
ನವದೆಹಲಿ, 13 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದರು.
2001ರ ಡಿಸೆಂಬರ್ 13ರಂದು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಐದು ಭಯೋತ್ಪಾದಕರು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಭಾರತೀಯ ಭದ್ರತಾ ಪಡೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದಾಳಿಯನ್ನು ವಿಫಲಗೊಳಿಸಿ, ಎಲ್ಲಾ ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಈ ಸಂದರ್ಭದಲ್ಲಿ ಐದು ದೆಹಲಿ ಪೊಲೀಸ್ ಸಿಬ್ಬಂದಿ, ಒಬ್ಬ ಮಹಿಳಾ ಕಾನ್‌ಸ್ಟೆಬಲ್ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ವೀರಮರಣವನ್ನಪ್ಪಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಕೂಡ ಸಂಸತ್ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, “ನಮ್ಮ ಪ್ರಜಾಪ್ರಭುತ್ವದ ಆತ್ಮವನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಅಚಲ ಗುರಾಣಿಯಂತೆ ನಿಂತರು. ಅವರ ಧೈರ್ಯ, ಸರ್ವೋಚ್ಚ ತ್ಯಾಗ ಮತ್ತು ಕರ್ತವ್ಯ ಪ್ರಜ್ಞೆ ರಾಷ್ಟ್ರದ ಸ್ಮೃತಿಯಲ್ಲಿ ಶಾಶ್ವತವಾಗಿ ಉಳಿಯಲಿದೆ” ಎಂದರು.
ಗೃಹ ಸಚಿವ ಅಮಿತ್ ಶಾ ಅವರು, “2001ರಲ್ಲಿ ಭದ್ರತಾ ಪಡೆಗಳು ತೋರಿದ ಅದಮ್ಯ ಧೈರ್ಯವೇ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ ಭವನವನ್ನು ಉಳಿಸಿತು. ಈ ವೀರ ಯೋಧರ ತ್ಯಾಗಕ್ಕೆ ರಾಷ್ಟ್ರ ಎಂದಿಗೂ ಋಣಿಯಾಗಿರುತ್ತದೆ” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa