ಜ.೨೯ರಿಂದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ಪ್ರಕಾಶ್ ರಾಜ್ ರಾಯಭಾರಿ
ಬೆಂಗಳೂರು, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ವಭಾವಿ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬಾರಿ ಚಿತ್ರೋತ್ಸವಕ್ಕೆ ಮಹ
Film fest


ಬೆಂಗಳೂರು, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ವಭಾವಿ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬಾರಿ ಚಿತ್ರೋತ್ಸವಕ್ಕೆ ಮಹಿಳಾ ಸಬಲೀಕರಣವೇ ಪ್ರಧಾನ ಥೀಮ್ ಆಗಿರಲಿದೆ.

ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರಾಜ್ ಅವರನ್ನು ಚಿತ್ರೋತ್ಸವದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ವಿಧಾನ ಸೌಧದ ಮುಂಭಾಗದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಬಾರಿಯ ಚಿತ್ರೋತ್ಸವದಲ್ಲಿ ಕನ್ನಡ ಹಾಗೂ ಭಾರತೀಯ ಚಿತ್ರಗಳು ಸೇರಿದಂತೆ 60ಕ್ಕೂ ಹೆಚ್ಚು ದೇಶಗಳ 200ಕ್ಕೂ ಅಧಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಒಟ್ಟಾರೆ 400ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿ ಪೋಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಪ್ರಮುಖ ಪ್ರದರ್ಶನ ನಡೆಯಲಿದ್ದು, ಜೊತೆಗೆ ಡಾ. ರಾಜ್ ಕುಮಾರ್ ಭವನ, ಚಾಮರಾಜಪೇಟೆಯ ಕಲಾವಿದರ ಸಂಘ ಹಾಗೂ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲಿಯೂ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಏಷಿಯನ್, ಭಾರತೀಯ ಹಾಗೂ ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೆ 110ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ. ಈ ಮೂರು ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31, 2025 ಕೊನೆಯ ದಿನಾಂಕವಾಗಿದೆ.

ಕಾನ್ಸ್, ಬರ್ಲಿನ್, ವೆನಿಸ್, ಕಾರ್ಲೋವಿ ವೇರಿ, ಲೊಕಾರ್ನೋ, ರೋಟರ್‌ಡ್ಯಾಮ್, ಬೂಸಾನ್ ಮತ್ತು ಟೊರಂಟೋ ಸೇರಿದಂತೆ ವಿಶ್ವದ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳು ಈ ಬಾರಿ ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿವೆ. ಜೊತೆಗೆ ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶಗಳ ಅತ್ಯುತ್ತಮ ಚಲನಚಿತ್ರಗಳೂ ಪ್ರದರ್ಶನಗೊಳ್ಳಲಿವೆ.

ಪೋಲಿಷ್ ಕಲ್ಚರಲ್ ಸೆಂಟರ್, ಗೋಥೆ ಇನ್ಸ್ಟಿಟ್ಯೂಟ್–ಮ್ಯಾಕ್ಸ್ ಮುಲ್ಲರ್ ಭವನ, ಅಲಿಯಾನ್ಸ್ ಫ್ರಾಂಸೇ–ಫ್ರೆಂಚ್ ಇನ್ಸ್ಟಿಟ್ಯೂಟ್ ಹಾಗೂ ರಾಯಲ್ ಥೈಲ್ಯಾಂಡ್ ಕಾನ್ಸುಲೇಟ್ ಸಹಯೋಗದಲ್ಲಿ ಆಯಾ ದೇಶಗಳ ಪ್ರಮುಖ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಪೋಲೆಂಡ್‌ನ ಖ್ಯಾತ ನಿರ್ದೇಶಕ ಅಂದ್ರೇಜ್ ವಾಜ್ಡಾ ಅವರ ಶತಮಾನೋತ್ಸವದ ಅಂಗವಾಗಿ ಆಯ್ದ ಚಿತ್ರಗಳ ವಿಶೇಷ ಪುನರಾವಲೋಕನವೂ ಆಯೋಜಿಸಲಾಗಿದೆ. ಜೊತೆಗೆ ಆಫ್ರಿಕಾ ಸಿನಿಮಾಗಳ ಇತಿಹಾಸವನ್ನು ದಾಖಲಿಸುವ ವಿಶೇಷ ಚಲನಚಿತ್ರ ಸರಣಿಯೂ ಚಿತ್ರೋತ್ಸವದ ಭಾಗವಾಗಲಿದೆ.

ಚಿತ್ರೋತ್ಸವದ ಪ್ರಧಾನ ಕೇಂದ್ರದಲ್ಲಿ ಫಿಲಂ ಅಕಾಡೆಮಿಕ್ ಚಟುವಟಿಕೆಗಳಿಗೆ ವಿಶೇಷ ವೇದಿಕೆ ಒದಗಿಸಲಾಗಿದ್ದು, 91 ವರ್ಷಗಳ ಕನ್ನಡ ಚಿತ್ರರಂಗದ ವೈಭವವನ್ನು ಚಿತ್ರಿಸುವ ಛಾಯಾಚಿತ್ರ ಪ್ರದರ್ಶನ ಕೂಡ ಆಯೋಜಿಸಲಾಗಿದೆ.

2025–26 ಸಾಲಿನಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆಯೋಜನೆಗಾಗಿ ಸರ್ಕಾರವು ರೂ.7 ಕೋಟಿ ಅನುದಾನವನ್ನು ಒದಗಿಸಿದೆ. ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪೂರ್ವಭಾವಿ ಸಭೆಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಆಯುಕ್ತ ಹೇಮಂತ್ ನಿಂಬಾಳ್ಕರ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಅಕಾಡೆಮಿ ಸದಸ್ಯರು, ಸಂಘಟನಾ ಸಮಿತಿ ಸದಸ್ಯರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande