
ನವದೆಹಲಿ, 24 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಡಿಸೆಂಬರ್ 25) ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ, ಮಾಜಿ ಪ್ರಧಾನಿ ಹಾಗೂ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಅಂಗವಾಗಿ ‘ರಾಷ್ಟ್ರ ಪ್ರೇರಣಾ ಸ್ಥಳ’ವನ್ನು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿರುವಂತೆ, ‘ರಾಷ್ಟ್ರ ಪ್ರೇರಣಾ ಸ್ಥಳ’ವು ಸ್ವತಂತ್ರ ಭಾರತದ ಪ್ರಮುಖ ರಾಷ್ಟ್ರನಾಯಕರ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ಶಾಶ್ವತ ರಾಷ್ಟ್ರೀಯ ಸ್ಮಾರಕ ಸಂಕೀರ್ಣವಾಗಿದೆ. ಸುಮಾರು 230 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಂಕೀರ್ಣವು 65 ಎಕರೆ ವಿಸ್ತೀರ್ಣದಲ್ಲಿ ಹರಡಿದೆ.
ಸ್ಮಾರಕ ಸಂಕೀರ್ಣದಲ್ಲಿ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ತಲಾ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಕಮಲಾಕೃತಿಯಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಸಂಗ್ರಹಾಲಯವೂ ಇಲ್ಲಿದ್ದು, ಇದು ಸುಮಾರು 98 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ.
ಸಂಗ್ರಹಾಲಯದಲ್ಲಿ ಡಿಜಿಟಲ್ ಹಾಗೂ ಅನುಭವಾಧಾರಿತ ತಂತ್ರಜ್ಞಾನಗಳ ಮೂಲಕ ಭಾರತದ ರಾಷ್ಟ್ರೀಯ ಪಯಣ, ನಾಯಕತ್ವ ಪರಂಪರೆ ಮತ್ತು ಮೌಲ್ಯಾಧಾರಿತ ರಾಜಕೀಯ ಚಿಂತನೆಗಳನ್ನು ಪ್ರಸ್ತುತಪಡಿಸಲಾಗಿದೆ. ಅಟಲ್ ಜಿಯವರ ಜನ್ಮದಿನದಂದು ಈ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸುವುದು, ಅವರ ಆದರ್ಶಗಳು ಮತ್ತು ರಾಷ್ಟ್ರಸೇವೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa