
ಬೆಂಗಳೂರು, 09 ನವೆಂಬರ್ (ಹಿ.ಸ.) :
ಆ್ಯಂಕರ್ : ಧರ್ಮಾಂತರ ಮತ್ತು ರಾಜಕೀಯ ವಿಭಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘಚಾಲಕ ಡಾ.ಮೋಹನ್ ಭಾಗವತ್
“ಹಿಂದೂಗಳು ತಾವೇ ಏಕೆ ವಿಭಜಿತರಾಗಬೇಕು? ರಾಜಕೀಯವು ಮತಪಂಥಗಳನ್ನು ಬಳಸಿಕೊಂಡು ವಿಭಜಿಸುತ್ತದೆ, ಆದರೆ ನಾವು ಏಕತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ನಮ್ಮ ಸನಾತನ ಸಂಸ್ಕೃತಿಯ ಶಕ್ತಿ ಎಂದರೆ ಏಕತೆ ಮತ್ತು ಸಹಭಾವ ಎಂದಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂಘ ಶತಾಬ್ದಿ ಉಪನ್ಯಾಸ ಮಾಲಿಕೆಯ ಎರಡನೇ ದಿನವಾದ ಇಂದು ಪ್ರಶ್ನೆಗಳಿಗೆ ಉತ್ತರಿಸಿದ ಅವರು,
“ಭಾರತದಲ್ಲಿ ಮೂರು ಶತಮಾನಗಳಿಂದ ಧರ್ಮಾಂತರದ ಪ್ರಯತ್ನಗಳಾದರೂ ನಾವು ಇನ್ನೂ ಹಿಂದೂಸ್ಥಾನವಾಗಿಯೇ ಉಳಿದಿದ್ದೇವೆ. ನಮ್ಮ ಧರ್ಮ, ಸಂಸ್ಕೃತಿ ಜೀವಂತವಾಗಿದೆ. ಇದನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು.
ದೇಶದ ಅಭಿವೃದ್ಧಿ, ಭದ್ರತೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಸಾಮಾಜಿಕ ಏಕತೆ ಮತ್ತು ಆಂತರಿಕ ಗುಣಮಟ್ಟವೇ ಮೂಲ ಶಕ್ತಿಯಾಗಿದೆ ಎಂದಿರುವ ಮೋಹನ್ ಭಾಗವತ್ , ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ MSME, ಕಾರ್ಪೊರೇಟ್ ಕ್ಷೇತ್ರ, ಕೃಷಿ ಮತ್ತು ಸ್ವಉದ್ಯೋಗ ಕ್ಷೇತ್ರಗಳ ಮಹತ್ವವನ್ನು ಒತ್ತಿಹೇಳಿ, “ಈ ವಿಭಾಗಗಳು ರಾಷ್ಟ್ರದ GDP ಹಾಗೂ ಉದ್ಯೋಗ ಸೃಷ್ಟಿಯ ಬೆನ್ನೆಲುಬು. ಇವುಗಳ ಶಕ್ತಿಯನ್ನು ಬಲಪಡಿಸಬೇಕಿದೆ ಎಂದರು.
ಭಾಗವತ್ ಅವರು ಭಾರತವು ಪರಮಾಣು ಇಂಧನದ ವಿಷಯದಲ್ಲಿ ಥೋರಿಯಂ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
“ಯುರೇನಿಯಂಗೆ ಪರ್ಯಾಯವಾಗಿ ಥೋರಿಯಂ ಬಳಸುವಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಈ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡಬೇಕು ಎಂದರು.
ಆರ್‌ಎಸ್‌ಎಸ್ ಸರ್ಕಾರವಲ್ಲ, ರಾಜಕೀಯ ಪಕ್ಷವೂ ಅಲ್ಲದ ಕಾರಣದಿಂದಾಗಿ “ನಾವು ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಆದರೆ ಜಾಗೃತಿ ಮೂಡಿಸಲು ಮತ್ತು ಒತ್ತಡ ನಿರ್ಮಿಸಲು ನಮ್ಮ ಪಾತ್ರವನ್ನು ನಿರ್ವಹಿಸುತ್ತೇವೆ,” ಎಂದರು.
ಸ್ವದೇಶಿ ತತ್ವದ ಪ್ರಕಾರ ಸರ್ಕಾರ ಮತ್ತು ಸಮಾಜದಲ್ಲಿ ರಾಷ್ಟ್ರೀಯ ದೃಷ್ಟಿಕೋನ ಬಲಪಡಿಸುವತ್ತ ಸಂಘದ ಚಿಂತನೆ ಮುಂದುವರಿದಿದೆ ಎಂದು ಹೇಳಿದರು.
ರೋಹಿಂಗ್ಯಾ ಸೇರಿದಂತೆ ಅನಧಿಕೃತ ವಲಸೆಯ ಸಮಸ್ಯೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಭಾಗವತ್, “ಭಾರತದ ಗಡಿಗಳು ಅಸಹಜವಾಗಿ ವಿಭಜಿಸಲ್ಪಟ್ಟಿವೆ. ಕೆಲವೆಡೆ ಅಡುಗೆ ಮನೆ ಬಾಂಗ್ಲಾದೇಶದಲ್ಲಿದೆ, ಬಾತ್‌ರೂಮ್ ಭಾರತದಲ್ಲಿದೆ ಎನ್ನುವಷ್ಟು ಅಸಂಗತ ಗಡಿ ಇದೆ,” ಎಂದು ಉದಾಹರಿಸಿದರು.
ಅವರು ಮಣಿಪುರ ಗಡಿ ಮುಚ್ಚುವಿಕೆಗೆ ಸ್ಥಳೀಯ ವಿರೋಧದ ವಿಚಾರಗಳಿಗೆ ಪ್ರತಿಕ್ರಿಯಿಸಿರುವ ಅವರು, “ಗಡಿಗಳು ಸಂಪೂರ್ಣ ಸುರಕ್ಷಿತವಾಗಬೇಕು. ಸರ್ಕಾರ ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದೆ. ಆದರೆ ಸ್ಥಳೀಯ ಮತ್ತು ಸಾಮಾಜಿಕ ಅಂಶಗಳನ್ನು ಪರಿಗಣಿಸಿ ಕ್ರಮಗೊಳ್ಳಬೇಕು,” ಎಂದು ಭಾಗವತ್ ಸಲಹೆ ನೀಡಿದರು.
ಎರಡು ದಿನಗಳ ಉಪನ್ಯಾಸಮಾಲೆಯ ಎರಡನೇ ದಿನ - ಪ್ರಶ್ನೋತ್ತರ ಕಾರ್ಯಕ್ರಮ ಬನಶಂಕರಿಯ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ್ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa