ನ್ಯಾಯಾಂಗದಲ್ಲೂ ಕಪ್ಪು ಕುರಿಗಳಿವೆ : ನಿವೃತ್ತ ನ್ಯಾಯಮೂರ್ತಿ ಮುರಾರಿ ಮೌನಿ
ನ್ಯಾಯಾಂಗದಲ್ಲೂ ಕಪ್ಪು ಕುರಿಗಳಿವೆ.ನಿವೃತ್ತ ನ್ಯಾಯಮೂರ್ತಿ ಮುರಾರಿ ಮೌನಿ.
ಚಿತ್ರ; ಕೋಲಾರ ವಕೀಲರ ಸಂಘದ ಆಶ್ರಯದಲ್ಲಿ ನಿವೃತ್ತ ನ್ಯಾಯಮೂರ್ತಿ ಮುರಾರಿ ಮೌನಿಯವರನ್ನು ಅಭಿನಂದಿಸಲಾಯಿತು.


ಕೋಲಾರ, ೨೯ ಅಕ್ಟೋಬರ್ (ಹಿ.ಸ) :

ಆ್ಯಂಕರ್ : ಕೆಲವೇ ಮಂದಿಯಿಂದ ನ್ಯಾಯಾಂಗ ವ್ಯವಸ್ಥೆ ಕಲುಷಿತಗೊಂಡಿದೆ. ಅಂತಹ ವ್ಯಕ್ತಿಗಳಿಂದ ನ್ಯಾಯಾಂಗ ವ್ಯವಸ್ಥೆಯನ್ನು ಅನುಮಾನದಿಂದ ನೋಡಬೇಕಾಗಿದೆ. ವಕೀಲರೇ ನ್ಯಾಯಾಧೀಶರಾಗುವುದು. ಆದರೆ ಪ್ರಾಮಾಣಿಕರು ನ್ಯಾಯಾಧೀಶರಾದರೆ ನ್ಯಾಯಾಂಗ ವ್ಯವಸ್ಥೆ ಸಹ ಪ್ರಾಮಾಣಿಕವಾಗಿರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಕಪ್ಪು ಕುರಿಗಳಿವೆ. ಕಳ್ಳರು ಸುಳ್ಳರು ಆದ ವಕೀಲರು ನ್ಯಾಯಾಧೀಶರಾದರೆ ಇಡೀ ವ್ಯವಸ್ಥೆ ಹದಗೆಡುತ್ತದೆ ಎಂದು ನಿವೃತ್ತ ನ್ಯಾಯಾಧೀಶರಾದ ಮುರಾರಿ ಮೌನಿಯವರು ತಾವು ನ್ಯಾಯಾಧೀಶರಾಗಿದ್ಧಾಗ ಆದ ಅನುಭವವನ್ನು ಹಂಚಿಕೊಂಡರು.

ಕೋಲಾರ ವಕೀಲರ ಸಂಘದಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿವಮೊಗ್ಗದಲ್ಲಿ ಸಿವಿಲ್ ನ್ಯಾಯಾಧೀಶರಾಗಿದ್ದಾಗ ರಾತ್ರಿ ಸುಮಾರು ಒಂದು ಘಂಟೆಯಲ್ಲಿ ಪ್ರಕರಣದ ತೀರ್ಪು ಬರೆಯಲು ಸಿದ್ದತೆ ನಡೆಸಿದ್ದೆ.ಯಾರೋ ಮಫ್ತಿಯಲ್ಲಿದ್ದ ಪೋಲೀಸರು ನಾವು ಪೋಲೀಸರು ಎಂದರು.

ಆರೋಪಿಗಳನ್ನು ಕರೆ ತಂದಿರಬಹುದು ಎಂದು ಭಾವಿಸಿ ಬಾಗಿಲು ತೆಗೆದೆ. ಸಾರ್ ನಾವು ಭದ್ರವತಿಯ ಪೋಲೀಸರು, ಸಾರ್ ಸಾಹೇಬರು ತೇಗದ ಲಾಗ್ ಕಳುಹಿಸಿದ್ದಾರೆ. ಸೆಷೆನ್ಸ್ ನ್ಯಾಯಾಧೀಶರ ಮನಗೆ ತಲುಪಿಸ ಬೇಕೆಂದು ಸಾಹೇಬರು ಹೇಳಿದ್ದಾರೆ ಎಂದರು. ನಾನು ಸೆಷೆನ್ಸ್ ನ್ಯಾಯಾಧೀಶನಲ್ಲ. ಇದೇ ಸಾಲಿನಲ್ಲಿ ಕಡೆ ಮನೆಗೆ ಹೋಗಿ ಎಂದೆ. ನಾನು ಹೊರಗೆ ಹೋಗಿ ನೋಡಿದಾಗ ಸೆಷೆನ್ಸ್ ನ್ಯಾಯಾಧೀಶರು ಮನೆಯಿಂದ ಹೊರಗೆ ಬಂದು ನಿಂತಿದ್ದರು. ಪೋಲೀಸರು ತೇಗದ ಮರಗಳನ್ನು ಇಳಿಸಿ ಕಾರ್ ಶೆಡ್ಗೆ ಸಾಗಿಸಿದರು ಎಂದು ನ್ಯಾಯಧೀಶರು ಮತ್ತು ಪೋಲೀಸರ ನಡುವಿನ ಅಪವಿತ್ರ ಮೈತ್ರಿಯನ್ನು ಎಳೆಎಳೆಯಾಗಿ ಬಿಚ್ಚಿ ವಿವರಿಸಿದರು .

ಮರು ದಿನ ನ್ಯಾಯಾಲಯಕ್ಕೆ ಹೋದಾಗ ಹೆಚ್ಚಿವರಿ ಸೆಷೆನ್ಸ್ ನ್ಯಾಯಾಧೀಶರನ್ನು ಬೇಟಿಯಾಗಿ ಎನ್ ಸಾರ್ ಪೋಲೀಸರು ಕಳುಹಿಸಿದ ತೇಗದ ಲಾಗ್ ಸೇರಿತೆ ಎಂದೆ. ನನ್ನ ಮಾತು ಕೇಳುತ್ತಿದ್ದಂತೆ ನ್ಯಾಯಾಧೀಶರು ಹೌಹಾರಿದರು. ನಾನು ರಾತ್ರಿ ನಡೆದ ಕತೆಯನ್ನು ವಿವರಿಸಿದೆ. ಸರಿ ನೀವು ಪ್ರತ್ಯಕ್ಷ ಸಾಕ್ಷಿಯಾಗಿದ್ದೀರಿ ಹೋಕೋರ್ಟ್ಗೆ ದೂರು ಬರೆಯರಿ ಎಂದರು. ಆದರೆ ನಾನು ದೂರು ಬರೆಯಲಿಲ್ಲ. ನಾನು ವರ್ಗಾವಣೆಯಾದ ದಿನ ಅಂದು ನಡೆದ ಕತೆಯನ್ನು ನ್ಯಾಯಾಧೀಶರು ಮತ್ತು ವಕೀಲರ ಮುಂದೆ ವಿವರಿಸಿದೆ ಎಂದು ತಮ್ಮ ವೃತ್ತಿ ಜೀವನದಲ್ಲಿ ಕಣ್ಣಾರೆ ಕಂಡ ನ್ಯಾಯಧೀಶರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರು.

ಕೋಲಾರದಲ್ಲಿ ನಾನು ವಕೀಲಿ ವೃತ್ತಿಯನ್ನು ಕೆ.ಆರ್.ಶ್ರೀನಿವಾಸಯ್ಯನವರ ಬಳಿ ಆರಂಭಿಸಿದೆ.ಅವರು ಎಂದು ನನ್ನನ್ನು ಜ್ಯೂನಿಯರ್ ಎಂದು ಯಾವಾಗಲು ನೋಡಲಿಲ್ಲ. ನನ್ನ ಸಲಹೆಗಳನ್ನು ಪಡೆಯಯತ್ತಿದ್ದರು. ಅವರು ಪಬ್ಲಿಕ್ ಪ್ರಾಸೀಕ್ಯೂಟರ್ ಆಗಿದ್ದಾಗ ಕೊಲೆ ಕೇಸ್ ವಿಚಾರಣೆಗೆ ಬಂದಿತ್ತು. ಸರ್ ಸ್ಥಳಕ್ಕೆ ಹೋಗಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಬೇಕು ಎಂದು ಹೇಳಿದೆ .ಆದರೆ ನನ್ನ ಬಳಿ ಕಾರ್ ಇಲ್ಲ ಎನ್ ಮಾಡೋದು ಎಂದರು. ಎಸ್ಪಿಗೆ ಪತ್ರ ಬರೆದು ಜೀಪ್ ತರೆಸಿಕೊಂಡು ಸ್ಥಳ ಪರಿಶೀಲಿಸಿದೆವು. ಶ್ರೀನಿವಾಸಯ್ಯನವರು ಸದಾ ನನ್ನನ್ನು ಬೆಂಬಲಿಸುತ್ತಿದ್ದರು ಎಂದು ತಿಳಿಸಿಸಿದರು.

ಕೆಲವು ವರ್ಷಗಳನಂತರ ನಾನು ಎ.ಪಿ.ಪಿ ಆಗಿ ನೇಮಕವಾದೆ. ಪೋಲೀಸರು ಕೆಲವು ಪ್ರಕರಣಗಳಲ್ಲಿ ಲಂಚ ಕೊಡಲು ಬರುತ್ತಿದ್ದರು. ಆದರೆ ನಾನು ಲಂಚ ಪಡೆಯಲು ನಿರಾಕರಿಸಿದೆ. ಸಾರ್ ನೀವು ನಾಲಯಕ್ ಈ ಹುದ್ದೆಗೆ ಎಂದು ಹಿಯಾಳಿಸಿದರು. ಆನಂತರ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಹೊಳೆನರಸಿಪುರಕ್ಕೆ ಮೊದಲ ಬಾರಿಗೆ ನೇಮಕಾತಿ ಆಯಿತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಹೆ.ಚ್.ಡಿ ದೇವೇ ಗೌಡರ ವಿರುಧ್ಧ ಅವರ ಎದುರಾಳಿಯಾಗಿದ್ದ ಕುಮಾರ ಸ್ವಾಮಿಯವರು ಒಂದು ಕೇಸ್ ದಾಖಲಿಸಿದ್ದರು ಕಡೆಗೆ ಇಬ್ಬರನ್ನು ರಾಜೀ ಮಾಡಿಸಿದೆ ಎಂದು ನೆನಪುಗಳನ್ನು ಮೆಲಕು ಹಾಕಿದರು.

ಆನಂತರ ಕೆ.ಆರ್ .ಪೇಟೆಗೆ ವರ್ಗಾವಣೆಯಾದೆ.ಅಲ್ಲಿ ವಕ್ಕಲಿಗರಿಗೆ ಮತ್ತು ಕುರುಬರಿಗೆ ರಾಜಕೀಯ ವೈಷಮ್ಯವಿತ್ತು. ಆದರೆ ನಾನು ನಿಷ್ಪಕ್ಷಪಾತದಿಂದ ನಡೆದು ಕೊಂಡ ಕಾರಣ ಎಲ್ಲರು ಗೌರವಿಸುತ್ತಿದ್ದರು. ನಾವು ನ್ಯಾಯ ನಿಷ್ಠೂರದಿಂದ ನಡೆದುಕೊಂಡರೆ ನಮ್ಮನನ್ನು ಎಲ್ಲರೂ ಗೌರವಿಸಯತ್ತಾರೆ ಎಂದು ತಿಳಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಮಾತನಾಡಿ ಪ್ರಾಮಾಣಿಕತೆ ಮತ್ತು ನೈತಿತೆಯಿಂದ ನಡೆದುಕೊಂಡರೆ ನಮ್ಮನ್ನು ಜನ ಗೌರವಿಸುತ್ತಾರೆ ಎಂಬುದಕ್ಕೆ ಮುರಾರಿ ಮೌನಿಯವರು ನಿದರ್ಶನವಾಗಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ವಕೀಲರು ವೃತ್ತಪರರಾಗಬೇಕು. ಕೃತಕ ಬುದ್ದಿಮತ್ತೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಬದಲಾದ ಕಾಲಘಟ್ಟದಲ್ಲಿ ವಕೀಲರು ತಾಂತ್ರಿಕವಾಗಿ ಬದಲಾಗಬೇಕೆಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರಾಮಲಿಂಗೇಗೌಡರು , ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ .ಶ್ರೀನಿವಾಸ್,ಪ್ರಧಾನ ಕಾರ್ಯದರ್ಶಿ ಆದರ್ಶ್,ಉಪ ಪ್ರಧಾನ ಕಾನೂನು ಅಭಿರಕ್ಷಕರಾದ ಎನ್.ಸತೀಶ್ ಭಾಗವಹಿಸಿದ್ದರು.

ಚಿತ್ರ; ಕೋಲಾರ ವಕೀಲರ ಸಂಘದ ಆಶ್ರಯದಲ್ಲಿ ನಿವೃತ್ತ ನ್ಯಾಯಮೂರ್ತಿ ಮುರಾರಿ ಮೌನಿಯವರನ್ನು ಅಭಿನಂದಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande