
ಶ್ರೀಹರಿಕೋಟಾ, 24 ಡಿಸೆಂಬರ್(ಹಿ.ಸ.) :
ಆ್ಯಂಕರ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ಐತಿಹಾಸಿಕ ಸಾಧನೆ ದಾಖಲಿಸಿದೆ. ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಲ್‌ವಿಎಂ–3 ಮೂಲಕ ಅಮೆರಿಕದ ಎಎಸ್ಟಿ ಸ್ಪೇಸ್‌ಮೊಬೈಲ್ ಕಂಪನಿಯ ‘ಬ್ಲೂಬರ್ಡ್ ಬ್ಲಾಕ್–2’ ಸಂವಹನ ಉಪಗ್ರಹವನ್ನು ಬೆಳಿಗ್ಗೆ 8.55ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಎಲ್‌ವಿಎಂ–3 ರಾಕೆಟ್‌ನ ಆರನೇ ಕಾರ್ಯಾಚರಣಾ ಹಾರಾಟವಾಗಿದ್ದು, ಈ ಮಿಷನ್‌ನ್ನು ಎಲ್‌ವಿಎಂ3–ಎಂ–6 ಎಂದು ಕರೆಯಲಾಗಿದೆ.
ಈ ಉಡಾವಣೆಯು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಹಾಗೂ ಎಎಸ್ಟಿ ಸ್ಪೇಸ್‌ಮೊಬೈಲ್ ನಡುವಿನ ವಾಣಿಜ್ಯ ಒಪ್ಪಂದದ ಭಾಗವಾಗಿದೆ. ಇದರೊಂದಿಗೆ ಲೋ ಅರ್ಥ್ ಆರ್ಬಿಟ್‌ನಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ವಾಣಿಜ್ಯ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ನಿಯೋಜಿಸಿದ ಸಾಧನೆ ಇಸ್ರೋಗೆ ದೊರೆತಿದೆ.
‘ಬ್ಲೂಬರ್ಡ್ ಬ್ಲಾಕ್–2’ ಉಪಗ್ರಹವು ಎಎಸ್ಟಿ ಸ್ಪೇಸ್‌ಮೊಬೈಲ್ ಸಂಸ್ಥೆಯ ಮುಂದಿನ ತಲೆಮಾರಿನ ಸಂವಹನ ಉಪಗ್ರಹ ಸರಣಿಗೆ ಸೇರಿದ್ದು, ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದಲೇ ಉನ್ನತ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಸಾಮರ್ಥ್ಯ ಹೊಂದಿದೆ.
ಉಪಗ್ರಹದ ಪ್ರಮುಖ ವೈಶಿಷ್ಟ್ಯಗಳು:
ತೂಕ: ಸುಮಾರು 6,100 ರಿಂದ 6,500 ಕಿಲೋಗ್ರಾಂ. ಭಾರತದಿಂದ ಉಡಾವಣೆಗೊಂಡ ಅತ್ಯಂತ ಭಾರೀ ಪೇಲೋಡ್ ಇದಾಗಿದೆ.
ಗಾತ್ರ: 223 ಚದರ ಮೀಟರ್ (ಸುಮಾರು 2,400 ಚದರ ಅಡಿ) ವಿಸ್ತೀರ್ಣದ ಫೇಜ್ಡ್ ಅರೆ ಆಂಟೆನಾ ಹೊಂದಿದೆ.
ಆರ್ಬಿಟ್: ಲೋ ಅರ್ಥ್ ಆರ್ಬಿಟ್‌ನಲ್ಲಿ ಸ್ಥಾಪನೆ.
ಸಾಮರ್ಥ್ಯ: 4ಜಿ ಮತ್ತು 5ಜಿ ನೆಟ್‌ವರ್ಕ್‌ಗಳಿಗೆ ಬೆಂಬಲ.
ವೇಗ: ಗರಿಷ್ಠ 120 ಎಂಬಿಪಿಎಸ್ ಡೇಟಾ ವೇಗ. ವಾಯ್ಸ್ ಕಾಲ್, ವಿಡಿಯೋ ಕಾಲ್, ಮೆಸೇಜಿಂಗ್, ಸ್ಟ್ರೀಮಿಂಗ್ ಹಾಗೂ ಡೇಟಾ ಸೇವೆಗಳಿಗೆ ಸಹಾಯ.
ಉದ್ದೇಶ: ಜಗತ್ತಿನಾದ್ಯಂತ 24×7 ಸಂಪರ್ಕ ಒದಗಿಸುವುದು. ದೂರದ ಗ್ರಾಮೀಣ ಪ್ರದೇಶಗಳು, ಪರ್ವತ ಪ್ರದೇಶಗಳು ಹಾಗೂ ಸಮುದ್ರ ಮಧ್ಯದಲ್ಲೂ ಮೊಬೈಲ್ ನೆಟ್‌ವರ್ಕ್ ತಲುಪಿಸುವುದು.
ಈ ಯಶಸ್ವಿ ಉಡಾವಣೆಯೊಂದಿಗೆ ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಇಸ್ರೋದ ವಿಶ್ವಾಸಾರ್ಹತೆ ಮತ್ತಷ್ಟು ಬಲಗೊಂಡಿದ್ದು, ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa