
ನವದೆಹಲಿ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶೀಯ ಷೇರು ಮಾರುಕಟ್ಟೆ ಇಂದಿನ ವಹಿವಾಟನ್ನು ಕುಸಿತದೊಂದಿಗೆ ಆರಂಭಿಸಿದ್ದು, ಆರಂಭಿಕ ಹಂತದಲ್ಲೇ ಮಾರಾಟದ ಒತ್ತಡದ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ದೌರ್ಬಲ್ಯ ಪ್ರದರ್ಶಿಸಿವೆ. ಮಾರುಕಟ್ಟೆ ತೆರೆದ ತಕ್ಷಣ ಖರೀದಿಯ ಬೆಂಬಲದಿಂದ ಸ್ವಲ್ಪ ಏರಿಕೆ ಕಂಡು ಬಂದರೂ, ನಂತರ ಮಾರಾಟದ ಒತ್ತಡ ಹೆಚ್ಚಿದ ಕಾರಣ ಸೂಚ್ಯಂಕಗಳು ಮತ್ತೆ ಕುಸಿದವು.
ಮೊದಲ ಒಂದು ಗಂಟೆಯ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ ಶೇಕಡಾ 0.55 ಮತ್ತು ನಿಫ್ಟಿ ಶೇಕಡಾ 0.53ರಷ್ಟು ಕುಸಿತ ಕಂಡವು.
ಪ್ರಮುಖ ಷೇರುಗಳ ಪೈಕಿ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಟೈಟಾನ್ ಕಂಪನಿ, ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ಷೇರುಗಳು ಶೇಕಡಾ 0.62 ರಿಂದ 1.30ರಷ್ಟು ಲಾಭ ದಾಖಲಿಸಿದವು.
ಇತ್ತ ಆಕ್ಸಿಸ್ ಬ್ಯಾಂಕ್, ಎಟರ್ನಲ್, ಟಾಟಾ ಸ್ಟೀಲ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಜಿಯೋ ಫೈನಾನ್ಷಿಯಲ್ ಷೇರುಗಳು ಶೇಕಡಾ 1.04 ರಿಂದ 3.84ರಷ್ಟು ನಷ್ಟ ಅನುಭವಿಸಿದವು.
ಇಲ್ಲಿವರೆಗೆ ಮಾರುಕಟ್ಟೆಯಲ್ಲಿ 2,491 ಷೇರುಗಳಲ್ಲಿ ವಹಿವಾಟು ನಡೆಯುತ್ತಿದ್ದು, ಇದರಲ್ಲಿ 891 ಷೇರುಗಳು ಲಾಭದೊಂದಿಗೆ ಹಸಿರು ವಲಯದಲ್ಲಿ, 1,600 ಷೇರುಗಳು ನಷ್ಟದೊಂದಿಗೆ ಕೆಂಪು ವಲಯದಲ್ಲಿ ವಹಿವಾಟು ನಡೆಸುತ್ತಿವೆ.
ಬಿಎಸ್‌ಇ ಸೆನ್ಸೆಕ್ಸ್‌ನ 30 ಷೇರುಗಳಲ್ಲಿ ಕೇವಲ 7 ಷೇರುಗಳು ಹಸಿರು ವಲಯದಲ್ಲಿ, ಉಳಿದ 23 ಷೇರುಗಳು ಕೆಂಪು ವಲಯದಲ್ಲಿ ವಹಿವಾಟು ನಡೆಸುತ್ತಿವೆ. ಎನ್‌ಎಸ್‌ಇ ನಿಫ್ಟಿಯ 50 ಷೇರುಗಳಲ್ಲಿ 12 ಷೇರುಗಳು ಲಾಭದಲ್ಲಿ, 38 ಷೇರುಗಳು ನಷ್ಟದಲ್ಲಿ ಇವೆ.
ಬಿಎಸ್‌ಇ ಸೆನ್ಸೆಕ್ಸ್ ಇಂದು 187.75 ಅಂಕಗಳ ಕುಸಿತದೊಂದಿಗೆ 85,025.61 ಅಂಕಗಳಲ್ಲಿ ವಹಿವಾಟು ಆರಂಭಿಸಿತು. ಆರಂಭಿಕ ಖರೀದಿ ಬೆಂಬಲದಿಂದ ಸೂಚ್ಯಂಕವು 85,059.96 ಅಂಕಗಳಿಗೆ ಏರಿದರೂ, ನಂತರ ಮಾರಾಟದ ಒತ್ತಡ ಹೆಚ್ಚಿತು. ಬೆಳಿಗ್ಗೆ 10:15ಕ್ಕೆ, ಸೆನ್ಸೆಕ್ಸ್ 466.13 ಅಂಕಗಳ ಕುಸಿತದೊಂದಿಗೆ 84,747.23 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.
ಅದೇ ರೀತಿ, ಎನ್‌ಎಸ್‌ಇ ನಿಫ್ಟಿ ಇಂದು 25,951.50 ಅಂಕಗಳಲ್ಲಿ ವಹಿವಾಟು ಆರಂಭಿಸಿ, ಬೆಳಿಗ್ಗೆ 10:15ಕ್ಕೆ 137.60 ಅಂಕಗಳ ಕುಸಿತದೊಂದಿಗೆ 25,889.70 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa