
ವಾಷಿಂಗ್ಟನ್, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಮಿಸ್ಸಿಸ್ಸಿಪ್ಪಿ ರಾಜ್ಯದ ಯಾಜೂ ಸಿಟಿಯಲ್ಲಿರುವ ಸಿಎಫ್ ಇಂಡಸ್ಟ್ರೀಸ್ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರೀ ಸ್ಫೋಟದಿಂದ ರಾಸಾಯನಿಕ ಸೋರಿಕೆಯಾಗಿದೆ. ಘಟನೆಯ ವೇಳೆ ಸ್ಥಾವರದಲ್ಲಿದ್ದ ಎಲ್ಲ ನೌಕರರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿ ವಿಕ್ಸ್‌ಬರ್ಗ್ ಪೋಸ್ಟ್ ವರದಿ ಪ್ರಕಾರ, ಸ್ಫೋಟದ ನಂತರ ಅಮೋನಿಯಾ ಸೋರಿಕೆಯ ಕಾರಣದಿಂದ ಕೆಲವು ಸ್ಥಳೀಯ ನಿವಾಸಿಗಳು ತಮ್ಮ ಮನೆಗಳನ್ನು ಖಾಲಿ ಮಾಡಬೇಕಾಯಿತು. ಮಿಸ್ಸಿಸ್ಸಿಪ್ಪಿ ತುರ್ತು ನಿರ್ವಹಣಾ ಸಂಸ್ಥೆಯ ಸಂವಹನ ಅಧಿಕಾರಿ ಸ್ಕಾಟ್ ಸಿಮ್ಮನ್ಸ್ ಅವರು, ಘಟಕದಲ್ಲಿ ಅಮೋನಿಯಾ ಸೋರಿಕೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಪರಿಸರ ಗುಣಮಟ್ಟ ಇಲಾಖೆ ಮತ್ತು ಇತರ ತುರ್ತು ಸೇವಾ ಏಜೆನ್ಸಿಗಳ ಅಧಿಕಾರಿಗಳು ತಕ್ಷಣ ಸ್ಥಳಕ್ಕಾಗಮಿಸಿದ್ದಾರೆ.
ಎನ್‌ಬಿಸಿ ಅಂಗಸಂಸ್ಥೆ ಡಬ್ಲ್ಯೂಎಲ್‌ಬಿಟಿ ಜಾಕ್ಸನ್ ಟಿವಿ ವರದಿ ಪ್ರಕಾರ, ಯಾಜೂ ನಗರದ ಎಲ್ಲ ನಿವಾಸಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಈ ಘಟನೆ ಬುಧವಾರ ಸಂಜೆ ಸುಮಾರು 4:25 ಕ್ಕೆ ಯುಎಸ್-49 ಹೆದ್ದಾರಿ ಪೂರ್ವ ಭಾಗದಲ್ಲಿರುವ ಸಿಎಫ್ ಇಂಡಸ್ಟ್ರೀಸ್ ಘಟಕದಲ್ಲಿ ನಡೆದಿದೆ.
ವಾಲ್‌ಮಾರ್ಟ್ ಸೇರಿದಂತೆ ಹತ್ತಿರದ ವ್ಯಾಪಾರ ಸಂಸ್ಥೆಗಳು ಮತ್ತು ಮನೆಗಳನ್ನು ಕೂಡ ಸ್ಥಳಾಂತರಿಸಲು ಸೂಚಿಸಲಾಗಿದೆ. ಅಮೆರಿಕನ್ ರೆಡ್‌ಕ್ರಾಸ್ ಪೀಡಿತರಿಗಾಗಿ ಯಾಜೂ ಕೌಂಟಿ ಹೈಸ್ಕೂಲ್ (191 ಪ್ಯಾಂಥರ್ ಡ್ರೈವ್) ನಲ್ಲಿ ತಾತ್ಕಾಲಿಕ ಆಶ್ರಯ ಕೇಂದ್ರವನ್ನು ತೆರೆಯಲಾಗಿದೆ.
ಸಿಎಫ್ ಇಂಡಸ್ಟ್ರೀಸ್ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಸ್ಥಾವರವು ಅಮೋನಿಯಾ ಉತ್ಪಾದನೆಗೆ ಪ್ರಸಿದ್ಧವಾಗಿದ್ದು, ಯುಎಸ್ 49 ಪೂರ್ವ ಹೆದ್ದಾರಿಯ 4600 ಬ್ಲಾಕ್‌ನಲ್ಲಿದೆ. ಸಂಸ್ಥೆಯ ಪ್ರಕಟಣೆಯ ಪ್ರಕಾರ, “ಘಟನೆಯ ವೇಳೆಯಲ್ಲಿ ಸ್ಥಾವರದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ, ಯಾವುದೇ ಜೀವಹಾನಿ ಸಂಭವಿಸಿಲ್ಲ” ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa