ಬೆಂಗಳೂರು, 16 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೈಗೆ ಸಿಗದ ದ್ರಾಕ್ಷಿ ಹುಳಿ ಎಂಬ ಗಾದೆ ಎಲ್ಲರಿಗೂ ಪರಿಚಿತ, ಆದರೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ರಾಜಶೇಖರ್ ಅಂಗಡಿ ಅವರ ಜೀವನ ಕಥೆ ಆ ಗಾದೆಗೆ ಬೇರೆಯ ಅರ್ಥ ನೀಡಿದೆ.
ಕೇವಲ ಎರಡು ಎಕರೆಗಳಲ್ಲಿ ದ್ರಾಕ್ಷಿ ಬೆಳೆ ಬೆಳೆಸುತ್ತಿದ್ದ ಅವರು, ಶ್ರಮ, ದೃಢ ನಿಶ್ಚಯ ಮತ್ತು ವೈಜ್ಞಾನಿಕ ಕೃಷಿ ವಿಧಾನಗಳ ಸಹಾಯದಿಂದ 300 ಎಕರೆಗಳ ಕೃಷಿ ಸಾಮ್ರಾಜ್ಯ ನಿರ್ಮಿಸಿದ್ದಾರೆ.
ರಾಜಶೇಖರ್ ಅಂಗಡಿ ಅವರ ಕೃಷಿ ಪಯಣವು ಆಕಸ್ಮಿಕದಿಂದ ಪ್ರಾರಂಭವಾಯಿತು. ಅವರ ಅಣ್ಣ ದಿವಂಗತ ಮಲ್ಲಿಕಾರ್ಜುನ ಅಂಗಡಿ ಬ್ಯಾಂಕ್ ಉದ್ಯೋಗಕ್ಕೆ ತೆರಳಲು ನಿರ್ಧರಿಸಿದಾಗ, ದ್ರಾಕ್ಷಿ ತೋಟದ ಜವಾಬ್ದಾರಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ರಾಜಶೇಖರ್ ಅವರ ಹೆಗಲೆರಿತು. ತಂದೆ ವೃತ್ತಿಯಿಂದ ಅಧಿಕಾರಿಯಾಗಿದ್ದರೂ ಕೃಷಿಯ ಮೇಲಿನ ಆಸಕ್ತಿ ಅವರನ್ನು ಪ್ರೇರೇಪಿಸಿತು. ಎರಡು ಎಕರೆಗಳಲ್ಲಿ ದ್ರಾಕ್ಷಿ ಬೆಳೆ ಬೆಳೆಸುವುದರಿಂದಲೇ ಅವರ ಹೊಸ ಜೀವನ ಆರಂಭವಾಯಿತು.
ವಿಜ್ಞಾನ ಮತ್ತು ಪರಿಶ್ರಮದ ಸಂಯೋಜನೆ
೧೯೯೦ರಲ್ಲಿ ದ್ರಾಕ್ಷಿ ಬೆಳೆ ಬಾಗಲಕೋಟೆ ಪ್ರದೇಶಕ್ಕೆ ಹೊಸದು. ಆರಂಭಿಕ ದಿನಗಳಲ್ಲಿ ಅವರು ಹಲವು ಸವಾಲುಗಳನ್ನು ಎದುರಿಸಿದರು. ಮರಾಠಿ ಭಾಷೆ ಗೊತ್ತಿಲ್ಲದಿದ್ದರೂ ಮಹಾರಾಷ್ಟ್ರದ ಕೃಷಿ ತಜ್ಞರ ಬಳಿ ತೆರಳಿ ಮಾರ್ಗದರ್ಶನ ಪಡೆದರು. ವಿಜ್ಞಾನಿಗಳು ಮತ್ತು ಸಂಶೋಧಕರಿಂದ ಸಲಹೆ ಪಡೆದು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಅವರು ಉತ್ತಮ ಬೆಳೆ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ಯಶಸ್ಸಿನ ಫಲದಿಂದಲೇ ಅವರ ಜೀವನದ ದಿಕ್ಕು ಬದಲಾಯಿತು.
ಆದಾಯವನ್ನು ಹೂಡಿಕೆಯಾಗಿ ಪರಿವರ್ತಿಸಿದ ಮಾದರಿ ರೈತ
ಹೆಚ್ಚಿನ ರೈತರು ಗಳಿಕೆಯನ್ನು ಖರ್ಚಿನಲ್ಲಿ ಮುಗಿಸುತ್ತಾರೆ ಆದರೆ, ರಾಜಶೇಖರ್ ಅಂಗಡಿ ಆ ಆದಾಯವನ್ನು ಮತ್ತೆ ಕೃಷಿಯಲ್ಲೇ ಹೂಡಿದರು. ಎರಡು ಎಕರೆ ಭೂಮಿಯನ್ನು ಕ್ರಮೇಣ 10, 50, 100… ಅಂತಿಮವಾಗಿ 300 ಎಕರೆಗಳವರೆಗೆ ವಿಸ್ತರಿಸಿದರು. ಅವರ ಕೃಷಿ ವಿಸ್ತರಣೆ ಹಿಂದೆ ಹೊಸ ಅಭ್ಯಾಸಗಳು, ತಂತ್ರಜ್ಞಾನ, ಮತ್ತು ನಿರಂತರ ಕಲಿಕೆ ಪ್ರಮುಖ ಪಾತ್ರ ವಹಿಸಿದೆ ಎಂದು ಕೃಷಿ ಸಲಹಾ ಉದ್ಯಮಿ ಶಿವಯೋಗಿ ಆರ್ ಬ್ಯಾಕೋಡ್ ಹೇಳಿದ್ದಾರೆ.
ಬದಲಾವಣೆಗೆ ಭಯಪಡದ ರೈತ
ರಾಜಶೇಖರ್ ಅಂಗಡಿ ಅವರು ತೋಟಗಾರಿಕೆಯಿಂದ ಕೃಷಿ ಆರಂಭಿಸಿ, ನಂತರ ಕಬ್ಬು, ಅರಿಶಿನ, ಮೆಕ್ಕೆಜೋಳ, ಸೋಯಾಬೀನ್ ಮತ್ತು ಬಿಟಿ ಹತ್ತಿಯತ್ತ ತಿರುಗಿದರು. 1990ರಲ್ಲಿ ಪ್ರಾರಂಭವಾದ ದ್ರಾಕ್ಷಿ ಕೃಷಿಯಿಂದ ಸುಮಾರು ಎರಡು ದಶಕಗಳಲ್ಲಿ ಅವರು ಪ್ರಗತಿಯ ಹೊಸ ಅಧ್ಯಾಯ ಬರೆದರು. ಬೆಲೆ ಕುಸಿತದ ಹಿನ್ನೆಲೆ ಅವರು ದ್ರಾಕ್ಷಿ ಕೃಷಿಯಿಂದ ಹಿಂದೆ ಸರಿದರೂ, ಆ ಬೆಳೆ ನೀಡಿದ ಲಾಭದಿಂದ 300 ಎಕರೆಗಳಷ್ಟು ಭೂಮಿಯನ್ನು ಖರೀದಿಸುವಲ್ಲಿ ಯಶಸ್ವಿಯಾದರು.
ಸಮಸ್ಯೆಗಳನ್ನು ಅವಕಾಶವನ್ನಾಗಿ ಕಂಡ ರಾಜಶೇಖರ
ತಮ್ಮ ಯಶಸ್ಸಿನ ವೇಳೆ ಎದುರಿಸಿದ ಕಾರ್ಮಿಕರು, ಹವಾಮಾನ, ಮಾರುಕಟ್ಟೆ ಇತ್ಯಾದಿ ಸಮಸ್ಯೆಗಳ ಕುರಿತು ಮಾತನಾಡಿರುವ ರಾಜಶೇಖರ ಅಂಗಡಿ ಯಾವ ಕ್ಷೇತ್ರವು ಸಮಸ್ಯೆಗಳಿಂದ ಮುಕ್ತವಾಗಿದೆ ಎಂದು ಕೇಳುವ ಅವರು, ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಯಶಸ್ಸಿನ ಮಂತ್ರ ಎಂದು ಹೇಳಿದ್ದಾರೆ.
ಪ್ರಸ್ತುತ ರಾಜಶೇಖರ್ ಅಂಗಡಿ 150 ಎಕರೆಯಲ್ಲಿ ಕಬ್ಬು, 40 ಎಕರೆಯಲ್ಲಿ ಬಿಟಿ ಹತ್ತಿ, 25 ಎಕರೆಯಲ್ಲಿ ಅರಿಶಿನ, 40 ಎಕರೆಯಲ್ಲಿ ಮೆಕ್ಕೆಜೋಳ ಮತ್ತು 12 ಎಕರೆಯಲ್ಲಿ ಸೋಯಾಬೀನ್ ಬೆಳೆಯುತ್ತಿದ್ದಾರೆ. ಕ್ರಮಬದ್ಧ ಯೋಜನೆ, ವೈಜ್ಞಾನಿಕ ಕೃಷಿ ವಿಧಾನ ಮತ್ತು ಶ್ರಮದ ಆಧಾರದ ಮೇಲೆ ಅವರು ಯಶಸ್ವಿಯಾದ ರೈತರ ಹೊಸ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ಬಾಗಲಕೋಟೆಯ ಈ ರೈತನು ಇಂದು ಕರ್ನಾಟಕದ ಯುವ ರೈತರಿಗೂ ಪ್ರೇರಣೆಯಾಗಿದ್ದಾರೆ. ತಂತ್ರಜ್ಞಾನ, ನವೀನತೆ ಮತ್ತು ಶ್ರಮವನ್ನು ಸಮನ್ವಯಗೊಳಿಸಿದಾಗ, ಕೃಷಿಯೂ ಕೋಟ್ಯಂತರ ರೂಪಾಯಿಗಳ ಉದ್ಯಮವಾಗಬಹುದು ಎಂಬುದನ್ನು ರಾಜಶೇಖರ್ ಅಂಗಡಿ ಅವರು ನಿಜವಾದ ಅರ್ಥದಲ್ಲಿ ಸಾಬೀತುಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa