
ಮಸ್ಕತ್, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ವಿದೇಶಿ ಪ್ರವಾಸದ ಅಂತಿಮ ಹಂತವಾಗಿ ಬುಧವಾರ ಓಮಾನ್ ರಾಜಧಾನಿ ಮಸ್ಕತ್‌ಗೆ ಆಗಮಿಸಿದ್ದಾರೆ. ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಓಮಾನ್‌ನಲ್ಲಿ ಉಳಿಯಲಿದ್ದು, ಈ ವೇಳೆ ಉಭಯ ದೇಶಗಳ ನಡುವಿನ ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಲಾಗುತ್ತಿದೆ.
ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಭಾರತ–ಓಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಇಂದು ಅಧಿಕೃತವಾಗಿ ಸಹಿಯಾಗಲಿದೆ. ಈ ಒಪ್ಪಂದಕ್ಕೆ ಕಳೆದ ಶುಕ್ರವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. CEPA ಒಪ್ಪಂದದ ಮಾತುಕತೆಗಳು ನವೆಂಬರ್ 2023ರಲ್ಲಿ ಆರಂಭಗೊಂಡಿದ್ದು, ಈ ವರ್ಷ ಅಂತಿಮ ಹಂತ ತಲುಪಿವೆ.
ಮಸ್ಕತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಓಮಾನ್‌ನ ಉಪ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ವ್ಯವಹಾರಗಳ ಸಚಿವ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿಗೆ ಗೌರವ ರಕ್ಷೆ ನೀಡಿ ಸನ್ಮಾನಿಸಲಾಯಿತು. ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಓಮಾನ್‌ಗೆ ಭೇಟಿ ನೀಡಿದ್ದು, ಇದು ಕೊಲ್ಲಿ ರಾಷ್ಟ್ರಕ್ಕೆ ಅವರ ಎರಡನೇ ಅಧಿಕೃತ ಭೇಟಿಯಾಗಿದೆ.
ಈ ಭೇಟಿ ಭಾರತ ಮತ್ತು ಓಮಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವರ್ಷಾಚರಣೆಯ ಮಹತ್ವದ ಸಂದರ್ಭದಲ್ಲೇ ನಡೆಯುತ್ತಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಹಕಾರಕ್ಕೆ ಹೊಸ ಆಯಾಮ ನೀಡುವ ಹಲವು ವಿಷಯಗಳ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆಯಲಿವೆ.
ಮಸ್ಕತ್‌ಗೆ ಆಗಮಿಸಿದ ಬಳಿಕ ಪ್ರಧಾನಿ ಮೋದಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
“ಮಸ್ಕತ್ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಿದ ಓಮಾನ್‌ನ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಭಾರತ–ಓಮಾನ್ ಸ್ನೇಹದ ಬಗ್ಗೆ ಉತ್ತಮ ಸಂಭಾಷಣೆ ನಡೆಸಿದ್ದೇವೆ” ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಎಕ್ಸನಲ್ಲಿ ಪ್ರಧಾನಿ ಮೋದಿ,
“ನಾನು ಮಸ್ಕತ್‌ಗೆ ಬಂದಿಳಿದಿದ್ದೇನೆ. ಇದು ಭಾರತದೊಂದಿಗೆ ಶಾಶ್ವತ ಸ್ನೇಹ ಮತ್ತು ಆಳವಾದ ಐತಿಹಾಸಿಕ ಸಂಬಂಧಗಳನ್ನು ಹೊಂದಿರುವ ಭೂಮಿ. ಈ ಭೇಟಿಯು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ನಮ್ಮ ಪಾಲುದಾರಿಕೆಗೆ ಹೊಸ ವೇಗ ನೀಡಲಿದೆ” ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ಭೇಟಿಯ ಅವಧಿಯಲ್ಲಿ ಓಮಾನ್‌ನ ಸುಲ್ತಾನ್ ತಾರಿಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ವಾಣಿಜ್ಯ, ಹೂಡಿಕೆ, ಇಂಧನ, ರಕ್ಷಣಾ ಸಹಕಾರ ಹಾಗೂ ಜನ–ಜನರ ಸಂಬಂಧಗಳ ಬಲವರ್ಧನೆ ಕುರಿತಂತೆ ಚರ್ಚೆ ನಡೆಯಲಿದೆ. ಜೊತೆಗೆ ಅವರು ಓಮಾನ್‌ನಲ್ಲಿರುವ ಭಾರತೀಯ ವಲಸಿಗರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಸ್ಕತ್‌ನಲ್ಲಿನ ಭಾರತೀಯ ಸಮುದಾಯ ಪ್ರಧಾನಿ ಮೋದಿ ಅವರನ್ನು ಹೋಟೆಲ್‌ನಲ್ಲಿ ಆತ್ಮೀಯವಾಗಿ ಸ್ವಾಗತಿಸಿದ್ದು, ಅವರ ಪ್ರೀತಿ ಮತ್ತು ಉತ್ಸಾಹವು ಭಾರತ–ಓಮಾನ್ ನಡುವಿನ ಗಟ್ಟಿಯಾದ ಜನಸಂಪರ್ಕ ಸಂಬಂಧಗಳನ್ನು ಪ್ರತಿಬಿಂಬಿಸಿದೆ.
ಜೋರ್ಡಾನ್ ಹಾಗೂ ಇಥಿಯೋಪಿಯಾ ದೇಶಗಳಿಗೆ ಯಶಸ್ವಿ ಭೇಟಿಗಳನ್ನು ಪೂರ್ಣಗೊಳಿಸಿದ ನಂತರ ಪ್ರಧಾನಿ ಮೋದಿ ಓಮಾನ್‌ಗೆ ಆಗಮಿಸಿದ್ದು, ಈ ಪ್ರವಾಸವು ಭಾರತದ ವಿದೇಶಾಂಗ ನೀತಿಯಲ್ಲಿ ಕೊಲ್ಲಿ ರಾಷ್ಟ್ರಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa