
ಹಾಂಗ್‌ಕಾಂಗ್, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಹಾಂಗ್‌ಕಾಂಗನ ತೈ ಪೊ ಪ್ರದೇಶದ ವಾಂಗ್ ಫುಕ್ ಕೋರ್ಟ್ ವಸತಿ ಸಮುಚ್ಚಯದಲ್ಲಿ ನಿನ್ನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವಿನ ಸಂಖ್ಯೆ 44ಕ್ಕೆ ಏರಿದೆ.
ಎಂಟು ಗೋಪುರಗಳಲ್ಲಿ ಏಕಕಾಲದಲ್ಲಿ ಹೊತ್ತಿಕೊಂಡ ಬೆಂಕಿ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಭೀಕರ ದುರಂತವಾಗಿ ಪರಿಗಣಿಸಲಾಗಿದೆ.
ಅಗ್ನಿಶಾಮಕ ಇಲಾಖೆಯ ಪ್ರಕಾರ ಎಂಟು ಕಟ್ಟಡಗಳಲ್ಲಿ ಒಂದು ಗೋಪುರ ಮಾತ್ರ ಸುರಕ್ಷಿತವಾಗಿದೆ. ನಾಲ್ಕು ಕಟ್ಟಡಗಳಲ್ಲಿ ಬೆಂಕಿ ಸಂಪೂರ್ಣ ನಂದಿಸಲಾಗಿದೆ; ಇನ್ನೂ ಮೂರು ಗೋಪುರಗಳಲ್ಲಿ ಜ್ವಾಲೆಗಳು ಮುಂದುವರಿದಿವೆ.
ರಾತ್ರಿಯಿಡೀ ಕಾರ್ಯನಿರ್ವಹಿಸಿದ ರಕ್ಷಣಾ ತಂಡಗಳು 3ರಿಂದ 13ನೇ ಮಹಡಿಗಳ ನಡುವೆ ತುರ್ತು ಕಾರ್ಯಾಚರಣೆ ನಡೆಸಿದ್ದು, 5ರಿಂದ 18ನೇ ಮಹಡಿಗಳು ತೀವ್ರ ಹಾನಿಗೊಳಗಾಗಿವೆ ಎಂದು ತಿಳಿಸಿದೆ.
100ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದ್ದು, ಬೆಳಗಿನ ವೇಳೆಗೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲ್ಪಟ್ಟ ಗಾಯಾಳುಗಳ ಸಂಖ್ಯೆ 48ಕ್ಕೆ ಏರಿದ್ದು, ಅವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ.ಬೆಂಕಿ ನಂದಿಸುವ ಕಾರ್ಯದಲ್ಲಿ ಏಳು ಅಗ್ನಿಶಾಮಕ ಸಿಬ್ಬಂದಿಗೂ ಗಾಯಗಳಾಗಿವೆ.
ಘಟನೆಯ ಮೂಲ ಕಾರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ನಿರ್ಮಾಣ ಕಂಪನಿಯ ಇಬ್ಬರು ನಿರ್ದೇಶಕರು ಮತ್ತು ಒಬ್ಬ ಸಲಹಾ ಇಂಜಿನಿಯರ್ ಅವರನ್ನು ನರಹತ್ಯೆ ಆರೋಪದಡಿ ಬಂಧಿಸಿದ್ದಾರೆ.
ಹಾಂಗ್‌ಕಾಂಗ್ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ ಕಾ-ಚಿಯು ಅವರು ಮಧ್ಯರಾತ್ರಿ ಸರ್ಕಾರದ ಪ್ರತಿಕ್ರಿಯೆಯನ್ನು ಪ್ರಕಟಿಸಿದ್ದು, ಬೆಂಕಿ ನಂದಿಸುವುದು, ಕಟ್ಟಡದಲ್ಲಿ ಸಿಲುಕಿರುವವರ ರಕ್ಷಣೆ ಮತ್ತು ಗಾಯಾಳುಗಳಿಗೆ ಚಿಕಿತ್ಸೆ – ಇವೇ ಪ್ರಸ್ತುತ ಆಡಳಿತದ ತುರ್ತು ಆದ್ಯತೆಗಳು” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa