79 ಸಾವಿರ ಕೋಟಿ ರೂ.ಗಳ ರಕ್ಷಣಾ ಸಾಮಗ್ರಿ ಖರೀದಿಗೆ ಕೇಂದ್ರದ ಒಪ್ಪಿಗೆ
ನವದೆಹಲಿ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮೂರು ಸಶಸ್ತ್ರ ಪಡೆಗಳ ಕಾರ್ಯಾಚರಣಾ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಶಸ್ತ್ರಾಸ್ತ್ರಗಳು, ಯುದ್ಧೋಪಕರಣಗಳು ಮತ್ತು ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳ ಖರೀದಿಗೆ ಕೇಂದ್ರ ಸರ್ಕಾರವು 79,000 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ರಕ್ಷ
MOD


ನವದೆಹಲಿ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮೂರು ಸಶಸ್ತ್ರ ಪಡೆಗಳ ಕಾರ್ಯಾಚರಣಾ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಶಸ್ತ್ರಾಸ್ತ್ರಗಳು, ಯುದ್ಧೋಪಕರಣಗಳು ಮತ್ತು ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳ ಖರೀದಿಗೆ ಕೇಂದ್ರ ಸರ್ಕಾರವು 79,000 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ ನಿರ್ಧಾರದಿಂದ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಯುದ್ಧ ಸನ್ನದ್ಧತೆ, ಕಾರ್ಯಾಚರಣಾ ಸಾಮರ್ಥ್ಯ ಮತ್ತು ಆಧುನಿಕೀಕರಣಕ್ಕೆ ವೇಗ ಸಿಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸಭೆಯಲ್ಲಿ ಸೇನೆಗೆ ಸಂಬಂಧಿಸಿದಂತೆ ಟಿ-90 ಮುಖ್ಯ ಯುದ್ಧ ಟ್ಯಾಂಕ್‌ಗಳ ದುರಸ್ತಿ, ಮಿ-17 ಹೆಲಿಕಾಪ್ಟರ್‌ಗಳ ಮಧ್ಯಾವಧಿ ಉನ್ನತೀಕರಣ, ಫಿರಂಗಿ ಘಟಕಗಳಿಗೆ ಲೂಯಿಟರ್ ಯುದ್ಧಸಾಮಗ್ರಿ ವ್ಯವಸ್ಥೆಗಳು, ಕಡಿಮೆ ಎತ್ತರದ ಗುರಿ ಪತ್ತೆ ಮಾಡುವ ಹಗುರ ರಾಡಾರ್‌ಗಳು, ಪಿನಾಕಾ ಬಹು ಉಡಾವಣಾ ರಾಕೆಟ್ ವ್ಯವಸ್ಥೆಗೆ ದೀರ್ಘ-ಶ್ರೇಣಿಯ ಮಾರ್ಗದರ್ಶಿತ ರಾಕೆಟ್‌ಗಳು ಹಾಗೂ ಇಂಟಿಗ್ರೇಟೆಡ್ ಡ್ರೋನ್ ಪತ್ತೆ–ಪ್ರತಿಬಂಧಕ ವ್ಯವಸ್ಥೆ (ಎಂಕೆ-II) ಖರೀದಿಗೆ ಒಪ್ಪಿಗೆ ನೀಡಲಾಗಿದೆ.

ನೌಕಾಪಡೆಯ ಸಾಮರ್ಥ್ಯ ವೃದ್ಧಿಗಾಗಿ ಬೊಲ್ಲಾರ್ಡ್ ಪುಲ್ ಟಗ್‌ಗಳು, ಹೈ ಫ್ರೀಕ್ವೆನ್ಸಿ ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೋ ಮ್ಯಾನ್‌ಪ್ಯಾಕ್‌ಗಳು ಮತ್ತು ಹೈ ಆಲ್ಟಿಟ್ಯೂಡ್ ಲಾಂಗ್ ರೇಂಜ್ ರಿಮೋಟ್ಲಿ ಪೈಲಟೆಡ್ ಏರ್‌ಕ್ರಾಫ್ಟ್ ಸಿಸ್ಟಮ್ ಖರೀದಿಗೆ ಅಗತ್ಯ ಅನುಮೋದನೆ ದೊರೆತಿದೆ. ಈ ವ್ಯವಸ್ಥೆಗಳು ಬಂದರುಗಳಲ್ಲಿ ನೌಕಾ ಹಡಗುಗಳ ಸುರಕ್ಷಿತ ಚಲನೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿರಂತರ ಗುಪ್ತಚರ–ಕಣ್ಗಾವಲು ಕಾರ್ಯಾಚರಣೆಗೆ ನೆರವಾಗಲಿವೆ.

ಭಾರತೀಯ ವಾಯುಪಡೆಯಿಗಾಗಿ ಸ್ವಯಂಚಾಲಿತ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ರೆಕಾರ್ಡಿಂಗ್ ವ್ಯವಸ್ಥೆ, ಅಸ್ಟ್ರಾ ಎಂಕೆ-II ದೀರ್ಘ-ಶ್ರೇಣಿಯ ಕ್ಷಿಪಣಿಗಳು, ಎಲ್‌ಸಿಎ ತೇಜಸ್‌ಗಾಗಿ ಪೂರ್ಣ ಮಿಷನ್ ಸಿಮ್ಯುಲೇಟರ್ ಹಾಗೂ ಸ್ಪೈಸ್–1000 ದೀರ್ಘ-ಶ್ರೇಣಿಯ ಮಾರ್ಗದರ್ಶನ ಕಿಟ್ ಖರೀದಿಗೂ ಡಿಎಸಿ ಒಪ್ಪಿಗೆ ನೀಡಿದೆ. ಇವು ವಾಯುಪಡೆಯ ನಿಖರ ದಾಳಿ ಮತ್ತು ವಿಮಾನ ಸುರಕ್ಷತಾ ಸಾಮರ್ಥ್ಯವನ್ನು ಹೆಚ್ಚಿಸಲಿವೆ.

ಇದೇ ಸಂದರ್ಭದಲ್ಲಿ, ಆಪರೇಷನ್ ಸಿಂಧೂರ್ ನಂತರ ನೀಡಲಾಗಿದ್ದ ತುರ್ತು ಖರೀದಿ ಅಧಿಕಾರಗಳನ್ನು 2026ರ ಜನವರಿ 15ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಸಶಸ್ತ್ರ ಪಡೆಗಳು ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯೋಪಕರಣಗಳನ್ನು ತ್ವರಿತವಾಗಿ ಖರೀದಿಸಲು ಅವಕಾಶ ದೊರೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande