ಬೆಂಗಳೂರು, 22 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ ಮೂಲಕ ಪ್ರತಿಕ್ರಿಯಿಸಿರುವ ಅಶೋಕ ಅವರು, “ಪ್ರಚಾರದ ಹುಚ್ಚಿಗೆ ಬಿದ್ದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಳಸಲು ಕತೆಯನ್ನು ಹರಿಬಿಟ್ಟು ರಾಜ್ಯದ ಜನರನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ. ಇದು ಅವರ ಹತಾಶೆಯ ಸಂಕೇತ” ಎಂದು ಆರೋಪಿಸಿದ್ದಾರೆ.
ಅವರು ಮುಂದುವರೆದು, “ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರ ಸಂಭಾಷಣೆ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲವೆಂದು ನ್ಯಾಯಾಲಯವೇ ವಜಾಗೊಳಿಸಿದೆ. ಪ್ರಿಯಾಂಕ್ ಖರ್ಗೆ ಅವರೇ, ಇಲ್ಲಸಲ್ಲದ ಆರೋಪ ಮಾಡುವುದಕ್ಕಿಂತ ನಿಮ್ಮ ಇಲಾಖೆಯ ಕೆಲಸಗಳತ್ತ ಗಮನ ಹರಿಸಿದ್ದರೆ, ಚಾಮರಾಜನಗರದ ನೀರಗಂಟಿ ಮತ್ತು ಕಲಬುರ್ಗಿಯ ಗ್ರಂಥಪಾಲಕಿ ಜೀವ ಉಳಿಯುತ್ತಿದ್ದರೆ. ನರೇಗಾ ಸಿಬ್ಬಂದಿಗೂ ಸಂಬಳ ಸಿಕ್ಕಿತ್ತೇನೋ!” ಎಂದು ಟೀಕಿಸಿದ್ದಾರೆ.
ಅಶೋಕ ಅವರು ತಮ್ಮ ಸಂದೇಶದಲ್ಲಿ ಕಾಂಗ್ರೆಸ್‌ನೊಳಗಿನ ವಿವಾದಕ್ಕೂ ಸ್ಪರ್ಶಿಸಿ, “ನಿಮ್ಮದೇ ಪಕ್ಷದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ‘ಕಮಿಷನ್ ಗಿರಾಕಿ’ ಕುರಿತು ಮಾತನಾಡಿದ್ದರು. ಅದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ, ‘ಕಮಿಷನ್ ಗಿರಾಕಿ’ ಯಾರು ಎಂದು ಜನತೆಗೆ ತಿಳಿಸಿ” ಎಂದು ಕಿಡಿ ಕಾರಿದ್ದಾರೆ.
ಕೊನೆಗೆ ಬಸವಣ್ಣನ ವಚನ ಉಲ್ಲೇಖಿಸಿದ ಅವರು, “ಯಾರನ್ನೋ ಮೆಚ್ಚಿಸಲು ಪ್ರಯತ್ನಿಸುವುದಕ್ಕಿಂತ ಮೊದಲು ‘ನಿಮ್ಮ ಮನವ ಸಂತೈಸಿಕೊಳ್ಳಿ’, ಪ್ರಿಯಾಂಕ್ ಖರ್ಗೆ ಅವರೇ” ಎಂದು ಸಲಹೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa