ಮೈದುಂಬಿ ಹರಿಯುತ್ತಿರುವ ಪಾಲಾರ್ ನದಿಗಳು ; ಪ್ರವಾಸಿ ತಾಣವಾದ ಬೇತಮಂಗಲ
ಮೈದುಂಬಿ ಹರಿಯುತ್ತಿರುವ ಪಾಲಾರ್ ನದಿಗಳು ; ಪ್ರವಾಸಿ ತಾಣವಾದ ಬೇತಮಂಗಲ
ಚಿತ್ರ - ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಕರೆ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ.


ಮೈದುಂಬಿ ಹರಿಯುತ್ತಿರುವ ಪಾಲಾರ್ ನದಿಗಳು ; ಪ್ರವಾಸಿ ತಾಣವಾದ ಬೇತಮಂಗಲ

ಕೋಲಾರ, ೨೧. ಅಕ್ಟೋಬರ್ (ಹಿ.ಸ) :

ಆ್ಯಂಕರ್ : ಸಾವಿರಾರು ಕೆರೆ ಕುಂಟೆಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿನ ಕೆರೆಗಳ ಪೈಕಿ ಬಹು ದೊಡ್ಡ ಕೆರೆಗಳಾದ ಬೇತಮಂಗಲ ಪಾಲಾರ್ ಮತ್ತು ರಾಮಸಾಗರ ಬುಕ್ಕ ಸಾಗರ ಕೆರೆಗಳು ಸುಮಾರು ಒಂದು ವಾರದಿಂದ ಕೋಡಿ ಹೋಗುತ್ತಿದ್ದು ಮೈತುಂಬಿ ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದ್ದು ಇಲ್ಲಿನ ಪ್ರಕೃತಿಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನಲೆಯಲ್ಲಿ ಪ್ರಖ್ಯಾತ ಪ್ರವಾಸಿ ತಾಣವಾಗಿ ಕಂಡು ಬರುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಹುಟ್ಟಿ ಚಿಂತಾಮಣಿ, ಶ್ರೀನಿವಾಸಪುರ ತಾಲುಕಿನ ಹಲವಾರು ಕೆರೆ, ಕುಂಟೆಗಳನ್ನೂ ದಾಟಿ ಬೇತಮಂಗಲ, ರಾಮಸಾಗರ ಕೆರೆಗಳ ಮೂಲಕ ಸಾಗುವು ಪಾಲಾರ್ ನದಿಯು ಕ್ರಮೇಣ ಆಂಧ್ರ ತಮಿಳುನಾಡು ಮೂಲಕ ಬಂಗಾಳ ಕೊಲ್ಲಿ ಸಮುದ್ರ ಸೇರುತ್ತದೆ.

ಬೇತಮಂಗಲ ಪಾಲಾರ್ ಈಗ ಪ್ರವಾಸಿ ತಾಣ:-ಕೋಲಾರ ಜಿಲ್ಲೆಯ ಬಹುತೇಕ ಕೆರೆಕುಂಟೆಗಳು ತುಂಬಿರುವ ಹಿನ್ನಲೆಯಲ್ಲಿ ಪಾಲಾರ್ ನದಿ ಪಾತ್ರದಲ್ಲಿನ ಕೆರೆ ಕುಂಟೆಗಳು ಕಣಿವೆಯ ಮೂಲಕ ಬೇತಮಂಗಲ ಕೆರೆಗೆ ಬಂದು ಸೇರುತ್ತಿರುವ ಹಿನ್ನಲೆಯಲ್ಲಿ ಕಳೆದ ಹತ್ತು ದಿನಗಳಿಂದ ಬೇತಮಂಗಲ ಪಾಲಾರ್ ಕೆರೆ ಮತ್ತು ರಾಮಸಾಗರ ಬುಕ್ಕಸಾಗರ ಕೆರೆಗಳು ನದಿ ರೂಪದಲ್ಲಿ ನೀರು ಹರಿದು ಹೋಗುತ್ತಿರುವ ದೃಶ್ಯಗಳನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ, ಕೋಲಾರ ಜಿಲ್ಲೆಯಷ್ಟೇ ಅಲ್ಲದೆ ಪಕ್ಕದ ಆಂಧ್ರ ತಮಿಳುನಾಡಿನಿಂದಲೂ ಸಾವಿರಾರು ಮಂದಿ ಪ್ರವಾಸಿಗರು ತಮ್ಮ ಕುಟುಂಬ, ಸ್ನೇಹಿತರೂಂದಿಗೆ ಬರುತ್ತಿರುವ ಹಿನ್ನಲೆಯಲ್ಲಿ ಇದೊಂದು ಪ್ರಖ್ಯಾತ ಜಲಪಾತ ತಾಣ ವೇನೂ ಎಂಬಂತೆ ಕಾಣುತ್ತಿದೆ.

ಬೇತಮಂಗಲ ಹೊರವಲಯದ ಕೋಡಿಹಳ್ಳಿ ಬಳಿ ಪಾಲಾರ್ ಕೆರೆ ಕೋಡಿ ಹೋಗುವ ಸ್ಥಳವಾಗಿದೆ,ಅಲ್ಲಿ ಹರಿಯುತ್ತಿರುವ ನೀರು ಸುಂದರ ಪ್ರಕೃತಿಯನ್ನೇ ಸೃಷ್ಟಿ ಮಾಡಿದೆ ಕೋಡಿ ಕಟ್ಟೆಯಿಂದ ಹೊರ ಹೋಗುತ್ತಿರುವ ನೀರು ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದು ಅಲ್ಲಿನ ನೀರಿನಲ್ಲಿ ಇಳಿದು ಮೋಜು ಮಸ್ತಿ ಮಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ, ವಿಶೇಷವಾಗಿ ಮಹಿಳೆಯರು, ಮಕ್ಕಳು, ಯುವಕರು ಇಲ್ಲಿನ ಪ್ರಕೃತಿ ವಾತಾವರಣವನ್ನು ತಮ್ಮದೇ ಆದ ರೀತಿಯಲ್ಲಿ ಆಸ್ವಾದಿಸುತ್ತಾ ಮೈ ಮರೆಯುತ್ತಿದ್ದಾರೆ.

ತಾತ್ಕಾಲಿಕ ತಿಂಡಿ ತಿನಿಸು ಅಂಗಡಿಗಳು

ಕಳೆದ ಒಂದು ವಾರದಿಂದ ಒಂದೇ ಸಮನೆ ನೀರು ಹರಿಯುತ್ತಿರುವ ಹಿನ್ನಲೆಯಲ್ಲಿ ಜನರ ಮೂಲಕವಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳ ಮೂಲಕ ಇಲ್ಲಿನ ಜಲಪಾತ,ನೀರಿನಲ್ಲಿ ಮೋಜು ಮಸ್ತಿ ಮಾಡುವ ದೃಶ್ಯಗಳು ಸಖತ್ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇದರಿಂದಾಗಿ ಪ್ರವಾಸಿಗರನ್ನು ಗುರಿಯಾಗಿ ಇಟ್ಟುಕೊಂಡು ಕೋಡಿಹಳ್ಳಿ ಮತ್ತು ಇತರೆ ಗ್ರಾಮಗಳ ನಿವಾಸಿಗಳು ಹಲವಾರು ತಿಂಡಿ ತಿನಿಸುಗಳ ತಾತ್ಕಾಲಿಕ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿ ದ್ದಾರೆ, ಪಾನಿಪುರಿ,ಕಳ್ಳೆಪುರಿ,ಜೋಳ,ಬಜ್ಜಿ ಬೋಂಡಾ, ಸಮೋಸ ಕಳ್ಳೇಕಾಯಿ ಟೀ,ಕಾಫಿ ಅಂಗಡಿಗಳು ತಾತ್ಕಾಲಿಕ ಫಾಸ್ಟ್ ಫುಡ್ ಅಂಗಡಿಗಳಾಗಿ ಸ್ಥಾಪನೆಯಾಗಿದೆ .

ಬೇತಮಂಗಲ ಫಿಶ್,ಕಬಾಬ್ ಗೆ ಫುಲ್ ಡಿಮ್ಯಾಂಡ್:-ಬಹಳ ಹಿಂದಿನಿಂದಲೂ ಬೇತಮಂಗಲ ಕೆರೆ ಮೀನುಗಳು ಎಂದರೆ ರಾಜ್ಯದಲ್ಲೇ ಖ್ಯಾತಿ ಪಡೆದಿದೆ,ಸಿಹಿ ನೀರಲ್ಲಿ ಬೆಳೆಯುವ ಮೀನುಗಳು ಉತ್ತಮ ಶುಚಿ ಹಾಗು ರುಚಿಯಾಗಿರುತ್ತದೆ ಎಂದು ಪ್ರಸಿದ್ಧಿಯಾಗಿದೆ, ಇದೇ ಕಾರಣಕ್ಕೆ ಇದೀಗ ಕೋಡಿಹಳ್ಳಿ ಬಳಿ ಕೋಡಿ ಹೋಗುತ್ತಿರುವ ಪ್ರದೇಶದಲ್ಲಿಯೇ ಮೀನುಗಳನ್ನು ಹಿಡಿದು ಅದರ ಪಕ್ಕದಲ್ಲೇ ಮೀನು ಫ್ರೈ,ಕಬಾಬ್ ಮಾಡಿ ಮಾರಾಟ ಮಾಡಲಾಗುತ್ತಿದೆ.

ಕೆಜಿಎಫ್,ಕೋಲಾರ,ವಿ.ಕೋಟ ಮುಳಬಾಗಿಲು ಮತ್ತು ಆಂಧ್ರದಿಂದ ಬರುತ್ತಿರುವ ಪ್ರವಾಸಿಗರನ್ನು ಒಂದೆಡೆ ಪ್ರಕೃತಿ ಮತ್ತೊಂದು ಕಡೆ ಬೇತಮಂಗಲ ಮೀನಿನ ರುಚಿಯನ್ನು ಸವಿಯುತ್ತಿದ್ದಾರೆ ಬೇತಮಂಗಲ ಮೀನು ಫ್ರೈ ಮತ್ತು ಕಬಾಬ್ ಹಾಟ್ ಫೇವರೇಟ್ ಆಗಿದ್ದು ಮೀನುಗಳ ವಿವಿಧ ರೀತಿಯ ಬಿಸಿ ಬಿಸಿ ಖಾದ್ಯಗಳನ್ನು ಸವಿಯುತ್ತಿದ್ದಾರೆ.

ಮನೆಯಿಂದಲೇ ಪಾರ್ಸೆಲ್:-ಕೇವಲ ಇಲ್ಲಿನ ಪ್ರಕೃತಿಯಲ್ಲಿ ಮಿಂದು ಸೌಂದರ್ಯವನ್ನು ಕಣ್ತುಂಭಿಸಿ ಕೊಳ್ಳಲು ಬರುವವರ ಇಲ್ಲಿ ಸಿಗ್ಸುವ ತಿಂಡಿ ತಿನಿಸುಗಳ ಸವಿದು ಹೋಗುತ್ತಿದ್ದಾರೆ,ಸಾಕಷ್ಟು ಮಂದಿ ತಮಗೆ ಬೇಕಾದ ತಿಂಡಿ ತಿನಿಸುಗಳನ್ನು ಮನೆಯಲ್ಲೇ ಮಾಡಿಕೊಂಡು ಒಂದು ದಿನದ ಟ್ರಿಪ್ ರೀತಿಯಲ್ಲಿ ಇಲ್ಲಿಗೆ ಬಂದು ಎಲ್ಲವನ್ನೂ ನೋಡಿ ನೀರಿನಲ್ಲಿ ಇಳಿದು ಎಂಜಾಯ್ ಮಾಡಿದ ನಂತರ ಮನೆಯಿಂದ ತಂದಿರುವ ಅಡಿಗೆಗಳನ್ನು ಇಲ್ಲಿಯೇ ಕುಳಿತು ತಿಂದು ಮರಳುತ್ತಿರುವ ದೃಶ್ಯಗಳು ಕೂಡ ಕಂಡು ಬರುತ್ತವೆ,ಮತ್ತೊಂದು ವಿಶೇಷ ಎಂದರೆ ನೀರು ಹರಿಯುವ ದಡದ ಪಕ್ಕದಲ್ಲೇ ವಿಶಾಲವಾದ ಬಂಡೆಗಳ ಪ್ರದೇಶ ಇರುವುದರಿಂದ ಕುಳಿತು ಊಟ ಮಾಡಬಹುದಾದ ವಾತಾವರಣವೂ ಇಲ್ಲಿದೆ.

ಪಂಚಾಯ್ತಿ,ನೀರು ಸರಬರಾಜು ಇಲಾಖೆ ನಿರ್ಲಕ್ಷ್ಯ ,ಸ್ವಚತೆಯೂ ಇಲ್ಲ ಭದ್ರತೆಯೂ ಇಲ್ಲ:-ಸುಮಾರು ಒಂದು ಸಾವಿರ ಎಕರೆ ಪಾಲಾರ್ ಕೆರೆ ಸೇರಿದಂತೆ ನದಿ ಪಾತ್ರದಲ್ಲಿ ಬರುವ ಎಲ್ಲಾ ವ್ಯವಸ್ಥೆ,ಭದ್ರತೆಯನ್ನು ನೋಡಿಕೊಳ್ಳಬೇಕಾದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಇಲ್ಲಿಯೂ ಕಂಡು ಬರುತ್ತದೆ,ಈಗಾಗಲೇ ಜಲಾಶಯ ಅಣೆಕಟ್ಟು ಕೆರೆ ಕಟ್ಟೆ ಸಾಕಷ್ಟು ದುಸ್ಥಿತಿಗೆ ತಲುಪಿಸಲು ಕಾರಣ ವಾಗಿರುವ ಮಂಡಳಿ ಅಧಿಕಾರಿಗಳು ಕೆರೆ ತುಂಬಿ ಕಳೆದ ಹತ್ತು ದಿನಗಳಿಂದಲೂ ಸತತವಾಗಿ ಕೋಡಿ ಹರಿಯುತ್ತಿರುವುದು,ಅದನ್ನು ನೋಡಲು ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಿದ್ದು ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ, ಪ್ರವಾಸಿಗರು ಕೆರೆಯಲ್ಲಿ ಹೋಗುವುದು ಕೋಡಿಯಲ್ಲಿ ಆಟ ಆಡಲು ಇಳಿಯುವುದು,ವಿಶೇಷವಾಗಿ ಮಕ್ಕಳು ಮಹಿಳೆಯರು ನೀರಿಗೆ ಇಳಿಯುತ್ತಿರುವುದರಿಂದ ಯಾವುದೇ ಭದ್ರತೆಯೂ ಇಲ್ಲ,ಅಥವಾ ಅವರನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಮಂಡಳಿಯವರು ಮಾಡಿಲ್ಲ, ಸಾಕಷ್ಟು ಮಂದಿ ಸಿಬ್ಬಂದಿ ಇದ್ದರೂ ಮೇಲಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಹಿನ್ನಲೆಯಲ್ಲಿ ಸಿಬ್ಬಂದಿಯೂ ಸೋಮಾರಿಗಳಾಗಿದ್ದಾರೆ,

ಇದೇ ಸ್ಥಳದಲ್ಲಿ ಕೋಡಿ ಹೋಗುತ್ತಿದ್ದಾಗ ಎರಡು ಬಾರಿ ಒಟ್ಟು ೫ ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಮರೆಯು ವಂತಿಲ್ಲ, ಆದರೂ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕಾಣುತ್ತಿದೆ.

ಗ್ರಾಪಂ ನಿದ್ದೆ ಮಾಡುತ್ತಿದೆ:-ಇದ್ದಕಿದ್ದಂತೆ ಪ್ರವಾಸಿ ತಾಣವಾಗಿ ಮಾರ್ಪಾಡು ಆಗಿರುವ ಹಿನ್ನಲೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಇಲ್ಲಿಗೆ ಬರುತ್ತಿವೆ, ಕೋಡಿಹಳ್ಳಿ ಗ್ರಾಮದ ಒಳಗಡೆಯಿಂದ ಕೋಡಿ ಬಳಿ ಹೋಗ ಬೇಕಾದರೆ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಸಾಕಷ್ಟು ಪರದಾಡುವಂತಾಗಿದೆ, ನೀರಿನಲ್ಲಿ ಕುಣಿದು ಕುಪ್ಪಳಿಸಿ ಮೋಜು ಮಸ್ತಿ ಮಾಡುವ ಪ್ರವಾಸಿಗರು ಸಾಕಷ್ಟು ಮಂದಿ ತಮ್ಮ ಬಟ್ಟೆ, ಬರೆ, ಬಾಟಲಿಗಳನ್ನು ನೀರಿನಲ್ಲಿ ಎಸೆಯುತ್ತಾರೆ, ಇದರ ಜೊತೆಗೆ ಇಲ್ಲಿ ತಲೆ ಎತ್ತಿರುವ ಅಂಗಡಿಗಳಲ್ಲಿ ಸಿಗುವ ತಿಂಡಿ ತಿನಿಸುಗಳನ್ನು ತಿಂದು ಎಲ್ಲಾ ತ್ಯಾಜ್ಯವನ್ನು ಇಲ್ಲಿಯೇ ಎಸೆದು ಪರಿಸರವನ್ನು ಸಾಕಷ್ಟು ಹಾಳು ಮಾಡಲಾಗುತ್ತಿದೆ, ಆದರೆ ಈ ಸ್ಥಳದ ವ್ಯಾಪ್ತಿಗೆ ಬರುವ ಗುಟ್ಟ ಹಳ್ಳಿ ಹುಲ್ಕುರು ಗ್ರಾಪಂ ಆಡಳಿತ ಮಂಡಳಿ ಇದರ ಬಗ್ಗೆ ಯಾವುದೇ ರೀತಿಯಲ್ಲೂ ತಲೆ ಕೆಡಿಸಿ ಕೊಂಡಂಗೆ ಕಾಣುತ್ತಿಲ್ಲ ಜನಪ್ರತಿನಿಧಿಗಳೇ ಹಾಗೆ ಎಂದು ಗೊತ್ತು, ಆದರೆ ಗ್ರಾಮಾಭಿವೃದ್ದಿ ಅಧಿಕಾರಿ ಎನಿಸಿಕೊಂಡು ಇಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಆದ್ರೂ ಇತ್ತ ಗಮನ ಹರಿಸಿಲ್ಲ ಎಂದರೆ ಅವರ ಬೇಜವಾಬ್ದಾರಿ ವರ್ತನೆಗೆ ಏನು ಹೇಳಬೇಕೋ ಗೊತ್ತಿಲ್ಲ ಎಲ್ಲವೂ ಪೊಲೀಸರೇ ಮಾಡಬೇಕಾ ಇಲ್ಲಿಗೆ ಬರುವ ಪ್ರವಾಸಿಗರನ್ನು ನೀರಿನಲ್ಲಿ ಇಳಿಯಲು ತಡೆಯುವುದು ದೊಡ್ಡ ಹರಸಾಹಸ ಪಡಬೇಕಾದ ಪರಿಸ್ಥಿತಿ ಪೊಲೀಸರಿಗೆ ತಲೆನೋವು ಆಗಿದೆ, ವಾಹನಗಳು ಪಾರ್ಕಿಂಗ್, ಸಣ್ಣ ಪುಟ್ಟ ಗಲಾಟೆ,ನಿಯಂತ್ರಣ ಮಾಡುವ ಪೊಲೀಸರು ಒಂದೆಡೆ ನೀರು ಸರಬರಾಜು ಮಂಡಳಿ ಮತ್ತೊಂದು ಕಡೆ ಪಂಚಾಯ್ತಿ ರವರ ಕೆಲಸವನ್ನು ಪೊಲೀಸರೇ ಮಾಡುವಂತಾಗಿದೆ, ಇದರಿಂದಾಗಿ ನೀರು ಹರಿಯುವುದು ಯಾವಾಗ ನಿಲ್ಲುತ್ತದೋ ಎಂದು ಪೊಲೀಸರು ಎದುರು ನೋಡುವಂತಾಗಿದೆ.

ಚಿತ್ರ - ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಕರೆ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande