರದಾಯಿಕ ಹೊಲಿಗೆ-ಹಲಗೆ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಈ ಹಡಗು, ಪ್ರಾಚೀನ ಭಾರತೀಯ ಹಡಗುಗಳ ಚಿತ್ರಣ ಮತ್ತು ವಿವರಣೆಗಳಿಂದ ಸ್ಫೂರ್ತಿ ಪಡೆದಿದೆ. ಸಮಕಾಲೀನ ಹಡಗುಗಳಿಗಿಂತ ಭಿನ್ನವಾಗಿ, ಇದರ ಮರದ ಹಲಗೆಗಳನ್ನು ತೆಂಗಿನ ನಾರಿನ ಹಗ್ಗದಿಂದ ಹೊಲಿಯಲಾಗಿದ್ದು, ನೈಸರ್ಗಿಕ ರಾಳದಿಂದ ಮುಚ್ಚಲಾಗಿದೆ. ಇದು ಭಾರತದ ಕರಾವಳಿ ಪ್ರದೇಶಗಳಲ್ಲಿ ಮತ್ತು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಬಳಕೆಯಲ್ಲಿದ್ದ ಪುರಾತನ ಹಡಗು ನಿರ್ಮಾಣ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಈ ತಂತ್ರಜ್ಞಾನವು ಆಧುನಿಕ ಸಂಚರಣೆ ಮತ್ತು ಲೋಹಶಾಸ್ತ್ರದ ಅಭಿವೃದ್ಧಿಗೆ ಬಹಳ ಹಿಂದೆಯೇ ಭಾರತೀಯ ನಾವಿಕರು ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದವರೆಗೆ ದೀರ್ಘ ಸಮುದ್ರಯಾನ ನಡೆಸಲು ನೆರವಾಗಿತ್ತು.

ಈ ಯೋಜನೆಯನ್ನು ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಹಾಗೂ ಹೊಡಿ ಇನ್ನೋವೇಷನ್ಸ್ ನಡುವಿನ ತ್ರಿಪಕ್ಷೀಯ ತಿಳುವಳಿಕೆ ಒಪ್ಪಂದದಡಿ ಆರಂಭಿಸಲಾಗಿದ್ದು, ಇದು ಭಾರತದ ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಮರುಶೋಧಿಸಿ ಪುನರುಜ್ಜೀವನಗೊಳಿಸುವ ರಾಷ್ಟ್ರೀಯ ಪ್ರಯತ್ನದ ಭಾಗವಾಗಿದೆ.

ಮಾಸ್ಟರ್ ಶಿಪ್‌ರೈಟ್ ಬಾಬು ಶಂಕರನ್ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾದ ಈ ಹಡಗು ಸಂಪೂರ್ಣವಾಗಿ ಸಮುದ್ರಯಾನಕ್ಕೆ ಯೋಗ್ಯವಾಗಿದ್ದು, ಮುಕ್ತ ಸಾಗರದಲ್ಲಿಯೂ ನೌಕಾಯಾನ ನಡೆಸುವ ಸಾಮರ್ಥ್ಯ ಹೊಂದಿದೆ. ಪ್ರಾಚೀನ ಕಾಲದಲ್ಲಿ ಭಾರತದಿಂದ ಆಗ್ನೇಯ ಏಷ್ಯಾಕ್ಕೆ ಸಮುದ್ರಯಾನ ನಡೆಸಿದರೆಂದು ನಂಬಲಾಗುವ ಪೌರಾಣಿಕ ನಾವಿಕ ಕೌಂಡಿನ್ಯ ಅವರ ಹೆಸರನ್ನು ಈ ಹಡಗಿಗೆ ಇಡಲಾಗಿದೆ.

ಸುಮಾರು 2000 ವರ್ಷಗಳಷ್ಟು ಹಳೆಯ ತಂತ್ರಜ್ಞಾನ ಆಧಾರಿತವಾಗಿ ನಿರ್ಮಿಸಲಾದ ಈ ಹಡಗು, ಪೋರಬಂದರ್‌ನಿಂದ ಓಮನ್‌ನ ಮಸ್ಕತ್‌ವರೆಗೆ ಸುಮಾರು 1400 ಕಿಲೋಮೀಟರ್ (750 ನಾಟಿಕಲ್ ಮೈಲು) ದೂರವನ್ನು 15 ದಿನಗಳಲ್ಲಿ ಕ್ರಮಿಸಲಿದೆ. 65 ಅಡಿ ಉದ್ದ, 22 ಅಡಿ ಅಗಲ, 13 ಅಡಿ ಎತ್ತರ, 50 ಟನ್ ತೂಕ ಹೊಂದಿರುವ ಈ ಹಡಗು 16 ನಾವಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಇಂದು ನಡೆದ ಸಮಾರಂಭದಲ್ಲಿ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಓಮನ್ ಸುಲ್ತಾನರ ರಾಯಭಾರ ಕಚೇರಿಯ ರಾಯಭಾರಿ ಇಸ್ಸಾ ಸಲೇಹ್ ಅಬ್ದುಲ್ ಸಲೇಹ್ ಅಲ್ ಶಿಬಾನಿ ಸಹ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande