
ವಾಷಿಂಗ್ಟನ್, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಹು ನಿರೀಕ್ಷಿತ ‘ಟ್ರಂಪ್ ಗೋಲ್ಡ್ ಕಾರ್ಡ್’ ಎಂಬ ಹೊಸ ವೀಸಾ–ಪೌರತ್ವ ಕಾರ್ಯಕ್ರಮವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ದೇಶದ ಪ್ರತಿಭಾವಂತರಿಗೆ ನೇರ ಪೌರತ್ವ ಮಾರ್ಗ ಒದಗಿಸುವ ಉದ್ದೇಶದಿಂದ ರೂಪಿಸಲಾಗಿರುವ ಈ ಯೋಜನೆ ಅಮೆರಿಕ ಸರ್ಕಾರದ ಖಜಾನೆಗೆ ಶತಕೋಟಿ ಡಾಲರ್‌ಗಳಷ್ಟು ಆದಾಯ ತಂದುಕೊಡುವ ಸಾಧ್ಯತೆ ಇದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಶ್ವೇತಭವನದ ರೂಸ್‌ವೆಲ್ಟ್ ಕೊಠಡಿಯಲ್ಲಿ ವ್ಯಾಪಾರ ನಾಯಕರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಘೋಷಿಸಿದ ಅವರು, ಟ್ರೂತ್ ಸೋಷಿಯಲ್‌ನಲ್ಲಿ “ಯುಎಸ್ ಟ್ರಂಪ್ ಗೋಲ್ಡ್ ಕಾರ್ಡ್ ಬಂದಿದೆ. ಅರ್ಹ ಹಾಗೂ ಪರಿಶೀಲಿತ ಎಲ್ಲರಿಗೂ ಪೌರತ್ವಕ್ಕೆ ನೇರ ದಾರಿ. ಅಮೆರಿಕನ್ ಕಂಪನಿಗಳು ತಮ್ಮ ಪ್ರತಿಭೆಯನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡಲಿದೆ” ಎಂದು ಬರೆದಿದ್ದಾರೆ.
ಈ ಕಾರ್ಡ್ ಗ್ರೀನ್ ಕಾರ್ಡ್‌ಗಿಂತ ಕೂಡ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಜಾಗತಿಕ ಮಟ್ಟದ ಪ್ರತಿಭೆಯನ್ನು ಆಕರ್ಷಿಸುವ ಮೂಲಕ ಅಮೆರಿಕೆಯ ಬಲವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಇದೇ ವೇಳೆ, ಟ್ರಂಪ್ ಗೋಲ್ಡ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಆಸಕ್ತರು ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa