ಗ್ಯಾರಂಟಿ ಯೋಜನೆಗಳಲ್ಲಿ ಗದಗ ತಾಲೂಕು ಅಗ್ರಸ್ಥಾನ
ಗದಗ, 25 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ತಾಲೂಕು ಅಗ್ರಸ್ಥಾನ ಪಡೆದಿದ್ದರೂ, ಯುವನಿಧಿ ಯೋಜನೆಯ ಪ್ರಗತಿ ಇನ್ನೂ ಹೆಚ್ಚಿಸಬೇಕಿದೆ ಎಂಬುದಾಗಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅವರು ಹೇಳಿದರು. ಜಿಲ್ಲಾಡಳಿತ
ಫೋಟೋ


ಗದಗ, 25 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ತಾಲೂಕು ಅಗ್ರಸ್ಥಾನ ಪಡೆದಿದ್ದರೂ, ಯುವನಿಧಿ ಯೋಜನೆಯ ಪ್ರಗತಿ ಇನ್ನೂ ಹೆಚ್ಚಿಸಬೇಕಿದೆ ಎಂಬುದಾಗಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅವರು ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷತೆ ವಹಿಸಿದ ಅವರು, ಯೋಜನೆಯ ಶೇಕಡಾ 100 ಪ್ರಗತಿ ಸಾಧನೆಗೆ ಎಲ್ಲ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರ ಸಹಕಾರ ಅತ್ಯಗತ್ಯ. ಯೋಜನೆಯ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು ಎಂದರು.

ಯುವನಿಧಿಗೆ ಹೆಚ್ಚು ಗಮನ : ಯುವನಿಧಿ ಯೋಜನೆಯಲ್ಲಿ ನೋಂದಣಿ ಆದ ಎಲ್ಲರ ಮಾಹಿತಿಯನ್ನು ಸಂಪೂರ್ಣವಾಗಿ ನೀಡುವಂತೆ ಅವರು ಕೇಳಿಕೊಂಡರು. ಕೇವಲ ಹಣ ಪಾವತಿದಾರರ ಮಾಹಿತಿ ಮಾತ್ರ ಸಾಲದು ಎಂದು ಒತ್ತಿಹೇಳಿದರು. ಸಭೆಗೆ ಮುಂಚಿತವಾಗಿ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ, ಪ್ರಗತಿ ಮತ್ತು ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಕೈಗೊಂಡ ಕ್ರಮಗಳ ವಿವರ ಸಭೆಗೆ ತರಬೇಕೆಂದು ಸೂಚಿಸಿದರು.ಉದ್ಯೋಗಾಧಿಕಾರಿಗಳು ಯುವನಿಧಿ ಯೋಜನೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.

ಪಡಿತರ ಕಾರ್ಡ್ ವಿವಾದಕ್ಕೆ ಸ್ಪಷ್ಟೀಕರಣ :

ಪಡಿತರ ಕಾರ್ಡ್ ಅಧಿಕಾರಿಗಳು ವಿನಾಕಾರಣ ರದ್ದು ಮಾಡುತ್ತಿದ್ದಾರೆಂನ ಚರ್ಚೆಗಳನ್ನು ಸೂಚಿಸಿದ ಅಶೋಕ ಮಂದಾಲಿ ಅವರು, ಪಡಿತರ ಚೀಟಿ ರದ್ದು ಮಾಡಲಾಗುತ್ತಿಲ್ಲ. ಆದಾಯ ಅಧಿಕವಿರುವ ಕುಟುಂಬಗಳ ಬಿಪಿಎಲ್ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗುತ್ತಿದೆ. ಈ ವಿಷಯ ಕಾರ್ಡ್ ದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದರು.

ಪಾರದರ್ಶಕತೆ ಮತ್ತು ಜವಾಬ್ದಾರಿ : ಪಂಚಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲೀಕರಿಸುವ ಉದ್ದೇಶ ಹೊಂದಿವೆ ಎಂದು ಸ್ಮರಿಸಿದ ಅವರು, ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯುವಲ್ಲಿ ವಿಳಂಬ ಆಗಬಾರದು ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಬೇಕು. ಶೇಕಡಾ 100 ಪ್ರಗತಿ ಸಾಧಿಸಲು ಎಲ್ಲ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಿಹೇಳಿದರು.

ಯೋಜನೆಗಳ ಮಹತ್ವ ಅರ್ಥಮಾಡಿಕೊಂಡು, ಅರ್ಹರಿಗೆ ಸೌಲಭ್ಯ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ. ಅವರು, ಸಭೆಗೆ ಮುಂಚಿತವಾಗಿ ಸರಿಯಾದ ಮಾಹಿತಿ ಒದಗಿಸುವಂತೆ ಮತ್ತು ಯುವನಿಧಿ ನೋಂದಣಿ ವಿವರ ನೀಡುವಂತೆ ಕೇಳಿಕೊಂಡರು.

ಸದಸ್ಯರು ಸಭೆಯ ನೋಟೀಸ್ ಒಂದು ವಾರ ಮುಂಚಿತವೇ ಕಳುಹಿಸಬೇಕು ಮತ್ತು ದಿಡೀರ್ ಸಭೆ ಕರೆಯದಂತೆ ಕೇಳಿಕೊಂಡರು. ಇದರ ಪ್ರತಿಕ್ರಿಯೆಯಾಗಿ ಅಧ್ಯಕ್ಷರು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಪಂಚಗ್ಯಾರಂಟಿ ಯೋಜನೆಯ ಗದಗ ತಾಲೂಕಿಗೆ ಸಂಬಂದಿಸಿದಂತೆ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಜುಲೈ 2025 ರವರೆಗೆ ಗದಗ ತಾಲೂಕಿನಲ್ಲಿ ಯಜಮಾನಿ ಹೆಸರಿನಲ್ಲಿ ಒಟ್ಟು 82193 ಜನರು ಪಡಿತರ ಹೊಂದಿರುತ್ತಾರೆ. 81967 ಅರ್ಜಿಗಳು ನೊಂದಣಿಯಾಗಿದ್ದು ಅದರಲ್ಲಿ 78986 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಶೇ 96.36 ರಷ್ಟು ಪ್ರಗತಿ ಸಾಧಿಸಲಾಗಿದೆ.

ಅನ್ನಭಾಗ್ಯ ಯೋಜನೆಯಡಿ ಗದಗ-ಬೆಟಗೇರಿ ಯಲ್ಲಿ (ಐಆರ್‌ಎ) ಅಕ್ಟೋಬರ್ 2025 ರ ಮಾಹೆಯಲ್ಲಿ ರಾಜ್ಯ ಸರಕಾರಿ ಅನ್ನಭಾಗ್ಯ ಹಂಚಿಕೆ ಯೋಜನೆಯಡಿ ಒಟ್ಟು 33746 ಪಡಿತರ ಕಾರ್ಡುಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುಗಳು) 5549.80 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.

ಅಕ್ಟೋಬರ್-2025 ಮಾಹೆಯಲ್ಲಿ ( ಕೇಂದ್ರ ಸರ್ಕಾರ ) ಎನ್‌ಎಫ್‌ಎಸ್‌ಎ ಅಕ್ಕಿ ಹಂಚಿಕೆಯಡಿ ಒಟ್ಟು 33746 ಕಾರ್ಡುಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುಗಳೂ) 5856.30 ಕ್ವಿಂಟಾಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಯಡಿ 31-10-2025 ರವರೆಗೆ ಗದಗ ಶಹರ ಉಪವಿಭಾಗದಲ್ಲಿ 52059 ಸ್ಥಾವರಗಳು ಅರ್ಹವಾಗಿದ್ದು, 48481 ಸ್ಥಾವರಗಳ ನೋಂದಣಿಯಾಗಿದ್ದು ಶೇ 99.53 ಪ್ರಗತಿಯಾಗಿದೆ. ದಿ: 31-10-2025 ರವರೆಗೆ ಗೃಹ ಜ್ಯೋತಿ ಯೋಜನೆಯಡಿ ಗದಗ ಗ್ರಾಮೀಣ ಉಪವಿಭಾಗದಲ್ಲಿ 56779 ಸ್ಥಾವರಗಳು ಅರ್ಹವಾಗಿದ್ದು 54190 ಸ್ಥಾವರಗಳ ನೊಂದಣಿಯಾಗಿವೆ. ಶೇ 99.61 ಪ್ರಗತಿಯಾಗಿದೆ.

ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ 31-7-2025 ರವರೆಗೆ 2159 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಜನವೇರಿ 2024 ರಿಂದ ಜುಲೈ 2025ರ ವರೆಗೆ ಡಿಬಿಟಿ ಮೂಲಕ ಒಟ್ಟು-4,69,00,500 ರೂ ಗಳ ಹಣ ವರ್ಗಾವಣೆಯಾಗಿರುತ್ತದೆ ಎಂದು ಸಂಬಂಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ನಿಲಮ್ಮ ಬೋಳನವರ, ಸದಸ್ಯರುಗಳಾದ ಈರಣ್ಣ ಹುನಸಿಕಟ್ಟಿ, ಶರೀಫ ಬೆಳೆಯಲಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ದಯಾನಂದ ಪವಾರ, ಶಂಭು ಕಾಳೆ, ಶ್ರೀಮತಿ ಸಾವಿತ್ರಿ ಹೂಗಾರ, ಸಂಗು ಕೆರಕಲಕಟ್ಟಿ, ಎನ್.ಬಿ.ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿಕಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ ಚಿಂಚಲಿ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್ ಬಾರಕೇರ ಹಾಗೂ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande