ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು : ನಿರ್ಮಲಾ ಸೀತಾರಾಮನ್
ಸಿರುಗುಪ್ಪ, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರೈತರು ಉತ್ಪಾದನೆ ಜೊತೆಗೆ, ಹೆಚ್ಚು ಲಾಭ ಗಳಿಸಲು ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಬೇಕು ಎಂದು ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಗುರುವಾರ, ಸಿರು
ರೈತರು ಉತ್ಪಾದನೆಗಿಂತ ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಿ - ನಿರ್ಮಲಾ ಸೀತಾರಾಮನ್


ರೈತರು ಉತ್ಪಾದನೆಗಿಂತ ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಿ - ನಿರ್ಮಲಾ ಸೀತಾರಾಮನ್


ರೈತರು ಉತ್ಪಾದನೆಗಿಂತ ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಿ - ನಿರ್ಮಲಾ ಸೀತಾರಾಮನ್


ರೈತರು ಉತ್ಪಾದನೆಗಿಂತ ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಿ - ನಿರ್ಮಲಾ ಸೀತಾರಾಮನ್


ಸಿರುಗುಪ್ಪ, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರೈತರು ಉತ್ಪಾದನೆ ಜೊತೆಗೆ, ಹೆಚ್ಚು ಲಾಭ ಗಳಿಸಲು ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಬೇಕು ಎಂದು ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಗುರುವಾರ, ಸಿರುಗುಪ್ಪ ತಾಲ್ಲೂಕಿನ ಕೊಂಚಗೇರಿ ಗ್ರಾಮದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ವತಿಯಿಂದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (ಎಂಪಿಎಲ್ ಎಡಿಎಸ್) ಯಡಿ ರೂ.2.54 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕೃಷಿ ಸಂಸ್ಕರಣೆಗಾಗಿ ರೈತರಿಗೆ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೇಂದ್ರ ಹಣಕಾಸು ಸಚಿವೆಯಾದ ಬಳಿಕ, ಪ್ರತಿಬಾರಿ ಬಜೆಟ್ ಮಂಡನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರೈತರಿಗೆ ಅನುಕೂಲವಾಗುವ ಯಾವ ವಿಧದ ಯೋಜನೆ, ಸೌಲಭ್ಯ ರೂಪಿಸುತ್ತಿದ್ದೀರಾ ಎಂದು ವಿಚಾರಿಸುವ ಮೂಲಕ ರೈತರ ಬಗೆಗಿನ ಅಪಾರ ಕಾಳಜಿ ಬಿಂಬಿಸುತ್ತಿದ್ದರು ಎಂದು ಸ್ಮರಿಸಿದರು.

ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರ ಜೊತೆಗೆ ಅವರು ಬೆಳೆದ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ ಸಿಗಬೇಕಿದೆ. ಕ.ಕ ಭಾಗದಲ್ಲಿ ರೈತ ತರಬೇತಿ ಕೇಂದ್ರಗಳನ್ನು ಆರಂಭಿಸುವುದರಿಂದ ಸಾವಿರಾರು ರೈತರಿಗೆ ಉಪಯೋಗವಾಗುತ್ತದೆ. ಒಳ್ಳೆಯ ಮಾರುಕಟ್ಟೆ ಸಂಪರ್ಕ, ಅವರು ಬೆಳೆದ ಬೆಳೆಗಳ ಮೌಲ್ಯವರ್ಧನೆ ಹೇಗೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಹಲವಾರು ಮಾಹಿತಿಯನ್ನು ನೀಡುವುದು ಉದ್ದೇಶ ಹೊಂದಲಾಗಿತ್ತು ಎಂದು ತಿಳಿಸಿದರು.

ಪ್ರಧಾನಮಂತ್ರಿಗಳ ಧನ ಧಾನ್ಯ ಯೋಜನೆಯಿಂದ ಆಹಾರ ಸಂಸ್ಕರಣೆ, ಮೌಲ್ಯವರ್ಧನೆ ಜೊತೆಗೆ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಯೋಜನೆಯಡಿ ದೇಶದ 100 ಜಿಲ್ಲೆಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಬಳ್ಳಾರಿ ಜಿಲ್ಲೆಯು ಒಂದಾಗಿದೆ. ಇದಕ್ಕಾಗಿ ಬಜೆಟ್ ನಲ್ಲಿ ಅನುದಾನ ನೀಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಈ ತರಬೇತಿ ಕೇಂದ್ರಗಳನ್ನು ಮಾಡಲಾಗಿದೆ. ಇದರಿಂದ ರೈತರಿಗೆ ಪುಡ್ ಪ್ರೋಸೆಸಿಂಗ್, ಪ್ಯಾಕೇಜ್ ಜೊತೆಗೆ ಮಾರ್ಕೆಟಿಂಗ್ ಸೌಲಭ್ಯಕ್ಕೆ ಅನುಕೂಲವಾಗಲಿದೆ. ನಮ್ಮೊಂದಿಗೆ ನಬಾರ್ಡ್ ಪರಿಣಿತರು ಇದ್ದಾರೆ. ಅನ್ನದಾತರ ಭವಿಷ್ಯಕ್ಕಾಗಿ ನಾವು ಈ ಕೆಲಸ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿಪಡಿಸುವುದು ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.

ಈ ತರಬೇತಿ ಕೇಂದ್ರಗಳ ಸದುಪಯೋಗವನ್ನು ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಇಂತಹ ಇನ್ನಷ್ಟು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರೆ ಜಿಲ್ಲೆಯು ಅಭಿವೃದ್ಧಿ ಹೊಂದಲಿದೆ ಎಂದು ಅಭಿಪ್ರಾಯಪಟ್ಟ ಸಚಿವರು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೂ ಧನ್ಯವಾದಗಳನ್ನು ತಿಳಿಸುತ್ತೇನೆ, ಜಿಲ್ಲಾಡಳಿತದಿಂದಲು ಒಳ್ಳೆಯ ಸಹಕಾರ ದೊರೆತಿದೆ. ರೈತರ ಲಾಭಕ್ಕಾಗಿ ಈ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕ.ಕ ಭಾಗದ 7 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲೂ ಪಿಪಿಪಿ ಮಾದರಿಯಲ್ಲಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಸಿದ್ಧಗಂಗಾ ಶ್ರೀ ಆಹಾರ ಸಂಸ್ಕರಣಾ ಘಟಕದಿಂದ ರೂ.12 ಲಕ್ಷ ಅನುದಾನ ಒಳಗೊಂಡು ಕೇಂದ್ರ ಆರಂಭಿಸಲಾಗಿದೆ. ಘಟಕದಲ್ಲಿ ಮೆಣಸಿನಕಾಯಿ ಪುಡಿ ಮತ್ತು ಮೆಣಸಿನಕಾಯಿ ಖಾರದ ಪುಡಿ ಉತ್ಪನ್ನಗಳನ್ನು ತಯಾರಿಸಲು ವ್ಯವಸ್ಥೆ ಮಾಡಲಾಗಿದೆ. ರೈತರ ಆದಾಯವೃದ್ಧಿಗೆ ಸಹಾಯವಾಗಲಿದೆ ಎಂದು ಸಚಿವರು ಆಶಿಸಿದರು.

ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಹುತೇಕವಾಗಿ ರೈತರು ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದು, ಮಾರಾಟ ಮಾಡಲು ಬೇರೆ ಜಿಲ್ಲೆಗೆ ಹೋಗಬೇಕಾಗಿತ್ತು. ಇಂತಹ ಮೆಣಸಿನಕಾಯಿ ಸಂಸ್ಕರಣಾ ಘಟಕಗಳು ರೈತರ ಅಭಿವೃದ್ಧಿಗೆ ನೆರವಾಗಲಿವೆ ಎಂದು ಶುಭ ಹಾರೈಸಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಅಧ್ಯಕ್ಷ ಶಾಜಿ ಕೆ.ವಿ ಅವರು ಮಾತನಾಡಿ, ಕೃಷಿ ತರಬೇತಿ ಕೇಂದ್ರ ರೈತರ ಜೀವನದಲ್ಲಿ ಪರಿವರ್ತನೆ ತರಲು ನಬಾರ್ಡ್ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶದ ರೈತರಿಗಾಗಿ ಈ ಯೋಜನೆಯ ಕನಸು ಕಂಡಿದ್ದರು. ಇಂದು ಅದು ನಿಜವಾಗುತ್ತಿದೆ. ಅವರ ಆಶಯದಂತೆ ನಬಾರ್ಡ್ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರೂ ಆದ ಉಮಾ ಮಹಾದೇವನ್ ಅವರು ಮಾತನಾಡಿ, ಕೃಷಿಯಲ್ಲಿ ಕಲ್ಯಾಣ ಕರ್ನಾಟಕ ಭಾಗವು ಶ್ರೀಮಂತವಾಗಿದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಸೇರಿ ಏಳು ಜಿಲ್ಲೆಗಳಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನೊಳಗೊಂಡ ಕೇಂದ್ರಗಳನ್ನು ಆರಂಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ರೈತರ ಹಿತಕ್ಕಾಗಿ, ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವು ಸಹಕಾರಿಯಾಗಲಿದೆ. ಇದರಿಂದ ರೈತರ ಕೌಶಲ್ಯಾಭಿವೃದ್ಧಿ, ಸಬಲೀಕರಣ, ಉದ್ಯೋಗ ಸೃಷ್ಟಿ ಮತ್ತು ಮಹಿಳಾ ಸಬಲೀಕರಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ 7 ಜಿಲ್ಲೆಗಳ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಕೇಂದ್ರದ ತಲಾ ಇಬ್ಬರಂತೆ ಸದಸ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಎನ್.ರವಿಕುಮಾರ್, ಕೊಂಚಗೇರಿ ಗ್ರಾಪಂ ಅಧ್ಯಕ್ಷೆ ಈ.ಮುತ್ತಮ್ಮ, ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ನಾಗರಾಜು, ಐಟಿಸಿ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶ್ರವಣ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande