ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ; ಎಫ್‌ಐಆರ್ ದಾಖಲು
ಕೋಲಾರ, ೨೧. ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಹಾಗೂ ಅವರ ಕುಟುಂಬದ ಆರು ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ವರದಕ್ಷಣೆಗಾಗಿ ಕಿರುಕುಳ ಆರೋಪದ ಮೇಲೆ ದೆಹಲಿಯ ನೋಯಿಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಫಾರ್ ಮೆನ್ ಇಂಡಿಯಾ ವೆಬ್ ಸೈಟ್ ವರದಿ ಮಾಡಿದೆ.
ಶಿವಾಂಶು ರಜಪೂತ್ ಅವರ ಪತ್ನಿ ಡಾ.ಕ್ರಿತಿಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಕೆಜಿಎಫ್ ನಲ್ಲಿ ಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಶಿವಾಂಶು ರಜಪೂತ್ ವಿರುದ್ಧ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ೨೦೨೧ರ ಡಿಸೆಂಬರ್ ೯ರಂದು ಶಿವಾಂಶು ರಜಪೂತ್ ಮತ್ತು ಡಾ.ಕ್ರಿತಿಸಿಂಗ್ ವಿವಾಹವಾಗಿತ್ತು. ಪ್ರಸ್ತುತ ಕ್ರಿತಿಸಿಂಗ್ ಎಂಬಿಬಿಎಸ್ ಎಂಡಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಎರಡುವರೆ ವರ್ಷದ ಮಗುವೊಂದಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.
ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ವಿವಾಹಕ್ಕಾಗಿ ೧.೪ ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಉಡುಗೊರೆ, ಆಭರಣಗಳು ಹಾಗೂ ೨೦ ಲಕ್ಷ ರೂ. ನಗದು ವರದಕ್ಷಣೆಯಾಗಿ ನೀಡಲಾಗಿತ್ತು. ವರದಕ್ಷಿಣೆ ನೀಡುವಂತೆ ಶಿವಾಂಶು ರಜಪೂತ್ ಕುಟುಂಬ ಒತ್ತಾಯ ಮಾಡಿತ್ತು. ವಿವಾಹವಾದ ನಂತರ ನಿತ್ಯ ಕಿರುಕುಳ ನೀಡಲಾಗುತ್ತಿತ್ತು. ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ಪತಿ ಶಿವಾಂಶು ರಜಪೂತ್ ಹಾಗೂ ಅತ್ತೆ ಮತ್ತು ಮಾವ ನೀಡುತ್ತಿದ್ದರು. ಕ್ರಿತಿ ಸಿಂಗ್ ಮೈಬಣ್ಣದ ಬಗ್ಗೆ ಹಾಗೂ ಜನಾಂಗೀಯ ನಿಂದನೆ ಮಾಡಲಾಗುತಿತ್ತು. ಶಿವಾಂಶು ಕುಟುಂಬದ ಬೇಡಿಕೆಯ ಮೇರೆಗೆ ೧೯ ಲಕ್ಷ ರೂ. ಕಾರು ಉಡುಗೊರೆಯಾಗಿ ನೀಡಲಾಗಿತ್ತು. ಇಷ್ಟೆಲ್ಲಾ ನೀಡಿದರು ನಿರಂತರವಾಗಿ ಕಿರುಕುಳ ನೀಡಲಾಗುತಿತ್ತು ಎಂದು ಉಲ್ಲೇಖಿಸಿದ್ದಾರೆ.
ಕೌಟುಂಬಿಕ ಕಲಹವನ್ನು ಇತ್ಯರ್ಥ ಪಡಿಸಲು ಎರಡು ಕುಟುಂಬಗಳು ಕಳೆದ ೨೦೨೩ರ ೩೧ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸೇರಿ ಚರ್ಚೆ ನಡೆಸಲಾಗಿತ್ತಂತೆ. ಹಿಂದಿನ ಕಹಿ ಘಟನೆಗಳನ್ನು ಮರೆತು ಕೌಟುಂಬಿಕ ಜೀವನ ಮುಂದುವರೆಸಲು ನಿರ್ಧರಿಸಲಾಯಿತು. ಆದರೆ ಹಣಕಾಸು ಮತ್ತು ಶಿವಾಂಶು ಕುಟುಂಬದ ಸದಸ್ಯರ ಮಧ್ಯಪ್ರವೇಶ ಮಾಡುತ್ತಿರುವುದರಿಂದಾಗಿ ಸಮಸ್ಯೆ ಬಗೆಹರಿಯಲಿಲ್ಲ ಎಂದು ಕ್ರಿತಿ ಆರೋಪಿಸಿದ್ದಾರೆ.
ಆದರೆ ಶಿವಾಂಶು ರಜಪೂತ್ ತನ್ನ ಹಾಗೂ ತನ್ನ ಕುಟುಂಬದ ಸದಸ್ಯರ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ೨೦೧೯ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿರುವ ಶಿವಾಂಶು ರಜಪೂತ್ ತಾನು ಡಾ.ಸಿಂಗ್ ಮತ್ತು ಆಕೆಯ ಕುಟುಂಬ ಕಿರುಕುಳದಿಂದ ಬಲಿಪಶು ಆಗಿದ್ದೇನೆ. ನಿರಂತರವಾಗಿ ಕ್ರಿತಿ ಮತ್ತು ಅವರ ಕುಟುಂಬದಿಂದ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಕಳೆದ ೨೦೨೪ರ ಸೆಪ್ಟೆಂಬರ್ ೧೪ರಂದು ಕ್ರಿತಿ ಮತ್ತು ಆಕೆಯ ತಾಯಿ ನನ್ನನ್ನು ನಿಂದಿಸಿ ಹಲ್ಲೆ ನಡೆಸಿದರು. ಅಲ್ಲದೆ ನನ್ನ ಪೋನ್ ಹ್ಯಾಂಡ್ ಸೆಟ್ಟನ್ನು ನಾಶ ಪಡಿಸಿದರು. ಕ್ರಿತಿ ಮತ್ತು ಅವರ ಕುಟುಂಬದ ಸದಸ್ಯರು ನಡೆಸಿದ ದೌರ್ಜನ್ಯದ ಬಗ್ಗೆ ವಿಡಿಯೋ ಸಾಕ್ಷಿ ತಮ್ಮ ಬಳಿ ಇದೆ. ವೈವಾಹಿಕ ಬದುಕಿನಿಂದ ದೂರು ಉಳಿಯಲು ಮತ್ತು ವಿಚ್ಛೆದನಕ್ಕೆ ಎರಡು ಕುಟುಂಬದ ಸದಸ್ಯರು ಒಪ್ಪಿದ್ದರು. ಕಳೆದ ನವೆಂಬರ್ ೨೦೨೪ರಲ್ಲಿ ಕಾನ್ಫುರ್‌ನಲ್ಲಿ ವಿಚ್ಛೇದನಾ ಕೋರಿ ಕಾನ್ಫುರ್ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ನನ್ನನ್ನು ತೇಜೋವಧೆ ಮಾಡಲು ಸುಳ್ಳು ದೂರುಗಳನ್ನು ಪೊಲೀಸರಿಗಲ್ಲದೆ ಬೇರೆ ಬೇರೆ ತಮ್ಮ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ನಾನಾಗಲೀ ನನ್ನ ಕುಟುಂಬವಾಗಲಿ ವರದಕ್ಷಿಣೆ ಪಡೆದಿಲ್ಲ. ನನ್ನ ಮತ್ತು ಕುಟುಂಬದ ವಿರುದ್ಧ ನಿರಾಧಾರವಾದ ಆರೋಪಗಳನ್ನು ಮಾಡಲಾಗಿದೆ ಎಂದು ಶಿವಾಂಶು ರಜಪೂತ್ ಹೇಳಿರುವುದಾಗಿ ಫಾರ್ ಮೆನ್ ಇಂಡಿಯಾ ವೆಬ್ ಸೈಟ್ ವರದಿ ಮಾಡಿದೆ.
ಶಿವಾಂಶು ರಜಪೂತ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ಐಪಿಎಸ್ ಹುದ್ದೆಗೆ ಆಯ್ಕೆ ಆಗಿದ್ದಾರೆ. ಅವರು ಅತ್ಯಂತ ಪ್ರಮಾಣಿಕ ಮತ್ತು ದಕ್ಷ ಅಧಿಕಾರಿ ಆಗಿದ್ದು, ಇಲಾಖಾ ವಲಯದಲ್ಲಿ ದಕ್ಷತೆ ಮತ್ತು ಪ್ರಮಾಣಿಕತೆಗೆ ಖ್ಯಾತಿ ಆಗಿದ್ದಾರೆ. ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಆಧ್ಯತೆ ನೀಡಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಿವಾಂಶು ರಜಪೂತ್ ರವರ ಪತ್ನಿ ಡಾ.ಕ್ರಿತಿ ಸಿಂಗ್ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದಾರೆ. ಶಿವಾಂಶು ರಜಪೂತ್ ಕರ್ನಾಟಕ ಐಪಿಎಸ್ ಕೇಡರ್‌ಗೆ ಸೇರಿರುವ ಕಾರಣ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಬದಲು ಉತ್ತರ ಪ್ರದೇಶಕ್ಕೆ ವರ್ಗಾವಣೆ ಆಗುವಂತೆ ನಿರಂತರವಾಗಿ ಡಾ.ಕ್ರಿತಿ ಸಿಂಗ್ ಮತ್ತು ಕುಟುಂಬದವರು ಒತ್ತಾಯ ಮಾಡುತ್ತಿದ್ದರು. ಆದರೆ ಶಿವಾಂಶು ರಜಪೂತ್ ಒತ್ತಾಯಕ್ಕೆ ಮಣೆದಿಲ್ಲ. ಮಧ್ಯಮ ವರ್ಗದಿಂದ ಬಂದಿರುವ ಶಿವಾಂಶು ರಜಪೂತ್ ಸರಳ ಜೀವನ ನಡೆಸುತ್ತಿದ್ದಾರೆ. ಆದರೆ ಪತ್ನಿ ಕ್ರಿತಿ ಸಿಂಗ್ ಅದಕ್ಕೆ ವಿರುದ್ಧವಾಗಿ ಐಷಾರಾಮಿ ಮತ್ತು ಸ್ವೇಚ್ಚಾಚಾರ ಬದುಕು ನಡೆಸುತ್ತಿದ್ದಾರೆ. ಶಿವಾಂಶು ಅವರ ಸರಳತೆ ಮತ್ತು ಪ್ರಮಾಣಿಕತೆ ಅವರ ಕೌಟುಂಬಿಕ ಬದುಕಿಗೆ ಮುಳುವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚಿತ್ರ - ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್