
ನವದೆಹಲಿ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಪರವಾಗಿ ನಡೆಯುತ್ತಿರುವ ಜಲವಿವಾದಗಳ ಕುರಿತು ಹಿರಿಯ ವಕೀಲರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಮೇಕೆದಾಟು ಯೋಜನೆ ಸೇರಿದಂತೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿರುವ ಪ್ರಕರಣಗಳ ಕುರಿತು ನಡೆದ ಈ ಸಭೆಯಲ್ಲಿ ಕರ್ನಾಟಕ ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಮೋಹನ್ ವಿ. ಕಾತರಾಕಿ, ನಿಶಾಂತ್ ಪಾಟೀಲ್, ರಾಜ್ಯದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಪರ ಮುಖ್ಯ ಕಾರ್ಯದರ್ಶಿ (ಜಲಸಂಪನ್ಮೂಲ) ಗೌರವ್ ಗುಪ್ತಾ ಹಾಗೂ ತಾಂತ್ರಿಕ ಸಲಹೆಗಾರ ಜೈಪ್ರಕಾಶ್ ಭಾಗವಹಿಸಿದ್ದರು.
ಸಭೆಯಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಿನ ಕಾನೂನು ಮತ್ತು ತಾಂತ್ರಿಕ ಕ್ರಮಗಳ ಕುರಿತು ವಿವರವಾದ ಚರ್ಚೆ ನಡೆಯಿತು. ಡಿ.ಕೆ. ಶಿವಕುಮಾರ್ ಅವರು ವಕೀಲರಿಗೆ ಮೇಕೆದಾಟು ಯೋಜನೆಯ ಅಗತ್ಯತೆ, ಅದರ ತಾಂತ್ರಿಕ ಆಯಾಮಗಳು ಹಾಗೂ ತಮಿಳುನಾಡಿನ ವಿರೋಧದ ಹಿನ್ನೆಲೆಯಲ್ಲಿ ಕರ್ನಾಟಕದ ವಾದವನ್ನು ಬಲಪಡಿಸುವ ಕುರಿತು ಸೂಚನೆ ನೀಡಿದರು.
ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿರುವ ಎಲ್ಲ ಜಲವಿವಾದಗಳ ವಿಚಾರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನ್ಯಾಯಾಂಗದ ಮುಂದೆ ರಾಜ್ಯದ ಹಕ್ಕುಗಳನ್ನು ಸಮರ್ಥವಾಗಿ ಮಂಡಿಸಲು ಸಜ್ಜಾಗಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa