
ಭುವನೇಶ್ವರ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತವು ಇಂಧನ ಆಮದುದಾರ ರಾಷ್ಟ್ರದಿಂದ ಇಂಧನ ರಫ್ತುದಾರ ರಾಷ್ಟ್ರವಾಗುವ ದಿಕ್ಕಿನಲ್ಲಿ ವೇಗವಾಗಿ ಮುಂದುವರಿಯುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಭಾರತದಲ್ಲಿ ಎಥೆನಾಲ್, ಮೆಥನಾಲ್, ಜೈವಿಕ-ಎಲ್‌ಎನ್‌ಜಿ, ಸಿಎನ್‌ಜಿ ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆ ಹಾಗೂ ಬಳಕೆ ಶೀಘ್ರವಾಗಿ ಹೆಚ್ಚುತ್ತಿದ್ದು, ಇದು ಸ್ವಾವಲಂಬಿ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಅವರು ವಿವರಿಸಿದರು.
ಭುವನೇಶ್ವರದಲ್ಲಿ ನಡೆದ ಭಾರತೀಯ ರಸ್ತೆ ಕಾಂಗ್ರೆಸ್ ನ 84ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, “ರಸ್ತೆ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸುರಕ್ಷಿತ ಮತ್ತು ಸುಗಮ ರಸ್ತೆ ವ್ಯವಸ್ಥೆಗಾಗಿ ಆಧುನಿಕ ಎಂಜಿನಿಯರಿಂಗ್ ಮಾನದಂಡಗಳು, ಬುದ್ಧಿವಂತ ಸಾರಿಗೆ ವ್ಯವಸ್ಥೆಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ತ್ವರಿತವಾಗಿ ಅಳವಡಿಸಲಾಗುತ್ತಿದೆ,” ಎಂದರು.
ರಸ್ತೆ ಎಂಜಿನಿಯರ್‌ಗಳು ರಾಷ್ಟ್ರದ ಪ್ರಗತಿಯ ಪ್ರಮುಖ ಆಧಾರಸ್ತಂಭಗಳು ಎಂದು ಗಡ್ಕರಿ ಶ್ಲಾಘಿಸಿದರು. “ಅವರ ನಿಖರತೆ ಮತ್ತು ನಾವೀನ್ಯತೆ ಉತ್ತಮ ಡಿಪಿಆರ್‌ಗಳ ತಯಾರಿಕೆಗೆ ಹಾಗೂ ಸುರಕ್ಷಿತ ಹೆದ್ದಾರಿಗಳ ಅಭಿವೃದ್ಧಿಗೆ ದಾರಿಯಾಗಿದೆ,” ಎಂದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಬಯೋ-ಬಿಟುಮೆನ್ ಮತ್ತು ಮರುಬಳಕೆಯ ಪ್ಲಾಸ್ಟಿಕ್ ಬಳಕೆಯ ರಸ್ತೆಗಳನ್ನು ಹೆಚ್ಚು ಬಾಳಿಕೆ ಬರುವಂತೆ ಮತ್ತು ವೆಚ್ಚ-ಪರಿಣಾಮಕಾರಿಯನ್ನಾಗಿ ಮಾಡುತ್ತಿದೆ. ಜೊತೆಗೆ ಇದು ಹಸಿರು ಮೂಲಸೌಕರ್ಯ ಗುರಿಗಳನ್ನು ಬಲಪಡಿಸುತ್ತದೆ ಎಂದರು.
ನಾವೀನ್ಯತೆ ಮತ್ತು ಸುಸ್ಥಿರ ಚಲನಶೀಲತೆಯ ಆಧಾರದ ಮೇಲೆ ವಿಶ್ವ ದರ್ಜೆಯ ಮೂಲಸೌಕರ್ಯ ನಿರ್ಮಾಣವು ಸರ್ಕಾರದ ಗುರಿಯಾಗಿದೆ. ಈ ಪರಿವರ್ತನೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರೊಂದಿಗೆ ಮೂಲಸೌಕರ್ಯ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಿ, ಭಾರತವನ್ನು ಸ್ವಾವಲಂಬಿ ಮತ್ತು ಸಬಲೀಕೃತ ಭವಿಷ್ಯದತ್ತ ಕೊಂಡೊಯ್ಯಲಿದೆ ಎಂದು ಗಡ್ಕರಿ ಹೇಳಿದರು
ಈ ಸಂದರ್ಭದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಲೋಕೋಪಯೋಗಿ ಸಚಿವ ಪೃಥ್ವಿರಾಜ್ ಹರಿಚಂದನ್, ಐಆರ್‌ಸಿ ಅಧ್ಯಕ್ಷ ಪ್ರೊ. ಮನೋರಂಜನ್ ಪರಿದಾ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa