ಕೋಲಾರದಲ್ಲಿ ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ
ಕೋಲಾರದಲ್ಲಿ ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ
ಚಿತ್ರ : ಕೋಲಾರದಲ್ಲಿ ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಭರಪೂರ ಅನುದಾನವನ್ನು ಮುಖ್ಯಮಂತ್ರಿಗಳು ಒದಗಿಸಿದ್ದಾರೆ.


ಕೋಲಾರ, ೨೯ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ನಟ, ದಿವಂಗತ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಇಡೀ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತ್ತು. ಅವರು ನಿಧನರಾಗಿ ಇಂದಿಗೆ ನಾಲ್ಕು ವರ್ಷಗಳು. ಈ ಹಿನ್ನೆಲೆಯಲ್ಲಿ ನಗರದ ಗಾಂಧಿವನದಲ್ಲಿ ಬುಧವಾರ ಸಂಜೆ ರಾಶಿರಾಪು ತಂಡದವರು ಹಾಗೂ ಅಪಾರ ಅಭಿಮಾನಿಗಳು ಮೇಣದಬತ್ತಿ ಹಚ್ಚುವ ಮೂಲಕ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಕೆ.ಎಸ್.ಗಣೇಶ್, ಪುನೀತ್ ರಾಜ್ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾದವರು. ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ, ಸಜ್ಜನಿಕೆ, ಬದುಕಿನ ಬಗೆಗಿನ ಪ್ರೀತಿ ಅವರನ್ನು ಎಲ್ಲರೆದೆಯಲ್ಲಿ ಜೀವಂತವಾಗಿಸಿದೆ. ಎಂದಿಗೂ ಮಾಸದ ನಗುಮೊಗದ ಅಪ್ಪುವಿಗೆ ಪುಣ್ಯಸ್ಮರಣೆಯ ಪ್ರೀತಿಪೂರ್ವಕ ನಮನಗಳು ಎಂದು ತಿಳಿಸಿದರು.

ಮುಖಂಡ ಕೆ.ಜಯದೇವ್ ಮಾತನಾಡಿ, ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು, ಪ್ರತಿಯೊಬ್ಬರ ಮನೆ ಮಗನಾಗಿ ಜನ ಮನ್ನಣೆ ಗಳಿಸಿದ್ದ ಅಪ್ಪು ನಮ್ಮನ್ನೆಲ್ಲ ಅಗಲಿ ಇಂದಿಗೆ ೪ ವರ್ಷ, ಕರ್ನಾಟಕ ರತ್ನ ಅಪ್ಪು ಅವರ ಪುಣ್ಯಸ್ಮರಣೆಯಂದು ಅವರ ಕಲಾ ಸೇವೆ ಹಾಗೂ ಜನಸೇವೆಯನ್ನು ಸ್ಮರಿಸೋಣ ಎಂದು ನುಡಿದರು.

ಹಿರಿಯ ಕನ್ನಡ ಹೋರಾಟಗಾರ ಕೋ.ನಾ. ಪ್ರಭಾಕರ್ ಮಾತನಾಡಿ, ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ‘ಕರ್ನಾಟಕ ರತ್ನ‘, ನಮ್ಮೆಲ್ಲರ ಪ್ರೀತಿಯ ಅಪ್ಪು ದಿ.ಡಾ.ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳು ಎಂದು ಹೇಳಿದರು.

ಈ ವೇಳೆ ’ಎಸ್.ಎಸ್. ಎಲ್ ಇವೆಂಟ್ಸ್’ ವತಿಯಿಂದ ಅಪ್ಪು ನಟಿಸಿದ್ದ ಪ್ರಸಿದ್ಧ ಹಾಡುಗಳನ್ನು ಹಾಡುವ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ನೂರಾರು ಅಭಿಮಾನಿಗಳು ಹಾಡುಗಳನ್ನು ಕೇಳಿ ಮರುಕ ವ್ಯಕ್ತಪಡಿಸಿದರು. ಹಾಗೂ ಅಭಿಮಾನಿಗಳಿಂದ ಅನ್ನಸಂತರ್ಪಣೆ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಅಭಿಮಾನಿಗಳಾದ ನಾ.ಮಂಜುನಾಥ್, ಮುನಿವೆಂಕಟೇಶ್, ರಾಜೇಂದ್ರ ಸಿಂಹ, ರವಿಕುಮಾರ್, ಅಪ್ಪಿ ನಾರಾಯಣಸ್ವಾಮಿ, ಜಯಕರ್ನಾಟಕ ತ್ಯಾಗರಾಜ್, ಚಂಬೆ ರಾಜೇಶ್, ಪ್ರಮೀಳಾಮ್ಮ ರಾಜ, ರಾಶಿರಾಪು ಶ್ರೀಕಾಂತ್, ಶ್ರೀಹರಿಗೌಡ, ಹರ್ಷಿತ್, ಶಬರೀಶ್ ಕುಮಾರ್, ಸಂಗೀತ್, ಸರಸ್ವತಿ, ರಂಜಿತ್, ಸುಬ್ರಮಣಿ, ಶಿವ, ಪ್ರತಾಪ್, ಮಂಜುನಾಥ್ ಮತ್ತಿತರರು ಹಾಜರಿದ್ದರು.

ಚಿತ್ರ : ಕೋಲಾರದಲ್ಲಿ ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande