೨೦೨೫- ಕಲಾಸೇವೆಯ ದಿಗ್ಗಜರನ್ನು ಕಳೆದುಕೊಂಡ ಕರ್ನಾಟಕ
ಬೆಂಗಳೂರು, 24 ಡಿಸೆಂಬರ್ (ಹಿ.ಸ.) : ಆ್ಯಂಕರ್ : 2025ರ ಕೊನೆಯ ತಿಂಗಳಿನಲ್ಲಿ ನಿಂತು ಹಿಂದಿರುಗಿ ನೋಡಿದರೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನುಂಟುಮಾಡಿದ ವರ್ಷವಾಗಿತ್ತು. ದಶಕಗಳ ಕಾಲ ಕಲಾಸೇವೆಯಲ್ಲಿ ತೊಡಗಿದ್ದ ಹಿರಿಯ ಕಲಾವಿದರು, ಹಾಸ್ಯನಟರು, ಪೋಷಕ ಪಾತ್ರಗಳ ಕಲಾವಿದರು, ರಂಗಭೂಮಿ ದಿ
KFI


ಬೆಂಗಳೂರು, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : 2025ರ ಕೊನೆಯ ತಿಂಗಳಿನಲ್ಲಿ ನಿಂತು ಹಿಂದಿರುಗಿ ನೋಡಿದರೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನುಂಟುಮಾಡಿದ ವರ್ಷವಾಗಿತ್ತು. ದಶಕಗಳ ಕಾಲ ಕಲಾಸೇವೆಯಲ್ಲಿ ತೊಡಗಿದ್ದ ಹಿರಿಯ ಕಲಾವಿದರು, ಹಾಸ್ಯನಟರು, ಪೋಷಕ ಪಾತ್ರಗಳ ಕಲಾವಿದರು, ರಂಗಭೂಮಿ ದಿಗ್ಗಜರು, ಕಿರುತೆರೆ ಹಾಗೂ ಉದಯೋನ್ಮುಖ ಪ್ರತಿಭೆಗಳು ಒಂದೊಂದಾಗಿ ನಮ್ಮನ್ನಗಲಿದ್ದು, ಸಿನಿಲೋಕವನ್ನು ಶೋಕ ಸಾಗರದಲ್ಲಿ ಮುಳುಗಿಸಿತು.

ನಟ-ನಟಿಯರು ಮಾತ್ರವಲ್ಲದೆ, ನಿರ್ದೇಶಕರು, ಸಂಭಾಷಣಾಕಾರರು, ರಂಗಭೂಮಿ ಕಲಾವಿದರು ಹಾಗೂ ತಂತ್ರಜ್ಞರನ್ನು ಕಳೆದುಕೊಂಡು 2025ರ ವರ್ಷವು “ಮೌನದ ಶೋಕಪಟ”ವಾಗಿ ದಾಖಲಾಗಿದೆ.

ಅಭಿಯನ ಸರಸ್ವತಿ ಬಿ. ಸರೋಜಾದೇವಿ ಅಗಲಿಕೆ

ಬಹುಭಾಷಾ ಚಿತ್ರರಂಗದ ಶಿಖರಸ್ತಂಭರಾಗಿದ್ದ, “ಅಭಿನಯ ಸರಸ್ವತಿ” ಎಂದೇ ಖ್ಯಾತಿ ಪಡೆದ ಬಿ. ಸರೋಜಾದೇವಿ ಅವರು ಜುಲೈ 14ರಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು.

1938 ಜನವರಿ 7ರಂದು ಜನಿಸಿದ ಅವರು, ಕೇವಲ 17ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿ, ಮಹಾಕವಿ ಕಾಳಿದಾಸ ಚಿತ್ರದ ಮೂಲಕವೇ ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕಿ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿನ ದಿಗ್ಗಜರ ಜತೆ ತೆರೆ ಹಂಚಿಕೊಂಡಿದ್ದ ಸರೋಜಾದೇವಿ ಅವರ ಅಗಲಿಕೆ ಭಾರತೀಯ ಸಿನಿಲೋಕಕ್ಕೆ ಭರಿಸಲಾಗದ ನಷ್ಟವಾಯಿತು.

ಹಾಸ್ಯದ ಕಂಬ ಉರುಳಿದ ಕ್ಷಣಗಳು

ನವೆಂಬರ್ 30ರಂದು ಕ್ಯಾನ್ಸರ್‌ಗೆ ತುತ್ತಾಗಿ ನಿಧನರಾದ ಎಂ.ಎಸ್. ಉಮೇಶ್ ಕನ್ನಡ ಚಿತ್ರರಂಗದ ಹಾಸ್ಯದ ಚಿನ್ನದ ಅಧ್ಯಾಯ.

ಗುರು ಶಿಷ್ಯರು, ಹಾಲು ಜೇನು, ಅಪೂರ್ವ ಸಂಗಮ ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ರಂಗಭೂಮಿಯಲ್ಲೂ ಜನಮನ ಗೆದ್ದ ಕಲಾವಿದ.

ಇದೇ ಸಾಲಿನಲ್ಲಿ ಜನವರಿ 15ರಂದು ನಿಧನರಾದ ಸರಿಗಮ ವಿಜಿ ಹಾಸ್ಯ ಮತ್ತು ರಂಗಭೂಮಿಯ ಮತ್ತೊಂದು ಅಮೂಲ್ಯ ಹೆಸರು. 269ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 80 ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅವರು, 2,400ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಪೋಷಕ ಪಾತ್ರಗಳ ಶಕ್ತಿಸ್ತಂಭಗಳು ಅಗಲಿಕೆ

ಏಪ್ರಿಲ್ 14ರಂದು ವಯೋಸಹಜ ಕಾಯಿಲೆಯಿಂದ ನಿಧನರಾದ ಬ್ಯಾಂಕ್ ಜನಾರ್ಧನ್ ಅವರು ಕನ್ನಡ ಸಿನಿಲೋಕದ ಅತ್ಯಂತ ನಂಬಿಕಸ್ಥ ಪೋಷಕ ನಟ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರ ನೆನಪಿನಲ್ಲಿ ಉಳಿದವರು.

ಕೆಜಿಎಫ್ ಚಿತ್ರದ ‘ಚಾಚಾ’ ಪಾತ್ರದಿಂದ ಇತ್ತೀಚಿನ ತಲೆಮಾರಿಗೆ ಪರಿಚಿತರಾಗಿದ್ದ ಹರೀಶ್ ರಾಯ್ ಅವರು ನವೆಂಬರ್ 6ರಂದು ಕ್ಯಾನ್ಸರ್‌ನಿಂದ ನಿಧನರಾದರು.

ಅದೇ ರೀತಿ, ಆಗಸ್ಟ್ 25ರಂದು ಬ್ರೈನ್ ಹೆಮರೇಜ್‌ಗೆ ತುತ್ತಾಗಿ ಅಗಲಿದ ದಿನೇಶ್ ಮಂಗಳೂರು ನಟನಾಗಿ ಮಾತ್ರವಲ್ಲದೆ, ಕಲಾ ನಿರ್ದೇಶಕರಾಗಿಯೂ ಚಂದನವನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು.

ರಂಗಭೂಮಿ–ಸಿನಿಮಾ ಸಂಗಮದ ನಷ್ಟ

ಅಕ್ಟೋಬರ್ 13ರಂದು ಹೃದಯಘಾತದಿಂದ ನಿಧನರಾದ ರಾಜು ತಾಳಿಕೋಟೆ ರಂಗಭೂಮಿ ಹಾಗೂ ಸಿನಿಲೋಕದ ಜನಪ್ರಿಯ ಹಾಸ್ಯ ಕಲಾವಿದ. ‘ಕಲಿಯುಗದ ಕುಡುಕ’ ನಾಟಕದ ಮೂಲಕ ಮನೆಮಾತಾಗಿದ್ದ ಅವರು, ಬಿಗ್ ಬಾಸ್ ಕನ್ನಡದಲ್ಲೂ ಭಾಗವಹಿಸಿದ್ದರು.

ಸೆಪ್ಟೆಂಬರ್ 29ರಂದು ನಿಧನರಾದ ರಂಗಭೂಮಿ ದಿಗ್ಗಜ ಯಶವಂತ ಸರದೇಶಪಾಂಡೆ ಅವರು ನಾಟಕ, ಧಾರಾವಾಹಿ, ಚಲನಚಿತ್ರ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಅಪರೂಪದ ಪ್ರತಿಭೆ.

ಯುವ ಪ್ರತಿಭೆಗಳ ಅಕಾಲಿಕ ನಿರ್ಗಮನ

ಮೇ 12ರಂದು ಹೃದಯಾಘಾತದಿಂದ ನಿಧನರಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರ ಅಗಲಿಕೆ ಚಿತ್ರರಂಗಕ್ಕೆ ಅಘಾತವಾಯಿತು.

ಆಗಸ್ಟ್ 5ರಂದು ಜಾಂಡೀಸ್ ಕಾಯಿಲೆಯಿಂದ ಕೇವಲ 38ನೇ ವಯಸ್ಸಿನಲ್ಲಿ ನಿಧನರಾದ ಯುವ ನಟ ಸಂತೋಷ್ ಬಾಲರಾಜ್ ಚಂದನವನದ ಭರವಸೆಯ ಪ್ರತಿಭೆಯಾಗಿದ್ದರು.

ನವೆಂಬರ್ 22ರಂದು ನಿಧನರಾದ ತಿಥಿ ಚಿತ್ರದ ಗಡ್ಡಪ್ಪ ಎಂದೇ ಖ್ಯಾತರಾದ ಚನ್ನೇಗೌಡ, ಹಾಗೂ ಮೇ 26ರಂದು ಅನಾರೋಗ್ಯದಿಂದ ಅಗಲಿದ ಕಿರುತೆರೆ ನಟ ಶ್ರೀಧರ್ ನಾಯಕ್ ಕೂಡ ಈ ವರ್ಷದ ನೋವಿನ ಅಧ್ಯಾಯದ ಭಾಗವಾಗಿದ್ದಾರೆ.

ಒಟ್ಟಾರೆ,

2025ರ ವರ್ಷ ಕನ್ನಡ ಚಿತ್ರರಂಗಕ್ಕೆ—ಸ್ಮರಣೀಯವಾಗಿದ್ದು ಸಾಧನೆಗಳಿಂದಲ್ಲ, ಬದಲಾಗಿ ಶೋಕ ಮತ್ತು ನಷ್ಟದಿಂದ. ದಿಗ್ಗಜರಿಂದ ಹಿಡಿದು ಯುವ ಪ್ರತಿಭೆಗಳವರೆಗೆ ಅನೇಕ ಕಲಾವಿದರನ್ನು ಕಳೆದುಕೊಂಡ ಈ ವರ್ಷ, ಕಲೆಯ ಅಮರತ್ವವನ್ನು ನೆನಪಿಸುವ ಜೊತೆಗೆ, ಮಾನವ ಬದುಕಿನ ಕ್ಷಣಭಂಗುರತೆಯನ್ನೂ ಮತ್ತೆ ಮತ್ತೆ ಸ್ಮರಿಸಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande