
ಬೆಂಗಳೂರು, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ವಿಧಾನ ಸಭೆಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಕರ್ನಾಟಕ ದಕ್ಷಿಣ ಪ್ರಾಂತವು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.
ಸುಮಾರು ಐದು ದಶಕಕ್ಕೂ ಹೆಚ್ಚು ಕಾಲ ರಾಜ್ಯದ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸಜ್ಜನಿಕೆಯ ಸ್ವಭಾವ ಮತ್ತು ಸಾರ್ವಜನಿಕ ಸೇವೆಯಿಂದ ಜನರ ಅಪಾರ ವಿಶ್ವಾಸವನ್ನು ಗಳಿಸಿದ್ದರು. ಅವರು ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಹಾಗೂ ತೋಟಗಾರಿಕೆ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಅಖಿಲ ಭಾರತೀಯ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಅವರ ಸಾಮಾಜಿಕ ದೃಷ್ಟಿಕೋನ, ನಿರಂತರ ಸಕ್ರಿಯತೆ ಮತ್ತು ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗಿತ್ತು ಎಂದು ಆರ್‌ಎಸ್‌ಎಸ್ ತನ್ನ ಶ್ರದ್ಧಾಂಜಲಿ ಸಂದೇಶದಲ್ಲಿ ಸ್ಮರಿಸಿದೆ. ಸಾರ್ವಜನಿಕ ಜೀವನದಲ್ಲಿ ಅವರು ಬಿಟ್ಟಿರುವ ಶೂನ್ಯವನ್ನು ತುಂಬುವುದು ಕಷ್ಟಕರ ಎಂದು ಸಂಘವು ಅಭಿಪ್ರಾಯಪಟ್ಟಿದೆ.
ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಂಘಚಾಲಕ ಜಿ. ಎಸ್. ಉಮಾಪತಿ ಅವರು, ಅಗಲಿದ ಶಾಮನೂರು ಶಿವಶಂಕರಪ್ಪ ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa