ಬಾಂಗ್ಲಾದೇಶ ಚುನಾವಣೆ ; ‘ಫ್ಯಾಸಿಸ್ಟ್’ ವ್ಯಕ್ತಿಗಳ ಸ್ಪರ್ಧೆಗೆ ಅವಕಾಶ ಇಲ್ಲ
ಢಾಕಾ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ “ಫ್ಯಾಸಿಸ್ಟ್” ವ್ಯಕ್ತಿಗಳಿಗೆ ಯಾವುದೇ ಸಂದರ್ಭದಲ್ಲೂ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಅಂತಹ ವ್ಯಕ್ತಿಗಳು ನಾಮಪತ್ರಗಳನ್ನು ಖರೀದಿಸ
Bangla ec


ಢಾಕಾ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ “ಫ್ಯಾಸಿಸ್ಟ್” ವ್ಯಕ್ತಿಗಳಿಗೆ ಯಾವುದೇ ಸಂದರ್ಭದಲ್ಲೂ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಅಂತಹ ವ್ಯಕ್ತಿಗಳು ನಾಮಪತ್ರಗಳನ್ನು ಖರೀದಿಸಲು ಅಥವಾ ಸಲ್ಲಿಸಲು ಯತ್ನಿಸಿದರೆ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಶಾಂತಿಯನ್ನು ಪ್ರಚೋದಿಸುವಲ್ಲಿ ತೊಡಗಿರುವ ಹಲವಾರು ಅಭ್ಯರ್ಥಿಗಳನ್ನು ಈಗಾಗಲೇ ನಾಮಪತ್ರ ಸಲ್ಲಿಸುವುದರಿಂದ ನಿರ್ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ದಿ ಡೈಲಿ ಸ್ಟಾರ್ ವರದಿ ಪ್ರಕಾರ, ಚುನಾವಣೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಉನ್ನತ ಮಟ್ಟದ ಭದ್ರತಾ ಸಭೆಯಲ್ಲಿ ಈ ಸಂಬಂಧ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸಭೆಗೆ ಪರಿಚಿತ ಮೂಲವೊಂದು, “ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ” ಎಂದು ತಿಳಿಸಿದೆ.

ಸಭೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ)ದ ಕಾರ್ಯಕಾರಿ ಅಧ್ಯಕ್ಷ ತಾರಿಕ್ ರೆಹಮಾನ್ ಅವರ ಭದ್ರತೆಯ ವಿಚಾರವೂ ಚರ್ಚೆಗೆ ಬಂದಿದ್ದು, ಢಾಕಾ ಸೇರಿದಂತೆ ರಾಜಧಾನಿಯ ಹೊರಗಿನ ಅವರ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಸಂಬಂಧಿತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಇದಕ್ಕೆ ಜೊತೆಗೆ, “ಇಂಕ್ವಿಲಾಬ್ ಮಂಚ್ ಹೊಸ ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ” ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಾಂಗೀರ್ ಆಲಂ ಚೌಧರಿ, “ಯಾವುದೇ ಸಂದರ್ಭದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ. ಇದಕ್ಕಾಗಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ” ಎಂದು ಹೇಳಿದರು. ಎಲ್ಲಾ ರಾಜಕೀಯ ಪಕ್ಷಗಳು ಫ್ಯಾಸಿಸ್ಟ್ ಅಂಶಗಳಿಂದ ದೂರವಿರಬೇಕೆಂದು ಅವರು ಕಠಿಣ ಎಚ್ಚರಿಕೆ ನೀಡಿದರು.

ಡಿಸೆಂಬರ್ 13ರಿಂದ 26ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 9,993 ಜನರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಅವಧಿಯಲ್ಲಿ ನಡೆದ ದಾಳಿಗಳ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಗ್ರೆನೇಡ್‌ಗಳು, ಮಾರ್ಟರ್ ಶೆಲ್‌ಗಳು, ಗನ್ ಪೌಡರ್, ಪಟಾಕಿಗಳು ಹಾಗೂ ಬಾಂಬ್ ತಯಾರಿಕಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 26ರಂದು ಜಿಲ್ಲಾ ಚುನಾವಣಾ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಶಂಕಿತ ರುಬೆಲ್‌ನನ್ನು ಲಕ್ಷ್ಮಿಪುರ ಪೊಲೀಸರು ಬಂಧಿಸಿದ್ದಾರೆ. ಖುಲ್ನಾ ನಗರದಲ್ಲಿ ಜಾತಿಯಾ ಶ್ರಮಶಕ್ತಿ (ಕೇಂದ್ರ ಸಂಘಟಕ) ಸಂಘಟಕ ಮೊತಾಲಿಬ್ ಸಿಕ್ದರ್ (42) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಮಿಮ್ ಅಲಿಯಾಸ್ ಧಾಕಯಾ ಶಮಿಮ್ ಸೇರಿದಂತೆ ಮೂವರು ಶಂಕಿತರನ್ನು ಬಂಧಿಸಲಾಗಿದೆ. ಇದೇ ವೇಳೆ, ಮೈಮೆನ್‌ಸಿಂಗ್‌ನಲ್ಲಿ ನಡೆದ ದೀಪು ಚಂದ್ರ ಹತ್ಯೆ ಪ್ರಕರಣದಲ್ಲಿ 18 ಶಂಕಿತರನ್ನು ಬಂಧಿಸಲಾಗಿದೆ ಎಂದು ಗೃಹ ಸಲಹೆಗಾರ ಚೌಧರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande