
ಕೋಲಾರ, ೧೯ ನವಂಬರ್ (ಹಿ.ಸ.) :
ಆ್ಯಂಕರ್ : ಕೋಲಾರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ ದೇಶದ ಬಡತನ ನಿರ್ಮೂಲನೆ ಹಾಗೂ ಅರ್ಥಿಕ ಅಭಿವೃದ್ದಿಯಲ್ಲಿ ಮಾಜಿ ಪ್ರಧಾನಿ ಹಾಗೂ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಶ್ರಮ ಬಹಳಷ್ಟಿದ್ದು ದೇಶದ ಪ್ರಗತಿಯಲ್ಲಿ ನೆಹರು ಕುಟುಂಬದ ಕೊಡುಗೆ ಅಪಾರವಾಗಿದೆ ಎಂದರು.
ಇಂದಿರಾ ಗಾಂಧಿ ದೇಶದ ಕಂಡ ಸಮರ್ಥ ಪ್ರಧಾನಿಗಳಲ್ಲಿ ಒಬ್ಬರು. ದೇಶವನ್ನು ಮುನ್ನಡೆಸುವ ಜೊತೆಗೆ ಇತರೆ ದೇಶಗಳೊಂದಿಗೆ ಉತ್ತಮ ಭಾಂಧವ್ಯ ಹೊಂದಿ, ಅಭಿವೃದ್ದಿಗೆ ಆದ್ಯತೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ದೇಶದ ಅಭಿವೃದ್ದಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿದ್ದರು ಅವರು ಜಾರಿ ಮಾಡಿದ್ದ ೨೦ ಅಂಶಗಳ ಕಾರ್ಯಕ್ರಮಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ಬಡತನ ನಿರ್ಮೂಲನೆಗಾಗಿ ೨೦ ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿ, ಹಳ್ಳಿ ಹಳ್ಳಿಗಳಲ್ಲಿಯೂ ಪ್ರಚಲಿತದಲ್ಲಿದ್ದರು. ಅವರ ದಕ್ಷ ಆಡಳಿತ, ಪ್ರಾಮಾಣಿಕ ಸೇವೆ, ಬದ್ದತೆ ಇಂದಿನ ಯುವ ಪೀಳಿಗೆ ಹಾಗೂ ಕಾಂಗ್ರೆಸ್ಸಿಗರಿಗೆ ಸ್ಫೂರ್ತಿಯಾಗಿದೆ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್ ಮಾತನಾಡಿ ಇಂದಿರಾಗಾಂಧಿ ಅವರು ಭಾರತದ ಅಭಿವೃದ್ಧಿ ಹರಿಕಾರರು, ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಕೊಟ್ಟವರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಿವಿಧ ಘಟಕಗಳ ಮುಖಂಡರಾದ ಕೆ.ಜಯದೇವ್, ಖಾದ್ರಿಪುರ ಬಾಬು, ಲಾಲ್ ಬಹಾದ್ದೂರ್ ಶಾಸ್ತ್ರಿ, ವೀರೇಂದ್ರ ಪಾಟೀಲ್, ಉಮಾಶಂಕರ್, ನವೀನ್, ಯಲವಾರ ರಾಜಕುಮಾರ್, ಗೋವಿಂದರಾಜು, ಮುನಿವೆಂಕಟಪ್ಪ ಮುಂತಾದವರು ಇದ್ದರು.
ಚಿತ್ರ ; ಕೋಲಾರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್