ಕೆರೆಗಳಿಗೆ ನೀರು ಸರಕಾರದ ಏಳನೇ ಗ್ಯಾರಂಟಿ : ಡಿ.ಕೆ.ಶಿವಕುಮಾರ್
ಕೂಡ್ಲಿಗಿ, 09 ನವೆಂಬರ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಭೂ ಒಡೆತನವನ್ನು ಆರನೇ ಗ್ಯಾರಂಟಿಯಾಗಿ, ಏಳನೇ ಗ್ಯಾರಂಟಿಯಾಗಿ ರೈತರಿಗೆ ನೀರನ್ನು ನೀಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಹೇಳಿದರು. ವಿಜಯನಗರ ಜಿಲ್ಲೆಯ ಕೂ
Dks


ಕೂಡ್ಲಿಗಿ, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಭೂ ಒಡೆತನವನ್ನು ಆರನೇ ಗ್ಯಾರಂಟಿಯಾಗಿ, ಏಳನೇ ಗ್ಯಾರಂಟಿಯಾಗಿ ರೈತರಿಗೆ ನೀರನ್ನು ನೀಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಹೇಳಿದರು.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಉದ್ಘಾಟನೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಂಗಾ ಸ್ನಾನ ತುಂಗಾ ಪಾನ ಎನ್ನುವ ಮಾತಿದೆ. ಅಂದರೆ ತುಂಗಾನದಿ ನೀರು ಕುಡಿಯುವುದಕ್ಕೆ ಅಷ್ಟು ಪವಿತ್ರವಾದುದು. ಅಂತಹ ನೀರನ್ನು ಜನರ ಉಪಯೋಗಕ್ಕಾಗಿ ಕೆರೆಗಳಿಗೆ ಹರಿಸುತ್ತಿದ್ದೇವೆ ಎಂದರು.

ಕೆರೆಗಳಿಗೆ ನೀರು ಹರಿಸಲು 800 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಈಗಾಗಲೇ ವೆಚ್ಚ ಮಾಡಲಾಗಿದೆ. ಎಲ್ಲಾ ಕೆರೆಗಳನ್ನು ತುಂಬಿಸುವ ಸಲುವಾಗಿ ವಾರ್ಷಿಕ ವಿದ್ಯುತ್ ವೆಚ್ಚವೇ 80 ಲಕ್ಷ ರೂಪಾಯಿ ತಲುಪುತ್ತದೆ. ಸರ್ಕಾರವು ಒಂದೆರಡು ವರ್ಷ ಈ ವೆಚ್ಚವನ್ನು ಭರಿಸಬಹುದು. ಆದ ಕಾರಣಕ್ಕೆ ಎಲ್ಲಾ ಕೆರೆಗಳನ್ನು ಮೀನುಗಾರಿಕೆ ನಡೆಸಲು ಹರಾಜು ಹಾಕಬೇಕು. ಈ ಮೂಲಕ ವೆಚ್ಚವನ್ನು ಸರಿದೂಗಿಸಬೇಕು ಎಂದು ಹೇಳಿದ್ದೇನೆ. ಇದರಿಂದ ಎಲ್ಲಾ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಎನ್.ಟಿ.ಬೊಮ್ಮಣ್ಣ ಹಾಗೂ ನಾನು ಬಂಗಾರಪ್ಪನವರ ಶಿಷ್ಯರು. ವಿ.ಎಸ್.ಉಗ್ರಪ್ಪ ಅವರು ಸಂಸದ ಸ್ಥಾನಕ್ಕೆ ನಿಂತಿದ್ದಾಗ ಬೊಮ್ಮಣ್ಣ ಅವರು 74 ಕೆರೆಗಳನ್ನು ತುಂಬಿಸುವಂತೆ ಮನವಿ ಮಾಡಿದ್ದರು. ನನ್ನ ಸ್ನೇಹಿತರಾದ ನಿಮ್ಮ ಕೆಲಸವನ್ನು ಖಂಡಿತವಾಗಿ ನಾನು ಮಾಡಿಕೊಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅಂದು ಕೊಟ್ಟ ಮಾತು ಇಂದು ಈಡೇರಿದೆ. ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸಿ 1.76 ಲಕ್ಷ ಜನರ ಬದುಕಿಗೆ ನೆರವಾಗಿದ್ದೇವೆ.

ಕರುನಾಡಿನ ಜನರ ಸೇವೆಯನ್ನು ಉತ್ತಮ ಸರ್ಕಾರ ಮುನ್ನಡೆಸುತ್ತಿದೆ. ಭವಿಷ್ಯದಲ್ಲಿ ಇದಕ್ಕಿಂತ ಉತ್ತಮ ಆಡಳಿತ ನೀಡುತ್ತೇವೆ. 2028 ಕ್ಕೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ‌ಅಧಿಕಾರಕ್ಕೆ ಬಂದು ನಿಮ್ಮ ಸೇವೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande