
ವಿಜಯಪುರ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭ್ರಷ್ಟಾಚಾರವನ್ನು ತೊಲಗಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ. ಭ್ರಷ್ಟಾಚಾರವೆನ್ನುವುದನ್ನು ಹೋಗಲಾಡಿಸಿದಲ್ಲಿ ನಮ್ಮ ದೇಶ ತನ್ನಿಂದ ತಾನೇ ಪ್ರಗತಿ ಸಾಧಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಹೇಳಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕರ್ನಾಟಕ ಲೋಕಾಯುಕ್ತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭ್ರಷ್ಟಾಚಾರ ತಡೆಗಟ್ಟುವ ಜಾಗೃತಿ ಅರಿವು ಸಪ್ತಾಹ ೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭ್ರಷ್ಟಾಚಾರ ಜನ ಜಾಗೃತಿ ಮೂಡಿಸುವುದು ಕೇವಲ ಒಂದು ದಿನ ಅಥವಾ ವಾರಕ್ಕೆ ಸೀಮಿತಗೊಳಿಸದೆ, ಇಡೀ ಜೀವಮಾನದ ದೈನಂದಿನ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು. ಮಧ್ಯಸ್ಥಗಾರರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟರೂ ಸಹ ಪ್ರಕರಣ ದಾಖಲಾಗುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವಂತೆ ಸಂಬಳ ಇದ್ದಷ್ಟು ಜೀವನ ನಡೆಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ರಾಜೇಶ ಕರ್ಣಂ ಮಾತನಾಡಿ ಜನ ಜಾಗೃತಿ ಮೂಡಿ, ಸಾರ್ವಜನಿಕರು ಜಾಗೃತರಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸರಕಾರಿ ನೌಕರರು ಸಾರ್ವಜನಿಕರ ಸೇವೆಗಾಗಿ ಬಂದವರಾಗಿದ್ದು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಸಮ್ಮತತೆಯ ಆಧಾರದ ಮೇಲೆ ಉತ್ತಮ ಆಡಳಿತ ನೀಡುವಲ್ಲಿ ಬದ್ಧರಾಗಿರಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಅವರು ಮಾತನಾಡಿ ಭ್ರಷ್ಟಾಚಾರ ವಿರೋಧಿ ಅರಿವು ಒಂದು ದಿನದ ಕಾರ್ಯಕ್ರಮವಾಗಿರಬಾರದು, ಪ್ರತಿದಿನದ ಜೀವನದಲ್ಲಿ ಅನುಸರಿಸಿದರೆ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರಿ ನೌಕರರು ಎಲ್ಲರಿಗೂ ಸಮಾನವಾಗಿ ಪಾರದರ್ಶಕವಾಗಿ ಕೆಲಸ ಮಾಡಬೇಕು. ಕಚೇರಿಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ವಿಶ್ವಾಸವನ್ನು ಗೆಲ್ಲಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ ಸರ್ಕಾರಿ ನೌಕರರು ತಮ್ಮ ದೈನಂದಿನ ಕೆಲಸವನ್ನು ನೈತಿಕತೆ ಮತ್ತು ಪಾರದರ್ಶಕತೆಯಿಂದ ಮಾಡಬೇಕು. ಲಂಚ ಸ್ವೀಕರಿಸುವುದೇ ಭ್ರಷ್ಟಾಚಾರವಲ್ಲ, ಕೆಲಸದಲ್ಲಿ ವಿಳಂಬ ಮಾಡಿದರೂ ಅದೂ ಭ್ರಷ್ಟಾಚಾರವೆಂದರು. ಇತ್ತೀಚೆಗೆ ಸಾರ್ವಜನಿಕರು ನೌಕರರ ಕೆಲಸವನ್ನು ಗಮನಹರಿಸಿ ನೋಡುತ್ತಿದ್ದಾರೆ, ಆದ್ದರಿಂದ ತಪ್ಪಾದ ಮೇಲೆ ಸರಿಪಡಿಸುವುದಕ್ಕಿಂತ ತಪ್ಪೇ ಆಗದಂತೆ ಮುಂಚಿತ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಸಿದ್ದೇಶ್ವರ ಅವರು ಪ್ರತಿಜ್ಞಾವಿಧಿ ಭೋದಿಸಿದರು, ಸಂಗಮೇಶ ಸಣ್ಣತಂಗಿ ಕಾರ್ಯಕ್ರಮ ನಿರೂಪಿಸಿದರು, ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಮಲ್ಲಿಕಾರ್ಜನ ಬಿರಾದಾರ ವಂದನಾರ್ಪಣೆ ಸಲ್ಲಿಸಿದರು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಪ್ರಸನ್ನ ದೇಸಾಯಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಲ್ಲೇಶ ಟಿ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande