ಪ್ರವಾಸಿ ಭಾರತೀಯ ರೈಲಿಗೆ ಪ್ರಧಾನಿ ಚಾಲನೆ
Prime Minister Narendra Modi flagged off Pravasi Bharatiya Express


ನವದೆಹಲಿ,9 ಜನವರಿ (ಹಿ.ಸ.) :

ಆ್ಯಂಕರ್ :

ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಕೇಂದ್ರ ಸರ್ಕಾರದ ಪ್ರಮುಖ ಉಪಕ್ರಮವಾಗಿದ್ದು, ಇದು ಭಾರತೀಯ ಅನಿವಾಸಿಗಳೊಂದಿಗೆ ಸಂಪರ್ಕ ಸಾಧಿಸಲು, ತೊಡಗಿಸಿಕೊಳ್ಳಲು ಮತ್ತು ಪರಸ್ಪರ ಸಂವಹನ ನಡೆಸಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ.

ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ್ ನಿನ್ನೆ ಯುವ ಪ್ರವಾಸಿ ಭಾರತೀಯ ದಿವಸ್ ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡಿತು.

ಈ ವರ್ಷದ ಪ್ರವಾಸಿ ಭಾರತೀಯ ದಿವಸ್ ಸಮಾವೇಶದ ವಿಷಯ ’ವಿಕಸಿತ ಭಾರತಕ್ಕೆ ಭಾರತೀಯ ಅನಿವಾಸಿಗಳ ಕೊಡುಗೆ’ ಎಂಬುದಾಗಿದೆ. ಹಲವಾರು ದೇಶಗಳ ಹೆಚ್ಚಿನ ಸಂಖ್ಯೆಯ ಅನಿವಾಸಿ ಭಾರತೀಯರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್, ಜ್ಯೂಲ್ ಓರಾಂ ಹಾಗೂ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಪಾಲ್ಗೊಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾರತೀಯ ಅನಿವಾಸಿಗಳಿಗಾಗಿ ವಿಶೇಷ ಪ್ರವಾಸಿ ರೈಲು ’ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್’ ಉದ್ಘಾಟನಾ ಪ್ರಯಾಣಕ್ಕೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸಿದರು.

ಪ್ರವಾಸಿ ತೀರ್ಥ ದರ್ಶನ ಯೋಜನೆಯಡಿ ಚಲಿಸಲಿರುವ ಈ ರೈಲು ನವದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ಹೊರಡಲಿದ್ದು, ೩ ವಾರಗಳ ಕಾಲ ಭಾರತದ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಪ್ರಾಮುಖ್ಯತೆಯ ಬಹುಸ್ಥಳಗಳಿಗೆ ಪ್ರಯಾಣಿಸಲಿದೆ.

ಈ ಸಮಾರಂಭದಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ದೇಶ ವಿಕಸಿತ ಭಾರತದತ್ತ ಪಯಣ ಆರಂಭಿಸಿದೆ. ಜಾಗತಿಕವಾಗಿ ಭಾರತದ ಬಗ್ಗೆ ಗ್ರಹಿಕೆ ಹೆಚ್ಚಿಸುವಲ್ಲಿ ಯುವ ಅನಿವಾಸಿ ಭಾರತೀಯರ ಪಾತ್ರವನ್ನು ದೇಶ ಗುರುತಿಸುತ್ತದೆ ಎಂದು ಹೇಳಿದರು.

ಜಾಗತೀಕರಣಗೊಂಡ ಯುಗದಲ್ಲಿ ಅನಿವಾಸಿ ಭಾರತೀಯರು ಪ್ರತಿವರ್ಷವೂ ಹೆಚ್ಚು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ತಂತ್ರಜ್ಞಾನ, ಪ್ರವಾಸೋದ್ಯಮ, ವ್ಯಾಪಾರ ಅಥವಾ ಹೂಡಿಕೆ ಸೇರಿದಂತೆ ಎಲ್ಲ ವಲಯಗಳಲ್ಲಿ ದ್ವಿಮುಖ ಹರಿವುಗಳು ಅಮೂಲ್ಯವಾದವು ಎಂದು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸಿ ಭಾರತೀಯ ಅನಿವಾಸಿ ಸದಸ್ಯರಿಗೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande