
ಬಿಲಾಸ್ಪುರ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಗೌಟೋರಾ ರೈಲು ನಿಲ್ದಾಣದ ಹತ್ತಿರದ ಲಾಲ್‌ಖಾದನ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿತು. ಕೊರ್ಬಾ ಪ್ಯಾಸೆಂಜರ್ ರೈಲು ಹಳಿಯಲ್ಲಿ ನಿಂತಿದ್ದ ಸರಕು ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಎಂಜಿನ್ ಸರಕು ರೈಲಿನ ಮೇಲೆ ಏರಿತ್ತು.
ಘಟನೆಯಲ್ಲಿ ಪ್ಯಾಸೆಂಜರ್ ರೈಲಿನ ಮಹಿಳಾ ಮೀಸಲು ಬೋಗಿ ಸಂಪೂರ್ಣವಾಗಿ ನುಜ್ಜುನುಜ್ಜಾಯಿತು. ಬೋಗಿಗಳಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಗ್ಯಾಸ್ ಕಟರ್‌ಗಳ ಸಹಾಯದಿಂದ ಬೋಗಿ ಮತ್ತು ಸೀಟುಗಳನ್ನು ಕತ್ತರಿಸಬೇಕಾಯಿತು.
ರೇಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಪುಲ್ ಕುಮಾರ್ ಅವರು ಬುಧವಾರ ಬೆಳಗ್ಗೆ ಘಟನೆಯ ವಿವರ ನೀಡಿದ್ದು, ಗಾಯಗೊಂಡ ಪ್ರಯಾಣಿಕರನ್ನು ರೈಲ್ವೆ ಆಸ್ಪತ್ರೆ, ಸಿಮ್ಸ್ ಮತ್ತು ಅಪೋಲೋ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. ರಕ್ಷಣಾ ತಂಡಗಳು ತಡರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿಸಿದ್ದು, ಸುಮಾರು 10 ಗಂಟೆಗಳ ಕಾಲ ನಿರಂತರ ರಕ್ಷಣಾ ಕಾರ್ಯ ನಡೆಯಿತು. ಈ ವೇಳೆ ಕ್ರೇನ್‌ಗಳ ಸಹಾಯದಿಂದ ಬೋಗಿಗಳನ್ನು ಎತ್ತಿ, ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು.
ಅಪಘಾತದ ನಂತರ, ರೈಲ್ವೆ, ಜಿಲ್ಲಾಡಳಿತ, ಪೊಲೀಸರು, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ಸಂಯುಕ್ತ ರಕ್ಷಣಾ ಕಾರ್ಯಾಚರಣೆ ನಡೆಸಿದವು. ರಾತ್ರಿ 10 ಗಂಟೆಯ ವೇಳೆಗೆ ಎಂಟು ಶವಗಳನ್ನು ಹೊರತೆಗೆಯಲಾಗಿತ್ತು, ನಂತರ ಇನ್ನೂ ಮೂವರು ಮೃತಪಟ್ಟಿರುವುದು ದೃಢಪಟ್ಟಿತು.
ಪ್ರಾಥಮಿಕ ವರದಿಗಳ ಪ್ರಕಾರ, ಅಪಘಾತಕ್ಕೆ ಕಾರಣ ಮಾನವೀಯ ನಿರ್ಲಕ್ಷ್ಯ ಅಥವಾ ತಾಂತ್ರಿಕ ದೋಷವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ರೈಲ್ವೆ ಇಲಾಖೆ ತನಿಖೆ ಆರಂಭಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa