
ಕೊಲಂಬೊ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ದಿಟ್ವಾ ಚಂಡಮಾರುತವು ಶ್ರೀಲಂಕಾದಲ್ಲಿ ಭಾರಿ ವಿನಾಶವನ್ನುಂಟುಮಾಡಿದೆ. ನಿರಂತರ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ವಿವಿಧ ಭಾಗಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಈ ವಿಪತ್ತಿನಿಂದ ಸಾವನ್ನಪ್ಪಿದವರ ಸಂಖ್ಯೆ 69 ಕ್ಕೆ ತಲುಪಿದ್ದು, ಹೆಚ್ಚಿನ ಸಂಖ್ಯೆಯ ಜನರು ಕಾಣೆಯಾಗಿದ್ದಾರೆ, ಕಾಣೆಯಾದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಅನೇಕ ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿಹೋಗಿರುವುದರಿಂದ ಪರಿಸ್ಥಿತಿ ಹದಗೆಟ್ಟಿದೆ. ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅನಿಲ, ಆಸ್ಪತ್ರೆಗಳು ಮತ್ತು ನೀರು ಸರಬರಾಜು ಮುಂತಾದ ಪ್ರಮುಖ ಸೇವೆಗಳನ್ನು ಅಗತ್ಯ ಸೇವೆಗಳೆಂದು ಘೋಷಿಸುವ ಅಧಿಸೂಚನೆಯನ್ನು ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಹೊರಡಿಸಿದ್ದಾರೆ.
ಇದೇ ವೇಳೆ ಶ್ರೀಲಂಕಾಕ್ಕೆ ಸಹಾಯ ಮಾಡಲು ಭಾರತವು ಆಪರೇಷನ್ ಸಾಗರ್ ಬಂಧು ಅನ್ನು ಪ್ರಾರಂಭಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಆಪರೇಷನ್ ಸಾಗರ್ ಬಂಧುವಿನ ಭಾಗವಾಗಿ, ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ಉದಯಗಿರಿ ಕೊಲಂಬೊಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಿವೆ ಮತ್ತು ಮುಂದಿನ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಸಂತ್ರಸ್ತ ಕುಟುಂಬಗಳ ಸುರಕ್ಷತೆ, ಸಂತಾಪ ಮತ್ತು ಶೀಘ್ರ ಚೇತರಿಕೆಗೆ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ನೆರೆಹೊರೆ ಮೊದಲು ನೀತಿಯಡಿಯಲ್ಲಿ, ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಶ್ರೀಲಂಕಾದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa