ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ವಿಜಯಪುರ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ದಾರೆ. ನೀ
ನೆರವು


ವಿಜಯಪುರ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ದಾರೆ.

ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಇಬ್ಬರು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರು. ಈ ಮಾಹಿತಿ ತಿಳಿದ ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಇಬ್ಬರೂ ವಿದ್ಯಾರ್ಥಿಗಳಿಗೆ ಕೋರ್ಸಿಗೆ ಅಗತ್ಯವಾಗಿರುವ ಕಾಲೇಜು ಪ್ರವೇಶ ಶುಲ್ಕ, ಊಟ ಹಾಗೂ ವಸತಿ ಬೇಕಾಗುವ ಒಟ್ಟು ಮೊತ್ತವನ್ನು ನೀಡಿದ್ದಾರೆ.

ಸಚಿವ ಎಂ‌. ಬಿ. ಪಾಟೀಲ ಅವರು ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದರು.

ತಿಕೋಟಾ ತಾಲೂಕಿನ ಅರಕೇರಿ ಎಲ್. ಟಿ-1ರ ವಿದ್ಯಾರ್ಥಿನಿ ದಿವ್ಯಾ ಹನಮಂತ ರಾಠೋಡ ನೀಟ್ ನಲ್ಲಿ 223424 ರ್ಯಾಂಕ್ ಪಡೆದಿದ್ದು, ಬೆಂಗಳೂರಿನ ದಯಾನಂದ ಸಾಗರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾಳೆ. ಮೂಲತಃ ಸಿಂದಗಿ ತಾಲೂಕಿನ ಹಿಕ್ಕನಗುತ್ತಿಯ ಮತ್ತು ಈಗ ವಿಜಯಪುರ ನಗರದಲ್ಲಿ ವಾಸಿಸುವ ಮಂಜುನಾಥ ಲಕ್ಷ್ಮಣ ಗೊಟಗುಣಕಿ ನೀಟ್ ನಲ್ಲಿ 76372 ರ್ಯಾಂಕ್ ಪಡೆದು, ಚಿತ್ರದುರ್ಗದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ.

ದಿವ್ಯಾ ಹನಮಂತ ರಾಠೋಡಗೆ ಕೋರ್ಸು ಪೂರ್ಣಗೊಳಿಸಲು ಒಟ್ಟು ರೂ. 9,98,484 ಅಗತ್ಯವಿದ್ದು, ಕೋರ್ಸಿನ ಮೊದಲ ವರ್ಷಕ್ಕೆ ಅಗತ್ಯವಾದ ರೂ. 2,49,621 ಹಣದ ಚೆಕ್ ನ್ನು ಸಚಿವರು ವಿತರಿಸಿದರು. ಅದೇ ರೀತಿ ವಿಜಯಪುರ ನಗರದ ನಿವಾಸಿ ಮಂಜುನಾಥ ಗೊಟಗುಣಕಿಗೆ ಕೋರ್ಸು ಪೂರ್ಣಗೊಳಿಸಲು ರೂ. 6.32 ಲಕ್ಷ ಅಗತ್ಯವಿದ್ದು, ಕೊರ್ಸಿನ ಪ್ರಥಮ ವರ್ಷಕ್ಕೆ ಅಗತ್ಯವಾದ ರೂ. 1.58 ಲಕ್ಷದ ಮೊತ್ತದ ಮೊಲದ ಕಂತಿನ ಚೆಕ್ ನ್ನು ವಿತರಿಸಿದರು.

ಬಳಿಕ ಮಾತನಾಡಿದ ಸಚಿವರು, ಬಿ.ಎಲ್.ಡಿ.ಇ ಸಂಸ್ಥೆಯಿಂದ ಈವರೆಗೆ ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ಸರಕಾರಿ ಕೋಟಾದಡಿ ಪಾಸಾದ ಸುಮಾರು ಹತ್ತು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಕೋರ್ಸ್ ಪ್ರವೇಶ ಶುಲ್ಕ, ವಸತಿ ಹಾಗೂ ಊಟದ ಶುಲ್ಕವನ್ನು ನೀಡಲಾಗುತ್ತದೆ. ಇದರಿಂದ ಬಡವರ ಮಕ್ಕಳು ವೈದ್ಯರಾಗುವ ಕನಸಿಗೆ ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ನೆರವಾಗಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೇ, ನೆರವು ಪಡೆದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಸಾಧನೆ ಮಾಡಬೇಕು. ಜನಪರ ವೈದ್ಯರಾಗಿ ರೋಗಿಗಳ ಸೇವೆಯ ಮೂಲಕ ಬಸವನಾಡು ವಿಜಯಪುರ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಬೇಕು ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ರಜಿಸ್ಟ್ರಾರ ಡಾ. ಆರ್. ವಿ ಕುಲಕರ್ಣಿ, ಸಂಸ್ಥೆ ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್. ಎಸ್. ಪಾಟೀಲ, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

ಚೆಕ್ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ದಿವ್ಯಾ ಹನಮಂತ ರಾಠೋಡ, ಮೊದಲಿಗೆ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಒಂದರಿಂದ 5ನೇ ತರಗತಿಯವರೆಗೆ ವಿಜಯಪುರ ನಗರದ ಜ್ಞಾನಜ್ಯೋತಿ ಶಾಲೆಯಲ್ಲಿ ಓದಿದ್ದೇನೆ. 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಯಲ್ಲಿ ಓದಿದ್ದೇನೆ. ತಂದೆ ಹನಮಂತ ರಾಠೋಡ ಅವರಿಗೆ ಮೂರು ವರ್ಷದ ಹಿಂದೆ ಕ್ಯಾನ್ಸರ್ ಆಗಿತ್ತು. ಈಗ ಹೋಟೇಲಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಜ್ಯೋತಿ ಮನೆಗೆಲಸ ಮಾಡುತ್ತಿದ್ದಾರೆ. ಅಣ್ಣ ಅಭಿಷೇಕ ರಾಠೋಡ ಬೆಂಗಳೂರಿನಲ್ಲಿ ಬಿ.ಎಚ್.ಎಂ ಓದುತ್ತಿದ್ದಾನೆ. ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆ. ಸಚಿವರು ಸಹಾಯ ಮಾಡುವ ಮೂಲಕ ವೈದ್ಯಳಾಗಬೇಕೆಂಬ ಕನಸು ನನಸಾಗಿಸುತ್ತಿದ್ದಾರೆ. ಮುಂದೆ ಎಂ.ಡಿ ಓದಿ ಕ್ಯಾನ್ಸರ್ ವೈದ್ಯಳಾಗುವ ಗುರಿ ಇದೆ ಎಂದು ತಿಳಿಸಿದರು.

ವಿದ್ಯಾರ್ಥಿನಿ ತಾಯಿ ಜ್ಯೋತಿ ಹನಮಂತ ರಾಠೋಡ ಮಾತನಾಡಿ, ಸಚಿವರು ಬಡವರಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಕೊಡುಗೈ ದಾನಿಯಾಗಿದ್ದಾರೆ. ಅವರಿಗೆ ಸದಾ ಋಣಿಯಾಗಿರುತ್ತೇವೆ ಎಂದು ಹೇಳಿದರು.

ವಿಜಯಪುರ ನಗರದ ನಿವಾಸಿ ಮಂಜುನಾಥ ಲಕ್ಷ್ಮಣ ಗೊಟಗುಣಕಿ ಮಾತನಾಡಿ, ಒಂದರಿಂದ 10ನೇ ತರಗತಿಯವರೆಗೆ ಸರಕಾರಿ ಶಾಲೆಯಲ್ಲಿ ಓದಿದ್ದೇನೆ. 9 ಮತ್ತು 10ನೇ ತರಗತಿಯನ್ನು ಖಾಸಗಿ ಶಾಲೆಯಲ್ಲಿ ಓದಿ, ಆರ್.ಕೆ.ಎಂ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದೇನೆ. ತಂದೆ ಲಕ್ಷ್ಮಣ ಗೊಟಗುಣಕಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಭಾರತಿ ಮನೆಗೆಲಸ ಮಾಡುತ್ತಿದ್ದಾರೆ. ಅಣ್ಣ ಮಲ್ಲಿಕಾರ್ಜುನ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಗೋಡೆಗಳಿಗೆ ನೀರು ಹಾಕುತ್ತ ವಿಜಯಪುರ ನಗರದ ಖಾಸಗಿ ಶಾಲೆಯಲ್ಲಿ ಬಿ.ಎಡ್ ಓದುತ್ತಿದ್ದಾನೆ. ನಾನು ನೀಟ್ ಪಾಸಾಗಿ ಸರಕಾರಿ ಕೋಟಾದಲ್ಲಿ ಆಯ್ಕೆಯಾದರೂ ಹಣದ ಕೊರತೆಯಿಂದಾಗಿ ಸಂಕಷ್ಟದಲ್ಲಿದ್ದೆ. ಆದರೆ, ಸಚಿವ ಎಂ. ಬಿ. ಪಾಟೀಲ ಅವರು ನಮ್ಮ ಪಾಲಿಗೆ ಆಪದ್ಭಾಂಧವರಾಗಿದ್ದಾರೆ. ನಾನು ವೈದ್ಯನಾಗಬೇಕೆಂಬ ಕನಸು ಈಡೇರಲು ಆರ್ಥಿಕ ನೆರವು ನೀಡಿದ್ದಾರೆ. ಅವರ ಉಪಕಾರವನ್ನು ಎಂದೂ ಮರೆಯುವುದಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿಯ ತಂದೆ ಲಕ್ಷ್ಣಣ ಗೊಟಗುಣಕಿ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರಂಥ ಹೃದಯವಂತರನ್ನು ಎಲ್ಲಿಯೂ ನೋಡಿಲ್ಲ. ಬಡವರು, ಪ್ರತಿಭಾವಂತರ ಪಾಲಿಗೆ ಅವರು ದೇವರಾಗಿದ್ದಾರೆ. ನನ್ನ ಮಗ ಡಾಕ್ಟರ್ ಆಗಬೇಕೆಂಬ ಕನಸು ನನಸಾಗಲು ಕಾರಣರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವರ್ಷ ಸಚಿವ ಎಂ. ಬಿ. ಪಾಟೀಲ ಅವರು ಬಿ. ಎಲ್. ಡಿ. ಇ ಸಂಸ್ಥೆಯ ವತಿಯಿಂದ ಈವರೆಗೆ ಒಟ್ಟು ಎಂಟು ಜನ ವಿದ್ಯಾರ್ಥಿಗಳು ಎಂ. ಬಿ. ಬಿ. ಎಸ್ ಓದಲು ಸಹಾಯ ಹಸ್ತ ಚಾಚಿದಂತಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande