
ವಿಜಯಪುರ, 10 ಅಕ್ಟೋಬರ್ (ಹಿ.ಸ.):
ಆ್ಯಂಕರ್: ವಿಜಯಪುರದ ಶ್ರೀ ಸಿದ್ದೇಶ್ವರ ಬ್ಯಾಂಕ್ ಸರ್ವತೋಮುಖ ಪ್ರಗತಿ ದೃಷ್ಟಿಕೋನದಿಂದ ಹಾಲಿ ಇರುವ ನಿರ್ದೇಶಕರನ್ನೇ ಮರು ಆಯ್ಕೆ ಮಾಡಬೇಕು, ಈ ಬ್ಯಾಂಕ್ ಷೆಡ್ಯೂಲ್ಡ್ ಬ್ಯಾಂಕ್ ಆಗಿಸುವ ಕಾರ್ಯಕ್ಕೆ ನಾನು ಸಹ ಬೆಂಬಲವಾಗಿ ನಿಲ್ಲುವೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ ಖಾತೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.
ಶುಕ್ರವಾರ ನಗರದ ಶ್ರೀಗುರುಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣಾ ಹಿನ್ನೆಲೆಯಲ್ಲಿ ಸಹಕಾರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ರಂಗದಲ್ಲಿ ಚುನಾವಣೆಗೆ ಬದಲಾಗಿ ಸಾಮರಸ್ಯದಿಂದ ಅವಿರೋಧ ಆಯ್ಕೆಯಾಗಬೇಕು ಎನ್ನುವುದು ನನ್ನ ಭಾವನೆ ಕೂಡಾ ಹೌದು ಎಂದರು.
ಅವಿರೋಧವಾಗಿ ಆಯ್ಕೆ ಬಗ್ಗೆ ಅನೇಕ ರೀತಿ ಶ್ರಮಿಸಿದರೂ ಅದು ಸಾಧ್ಯವಾಗಲಿಲ್ಲ, ಈಗ ಚುನಾವಣೆ ಎದುರಾಗಿದೆ. ಇದರಿಂದ ಆರ್ಥಿಕ ಹೊರೆ ತಪ್ಪಿಸಬೇಕೆಂಬ ಪ್ರಯತ್ನ ಮಾಡಿದರೂ ಸಾಧ್ಯವಾಗದೇ ಚುನಾವಣೆ ಎದುರಾಯಿತು ಎಂದರು.
ವೀರಶೈವ ಲಿಂಗಾಯತ ಸೇರಿದಂತೆ ಎಲ್ಲ ಜಾತಿ, ಸಮುದಾಯದ ಮತದಾರರು ಇರುವ ಶ್ರೀಸಿದ್ದೇಶ್ವರ ಬ್ಯಾಂಕ್ ಜಾತ್ಯಾತೀತ ಬ್ಯಾಂಕ್ ಎನಿಸಿದೆ ಎಂದರು.
ಈ ಹಿಂದೆ ಪ್ರಯತ್ನ ಪಟ್ಟರೆ ಎಂಎಲ್ಎ ಟಿಕೇಟ್ ಸಿಗುತ್ತಿತ್ತು, ಆದರೆ ಶ್ರೀ ಸಿದ್ದೇಶ್ವರ ಬ್ಯಾಂಕ್ ಸದಸ್ಯತ್ವ ಸಿಗುತ್ತಿರಲಿಲ್ಲ, ಅಷ್ಟೊಂದು ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿದ್ದು, ಅಂಥ ಶ್ರೀಸಿದ್ದೇಶ್ವರ ಬ್ಯಾಂಕಿನಲ್ಲಿ ನಾನೂ ಕೂಡ ಸದಸ್ಯ ಎಂಬುದು ನನಗೆ ಹೆಮ್ಮೆಯ ಸಂಗತಿ ಎಂದರು.
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಕೇವಲ 370 ಕೋಟಿ ರೂ. ದುಡಿಯುವ ಬಂಡವಾಳ ಇದೀಗ 14 ಸಾವಿರ ಕೋಟಿ ರೂ. ತಲುಪಿದೆ. ಇದಕ್ಕಾಗಿ ಯಾರೂ ಕನಿಷ್ಟ ಸೌಜನಕ್ಕೂ ಸನ್ಮಾನಿಸಲಿಲ್ಲ. ಹಾನಿಯಾದಾಗ ಅದಕ್ಕೆ ಟೀಕೆ ಮಾಡುವವರು ಇರುತ್ತಾರೆ. ಅದರೆ ಒಳ್ಳೆಯ ಕೆಲಸ ಮಾಡುವಾಗ ಟೀಕೆಗೆ ತಲೆಕೆಡಿಸಿಕೊಳ್ಳದೇ ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ಆತ್ಮಸಾಕ್ಷಿಯಿಂದ ಕೆಲಸ ಮಾಡಿದರೆ ಭಗವಂತನಿಗೂ ಹೆದರುವ ಅವಶ್ಯಕತೆ ಇಲ್ಲ. ಐಸಿಐಸಿಐ ಬ್ಯಾಂಕ್ ಹಗರಣದಲ್ಲಿ ವಿಡಿಸಿಸಿ ಬ್ಯಾಂಕ್ ಹಣವೂ ಸೇರಿತ್ತು. ಆಗೆಲ್ಲ ನನಗೆ ಕಪ್ಪು ಚುಕ್ಕೆ ತರುವ ಕೆಲಸವೂ ನಡೆಯಿತು. ಆದರೆ ಕಾನೂನು ಹೋರಾಟದ ಮೂಲಕ ಹಣವನ್ನು ಮರಳಿ ಪಡೆದಿದ್ದೇನೆ ಎಂದು ವಿವರಿಸಿದರು.
ಸಹಕಾರಿ ವ್ಯವಸ್ಥೆಯಲ್ಲಿ ಆಡಳಿತ ನಿರ್ವಹಣೆ ಕೊರತೆಯಿಂದ ಅಮಾನತ್ ಸಹಕಾರಿ ಸೇರಿದಂತೆ ಅನೇಕ ಬ್ಯಾಂಕುಗಳು ಅಸ್ತಿತ್ವ ಕಳೆದುಕೊಂಡಿವೆ, ಆದರೆ ಅನೇಕ ತೊಂದರೆ ಎದುರಿಸಿಯೂ, ಆರ್ಥಿಕ ಹಿನ್ನಡೆಯನ್ನೆಲ್ಲ ಮೀರಿ ಶ್ರೀ ಸಿದ್ದೇಶ್ವರ ಬ್ಯಾಂಕ್ ಪ್ರಗತಿಯತ್ತ ಮುನ್ನಡೆದಿದೆ. ಹೀಗಾಗಿ ಹಾಲಿ ತಂಡವನ್ನೇ ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಹಕಾರ ಚಳವಳಿ ಜನ್ಮ ತಾಳಿದ್ದು ಧಾರವಾಡ ಜಿಲ್ಲೆಯಲ್ಲಾದರೂ, ಚಳವಳಿ ಬೆಳೆದು, ಅಭಿವೃದ್ಧಿ ಕಂಡದ್ದು ಅವಿಭಿಜಿತ ವಿಜಯಪುರ ಜಿಲ್ಲೆಯಲ್ಲಿ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಹಾಲಿ ತಂಡದ ಎಲ್ಲ ಸ್ಪರ್ಧಿಗಳ ಗೆಲುವಿಗೆ ಮತಯಾಚಿಸಬೇಕು. ಬದಲಾಗಿ ಯಾರೂ ವೈಯಕ್ತಿಕ ಗೆಲುವು ಮಾತ್ರ ಶ್ರಮಿಸಬೇಡಿ. ಹೀಗಾದಲ್ಲಿ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ನ್ನು ಸದೃಢವಾಗಿ ಕಟ್ಡಲಾಗದು ಎಂದು ಕಿವಿ ಮಾತು ಹೇಳಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ
ಸಿದ್ಧೇಶ್ವರ ಸಹಕಾರಿ ಬ್ಯಾಂಕ್ , ಬಿ.ಎಲ್‌ಡಿ.ಇ., ವಿಡಿಸಿಸಿ ಬ್ಯಾಂಕ್ ಸೇರಿದಂತೆ ಹಲವು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ವಚನ ಪಿತಾಮಹ ಡಾ.ಹಳಕಟ್ಟಿ ಅವರ ದೂರದೃಷ್ಟಿಯೇ ಕಾರಣ. ಹೀಗಾಗಿ ಇಂಥ ಮಹನೀಯರ ಕನಸು ಸಾಕಾರಾಗೊಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಬ್ಯಾಂಕ್ ಸದಸ್ಯತ್ವ ಪಡೆಯಲು ಅನೇಕರು ಶಿಫಾರಸ್ಸು ಪಡೆದುಕೊಳ್ಳುತ್ತಿದ್ದರು, ಈ ಹಿಂದೆ ಸೂಪರ್ ಸೀಡ್ ಆಗಿದ್ದ ಸಂದರ್ಭದಲ್ಲಿ ಠೇವಣಿ ಮುಳುಗಿ ಹೋಯಿತು ಎಂದು ಅನೇಕರು ಅಪಪ್ರಚಾರ ಮಾಡಿದರು. ಆದರೆ ಅಂಥ ಸಮಸ್ಯೆ, ಸವಾಲುಗಳನ್ನೆಲ್ಲ ಎದುರಿಸಿ ಮುನ್ನಡೆದಿದೆ, ಈ ಬ್ಯಾಂಕ್ ಅಜರಾಮರ ಹಾಗೂ ಎಲ್ಲ ಬ್ಯಾಂಕುಗಳಲ್ಲಿ ಶ್ರೀ ಸಿದ್ದೇಶ್ವರ ಬ್ಯಾಂಕ್ ಹಿರಿಯಣ್ಣನಂತೆ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಜಿಲ್ಲೆಯ ವ್ಯಾಪಾರಸ್ಥರ ಆರ್ಥಿಕ ಜೀವನಾಡಿಯಾಗಿರುವ ಶ್ರೀ ಸಿದ್ದೇಶ್ವರ ಬ್ಯಾಂಕ್ ಈ ಹಿಂದೆ ಅನೇಕ ಅಡೆತಡೆ ಎದುರಿಸಿದರೂ ಅವುಗಳನ್ನು ಸಮರ್ಥವಾಗಿ ಎದುರಿಸಿ ಫೈನಾನ್ಸ್, ವಿವಿಧ ಆರ್ಥಿಕ
ಸಂಸ್ಥೆಗಳಿಗೆ ಉತ್ತಮ ಸ್ಪರ್ಧೆ ನೀಡುತ್ತಿದೆ ಎಂದರು.
*ಷೆಡ್ಯೂಲ್ಡ್ ಬ್ಯಾಂಕ್ ಆಗಿಸುವ ಸಂಕಲ್ಪ*
ಸಹಕಾರ ಧುರೀಣ ಹಾಗೂ ಶ್ರೀ ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ರಮೇಶ ಬಿದನೂರ ಮಾತನಾಡಿ, ಎಲ್ಲರ ಆಶೀರ್ವಾದ ಬಲದಿಂದ ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಸಿದ್ದೇಶ್ವರ ಬ್ಯಾಂಕ್ ಅನ್ನು ಷೆಡ್ಯೂಲ್ಡ್ ಬ್ಯಾಂಕ್ ಆಗಿಸುವ ಸಂಕಲ್ಪ ಈಡೇರಿಸಲು ದುಡಿಯುವ ಬಂಡವಾಳವನ್ನು ಒಂದು ಸಾವಿರ ಕೋಟಿ ರೂ. ಏರಿಕೆ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು, ಹಾಲಿ ಇರುವ ಪೆನಲ್ ನಿರ್ದೇಶಕರನ್ನೇ ಮರು ಆಯ್ಕೆ ಮಾಡಿ ಮತ್ತೊಮ್ಮೆ ಸೇವೆ ಅವಕಾಶ ನೀಡಬೇಕು ಎಂದರು.
ಕಲಬುರ್ಗಿ, ಬೆಳಗಾವಿ ಸೇರಿದಂತೆ ಹೊರ ಜಿಲ್ಲೆಗಳಲ್ಲೂ ಸಹ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದರು. 2022 ರಿಂದ ನಷ್ಟದಿಂದ ಹೊರಬಂದು ಲಾಭದತ್ತ ಮುನ್ನಡೆದಿರುವ ಶ್ರೀ ಸಿದ್ದೇಶ್ವರ ಬ್ಯಾಂಕ್ ಕೋವಿಡ್ ಸಂದರ್ಭದಲ್ಲಿ ಸಾಲ ವಸೂಲಾತಿ ಕಷ್ಟದ ಸಮಯದಲ್ಲೂ ಉತ್ತಮ ಲಾಭ ಗಳಿಸಿದೆ, ಪ್ರಸ್ತುತ 3.14 ಕೋಟಿ ರೂ.ಲಾಭ ಗಳಿಸಿದ್ದು ಎನ್.ಪಿ.ಎ. ಪ್ರಮಾಣ ಶೇ.1.98 ಎನ್.ಪಿ.ಎ. ಸೀಮಿತವಾಗಿರುವುದು ಮಹತ್ವದ ದಾಖಲೆ ಎಂದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ವಿ.ಸಿ. ನಾಗಠಾಣಾ, ಸಹಕಾರಿ ಧುರಿಣರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಸುರೇಶ ಗಚ್ಚಿನಕಟ್ಟಿ, ಶ್ರೀಕಾಂತ ಶಿರಾಡೋಣ, ರಾಜಶೇಖರ ಮಗಿಮಠ, ಶ್ರೀ ಹರ್ಷಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ರವೀಂದ್ರ ಬಿಜ್ಜರಗಿ, ಪ್ರಕಾಶ ಬಗಲಿ, ಗುರು ಗಚ್ಚಿನಮಠ, ವೈಜನಾಥ ಕರ್ಪೂರಮಠ, ಭೌರಮ್ಮ ಗೊಬ್ಬೂರ, ರಮೇಶ ಬಿದನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸೌಮ್ಯಾ ಭೋಗಶೆಟ್ಟಿ ಸ್ವಾಗತಿಸಿದರು. ವಿರೇಶ ಮುದುಕಾಮಠ ಪ್ರಾರ್ಥಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande