ಕರ್ನಾಟಕ ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ : ಸಿದ್ದರಾಮಯ್ಯ
ಬೆಂಗಳೂರು, 18 ನವೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕದ ಸುಗಮ ಅನುಮತಿ ವ್ಯವಸ್ಥೆ, ಸ್ಪಷ್ಟ ನೀತಿಗಳು, ಕೌಶಲ್ಯಸಂಪನ್ನ ಮಾನವ ಸಂಪನ್ಮೂಲ ಮತ್ತು ವಿಶ್ವಮಟ್ಟದ ಮೂಲಸೌಕರ್ಯ ರಾಜ್ಯವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವನ್ನಾಗಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳ
Tech


ಬೆಂಗಳೂರು, 18 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದ ಸುಗಮ ಅನುಮತಿ ವ್ಯವಸ್ಥೆ, ಸ್ಪಷ್ಟ ನೀತಿಗಳು, ಕೌಶಲ್ಯಸಂಪನ್ನ ಮಾನವ ಸಂಪನ್ಮೂಲ ಮತ್ತು ವಿಶ್ವಮಟ್ಟದ ಮೂಲಸೌಕರ್ಯ ರಾಜ್ಯವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವನ್ನಾಗಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಇಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಟ್ಟ ‘ಬೆಂಗಳೂರು ಟೆಕ್ ಸಮ್ಮಿಟ್ – 2025’ 28ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ” ಎಂದರು.

ಈ ಶೃಂಗಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ನೀತಿ 2025-2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030 ಮತ್ತು ಸ್ಟಾರ್ಟ್‌ಅಪ್ ನೀತಿ 2025-2030 ಅನ್ನು ಬಿಡುಗಡೆ ಮಾಡುವ ಮೂಲಕ ಕರ್ನಾಟಕವು ಮತ್ತೊಮ್ಮೆ ಭಾರತದ ತಂತ್ರಜ್ಞಾನ ದಿಕ್ಕನ್ನು ನಿರ್ಧರಿಸಿದೆ.

ಹೊಸ ಸ್ಟಾರ್ಟ್‌ಅಪ್ ನೀತಿಯಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 25,000 ಹೊಸ ಸ್ಟಾರ್ಟ್‌ಅಪ್‌ಗಳ ಸ್ಥಾಪನೆ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಬಾರಿ “ಭವಿಷ್ಯೀಕರಣಗೊಳ್ಳಿ” ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿರುವ ಟೆಕ್ ಸಮ್ಮಿಟ್‌ನಲ್ಲಿ 600 ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1200 ಕ್ಕೂ ಹೆಚ್ಚು ಪ್ರದರ್ಶಕರು, 60ಕ್ಕೂ ಹೆಚ್ಚು ದೇಶಗಳ ನಿಯೋಗಗಳು ಪಾಲ್ಗೊಂಡಿದ್ದು,

ಮುಂದಿನ ದಶಕದ ತಂತ್ರಜ್ಞಾನ ರೂಪುರೇಷೆಗಳ ಕುರಿತು ಸಂವಾದ ನಡೆಯಲಿದೆ.

ಕರ್ನಾಟಕ – ಜ್ಞಾನ ಮತ್ತು ನವೀನತಾ ಶಕ್ತಿ ಕೇಂದ್ರ:

ರಾಜ್ಯದಲ್ಲಿ 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಹಾಗೂ 1800 ಐಟಿಐಗಳು ಕಾರ್ಯನಿರ್ವಹಿಸುತ್ತಿವೆ.

ರಾಜ್ಯದ ನಿರುದ್ಯೋಗ ಪ್ರಮಾಣ ಕೇವಲ 4.3% ಇದ್ದದ್ದು ಉತ್ಪಾದಕತೆಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಂಶೋಧನೆ ಮತ್ತು ಐಟಿ ಶಕ್ತಿಯಲ್ಲಿ ಕರ್ನಾಟಕ ನಂ.1

ಭಾರತದ ಐಟಿ ರಫ್ತಿನಲ್ಲಿ ಕರ್ನಾಟಕ 42% ಹಂಚಿಕೆ (ಮೌಲ್ಯ ₹3.2 ಲಕ್ಷ ಕೋಟಿ), 550 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು, 16,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, ದೇಶದ ಒಟ್ಟು ಸ್ಟಾರ್ಟ್‌ಅಪ್ ನಿಧಿಯಲ್ಲಿ 47% ಕೊಡುಗೆ ನೀಡಿದೆ, ಸೆಮಿಕಂಡಕ್ಟರ್, ಏರೋಸ್ಪೇಸ್, ಬಯೋಟೆಕ್, ಗೇಮಿಂಗ್, ಡೀಪ್-ಟೆಕ್ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದರು.

ಕ್ವಾಂಟಮ್ ತಂತ್ರಜ್ಞಾನಕ್ಕೆ ಒತ್ತು:

ಕರ್ನಾಟಕ ಎಐ, ಸೈಬರ್ ಸೆಕ್ಯುರಿಟಿ, ರೋಬೋಟಿಕ್ಸ್, ಅನಿಮೇಷನ್, ದತ್ತಾಂಶ ವಿಜ್ಞಾನ ಕ್ಷೇತ್ರಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದ ರಾಜ್ಯವು, ಕ್ವಾಂಟಮ್ ತಂತ್ರಜ್ಞಾನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಭಾರತದ ಮೊದಲ ರಾಜ್ಯ ಎಂದರು.

ಬೆಂಗಳೂರು ಮಾತ್ರವಲ್ಲ, ‘ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಟೈರ್-2 ನಗರಗಳು ನವೀನತಾ ಕೇಂದ್ರಗಳಾಗಿ ಬೆಳೆಯುತ್ತಿವೆ. ಸಂಶೋಧನೆದಿಂದ ಉತ್ಪಾದನೆವರೆಗೆ, ಕೌಶಲ್ಯದಿಂದ ಮಾರುಕಟ್ಟೆಯವರೆಗೂ ಕರ್ನಾಟಕವು ಹೂಡಿಕೆದಾರರಿಗೆ ಸಂಪೂರ್ಣ ಪರಿಸರ ವ್ಯವಸ್ಥೆ ಒದಗಿಸಿದೆ” ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳುವಂತೆ ಉದ್ದಿಮೆದಾರರಿಗೆ ಮುಖ್ಯಮಂತ್ರಿ ಕರೆ ನೀಡಿದರು.

ತಂತ್ರಜ್ಞಾನವು ಆರ್ಥಿಕ ನ್ಯಾಯ, ಸಾಮಾಜಿಕ ಒಳಿತು ಮತ್ತು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗಬೇಕು ಎಂಬ ಧ್ಯೇಯಕ್ಕೆ ರಾಜ್ಯ ಬದ್ಧವಾಗಿದೆ. ಏಐ, ಕ್ವಾಂಟಮ್, ಜೈವಿಕ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಕಾದಿರುವ ಮಹತ್ತರ ಅವಕಾಶಗಳನ್ನು ಬಳಸಿಕೊಂಡು ಮಾನವ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು” ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande