ಕೊಪ್ಪಳ, 30 ಜನವರಿ (ಹಿ.ಸ.) :
ಆ್ಯಂಕರ್ : ಕ್ಷಯರೋಗ ಹೆಸರೇ ತಿಳಿಸುವಂತೆ ಮಾನವನ ಶರೀರವನ್ನು ಕ್ಷಯಿಸುವ ಮಾರಕ ಕಾಯಿಲೆಯಾಗಿದೆ. ಈ ರೋಗದ ಕುರಿತಾಗಿ ನೂರಾರು ವರ್ಷಗಳ ಹಿಂದಿನ ಗ್ರಂಥಗಳಲ್ಲಿಯೂ ಉಲ್ಲೇಖಗಳಿವೆ. ಕ್ಷಯರೋಗವು ಮಾನವನ ಕೂದಲು ಮತ್ತು ಉಗುರುಗಳ ಹೊರತಾಗಿ ದೇಹದ ಯಾವುದೇ ಭಾಗಗಳಲ್ಲಿ ಸೋಂಕನ್ನು ಉಂಟು ಮಾಡಬಹುದು.
1882 ರಲ್ಲಿ ಮಾರ್ಚ 24 ರಂದು ಡಾ. ರಾಬರ್ಟ್‍ಕಾಕ್ ಎಂಬ ಜರ್ಮನ್ ವಿಜ್ಞಾನಿಯು ಕ್ಷಯರೋಗವನ್ನು ಉಂಟುಮಾಡುವ ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯೂಲೋಸಿಸ್ ಎಂಬ ಸೂಕ್ಷ್ಮಾಣುವನ್ನು ಕಂಡು ಹಿಡಿದಿದ್ದು, ನಂತರ ದಿನಗಳಲ್ಲಿ ರೋಗದ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸಾ ಕ್ರಮಗಳಲ್ಲಿ ಹಲವು ಆವಿಷ್ಕಾರ ಮತ್ತು ವಿನೂತನ ಪರಿಕರಗಳನ್ನು ಬಳಸಿ ಕ್ಷಯರೋಗ ನಿರ್ಮೂಲನೆಗಾಗಿ ಶ್ರಮಿಸಲಾಗುತ್ತಿದೆ.
ವಿಶ್ವದಲ್ಲಿ ಭಾರತವು ಅತೀ ಹೆಚ್ಚು ಕ್ಷಯರೋಗ ಪ್ರಮಾಣವನ್ನು ಹೊಂದಿದ್ದು, ಜಾಗತಿಕವಾಗಿ ಶೇ. 26ರಷ್ಟು ಕ್ಷಯರೋಗಿಗಳ ತವರೂರಾಗಿರುತ್ತದೆ. ಕ್ಷಯರೋಗದ ಹರಡುವಿಕೆ ಮತ್ತು ಕಾಯಿಲೆಯಾಗಿ ಮಾರ್ಪಾಡುವಿಕೆ ಬಹುಕಾರಣಗಳ ಮೇಲೆ ಆಧಾರಿತವಾಗಿದ್ದರೂ ಹೆಚ್ಚಿನ ಪ್ರಮಾಣವಿರುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ. 2025ರ ವೇಳೆಗೆ ಭಾರತವನ್ನು ಕ್ಷಯ ಮುಕ್ತವಾಗಿಸುವುದಾಗಿ ಪ್ರಧಾನ ಮಂತ್ರಿಗಳು 2018ರಲ್ಲಿ ಜಾಗತಿಕ ಮಟ್ಟದಲ್ಲಿ ಘೋಷಿಸಿದ್ದು, ಆ ನಿಟ್ಟಿನಲ್ಲಿ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ಮುಖಾಂತರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಕ್ಷಯರೋಗದ ಹರಡುವಿಕೆ : ಕ್ಷಯರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್‍ಕ್ಯೂಲೋಸಿಸ್ ಎಂಬ ಸೂಕ್ಷ್ಮಾಣುವಿನಿಂದ ರೋಗಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ಹೊರಬರುವ ತುಂತುರು ಹನಿಗಳಿಂದ ಹರಡುತ್ತದೆ. ಸಾಮಾನ್ಯವಾಗಿ ಶ್ವಾಸಕೋಶಗಳಿಗೆ ಹಬ್ಬುವ ಈ ರೋಗವು ದೇಹದ ಇತರ ಭಾಗಗಳಿಗೂ ಹರಡಬಹುದು. ಪ್ರಮುಖವಾಗಿ ಶ್ವಾಸಕೋಶದ ಮತ್ತು ಶ್ವಾಸಕೋಶೇತ್ತರ ಕ್ಷಯ ಎಂದು ವಿಂಗಡಿಸಲಾಗಿದೆ. ಒಬ್ಬ ಸಕ್ರಿಯ ಕ್ಷಯರೋಗಿಯು ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪಡೆಯದೇ ಇದ್ದಲ್ಲಿ ಒಂದು ವರ್ಷದಲ್ಲಿ ಸುಮಾರು 15 ಜನರಿಗೆ ಈ ಖಾಯಿಲೆಯನ್ನು ಪ್ರಸರಣ ಮಾಡಬಹುದು.
ಸುಪ್ತಕ್ಷಯ: ಕ್ಷಯಸೋಂಕನ್ನು ಹೊಂದಿದ್ದು, ಯಾವುದೇ ಕ್ಷಯರೋಗದ ಲಕ್ಷಣವನ್ನು ತಕ್ಷಣದಲ್ಲಿ ಹೊಂದಿರುವುದಿಲ್ಲ. ರೋಗಿಯ ರೋಗನಿರೋಧಕ ಶಕ್ತಿಯು ಕಾರಣಾಂತರಗಳಿಂದ ಕ್ಷೀಣಿಸಿದ ಸಮಯದಲ್ಲಿ ಸಕ್ರಿಯ ಕ್ಷಯರೋಗವು ಉಲ್ಬಣಗೊಳ್ಳುತ್ತದೆ.
ಕ್ಷಯರೋಗದ ಲಕ್ಷಣಗಳು: ಎರಡು ವಾರಕ್ಕೂ ಹೆಚ್ಚು ಕೆಮ್ಮು, ಸಂಜೆ ವೇಳೆಯಲ್ಲಿ ಜ್ವರ, ಕಫದಲ್ಲಿ ರಕ್ತ ಬೀಳುವುದು, ಎದೆನೋವು, ತೂಕ ಕಡಿಮೆಯಾಗುವುದು, ರಾತ್ರಿಯಲ್ಲಿ ಬೆವರುವುದು, ಹಸಿವಾಗದಿರುವುದು/ ಆಹಾರ ಸೇರದಿರುವುದು ಮತ್ತು ಕತ್ತು/ ಕಂಕುಳಲ್ಲಿ ಅಥವಾ ದೇಹದ ಇತರೆ ಭಾಗಗಳಲ್ಲಿ ಗಡ್ಡೆಗಳು ಇವು ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ. ಕ್ಷಯರೋಗವು ಮೂಳೆ, ಗರ್ಭಕೋಶ, ಮೆದುಳು, ಜಠರ, ಕಿಡ್ನಿ, ಯಕೃತ್ ಹಾಗೂ ಇತರೆ ಭಾಗಗಳಿಗೆ ಕಾಯಿಲೆಯನ್ನುಂಟು ಮಾಡಿ ಸಂಬಂಧಿಸಿದ ಅಂಗಗಳ ಕಾಯಿಲೆಯ ಲಕ್ಷಣಗಳನ್ನು ತೋರಪಡಿಸುವುದು.
ಕ್ಷಯರೋಗದ ಲಸಿಕೆ: 1951ರಲ್ಲಿ ಕ್ಷಯರೋಗ ತಡೆಗಟ್ಟಲು ಬಿ.ಸಿ.ಜಿ. ಲಸಿಕೆಯನ್ನು ಪ್ರಾರಂಭಿಸಲಾಯಿತು. ಈ ಲಸಿಕೆಯನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿಯಲ್ಲಿ ಒಂದು ವರ್ಷದ ಅವಧಿಯ ಒಳಗಿನ ಮಕ್ಕಳಿಗೆ 0.1 ಎಂ.ಎಲ್. ಚುಚ್ಚುಮದ್ದನ್ನು ಎಡತೋಳಿನ ಮೇಲ್‍ಭಾಗದಲ್ಲಿ ನೀಡಲಾಗುತ್ತದೆ. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಕ್ಷಯರೋಗ ಮತ್ತು ಕುಷ್ಠರೋಗ ತಡೆಗಟ್ಟವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಷಯರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ವಯಸ್ಕರಲ್ಲಿಯೂ ಲಸಿಕೆ ನೀಡುವುದನ್ನು ದೇಶದ ಆಯ್ದ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.
ಕ್ಷಯರೋಗ ನಿರ್ಮೂಲನೆ ನಡೆದುಬಂದ ಹಾದಿ: 1962 ಕ್ಕಿಂತ ಹಿಂದೆ ಈ ಖಾಯಿಲೆಗೆ ನಿಖರವಾದ ಚಿಕಿತ್ಸೆ ಇರಲಿಲ್ಲ. 1962 ರಿಂದ 1996 ರವರೆಗೆ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ರೋಗಿಗಳಿಗೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಒದಗಿಸಲಾಯಿತು. ಈ ಅವಧಿಯಲ್ಲಿ ಸಾನಿಟೋರಿಯಾ ವ್ಯವಸ್ಥೆ ಅಡಿಯಲ್ಲಿ ರೋಗಿಗಳಿಗೆ ಚಿಕತ್ಸೆಯನ್ನು ನೀಡಲಾಗುತ್ತಿತ್ತು.
ಆದರೆ, ಆ ಅವಧಿಯಲ್ಲಿ ಉದ್ದೇಶಿತ ನಿರೀಕ್ಷಿತ ಗುರಿಯನ್ನು ಸಾಧಿಸದಿರುವ ಪ್ರಯುಕ್ತ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1997 ರಲ್ಲಿ ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಕ್ಷಯರೋಗವನ್ನು ನಿಖರವಾಗಿ ಸೂಕ್ಷ್ಮದರ್ಶಕದಿಂದ ಪತ್ತೆ ಹಚ್ಚುವ ವಿಧಾನವನ್ನು ಅನುಸರಿಸಲಾಯಿತು. ಕ್ಷಯರೋಗದಿಂದ ಉಂಟಾಗುವ ಮಾರಕ ಪರಿಣಾಮಗಳಿಂದ ರೋಗಿಗಳು ಗುಣಹೊಂದಿ ಕ್ಷಯರೋಗದಿಂದಾಗಿ ಸಾವಿನ ಪ್ರಮಾಣವು ಗಣನೀಯವಾಗಿ ಇಳಿಯಿತು ಮತ್ತು ಪ್ರಮುಖವಾಗಿ ಈ ಕಾರ್ಯಕ್ರಮದಲ್ಲಿ ಡಾಟ್ಸ್ ಅಂದರೆ ನೇರ ನಿಗಾವಣೆ ಚಿಕಿತ್ಸೆಯನ್ನು ಅಳವಡಿಸಲಾಯಿತು.
ಹೊಸ ರೋಗಿಗಳಿಗೆ, ಕ್ಷಯ ಮರುಕಳಿಸಿದ ರೋಗಿಗಳಿಗೆ ಚಿಕಿತ್ಸೆಯನ್ನು 6 ತಿಂಗಳುಗಳಿಗೆ ಇಳಿಸಲಾಯಿತು. ರೋಗಿಗಳ ಚಿಕಿತ್ಸೆಯ ಜವಬ್ದಾರಿಯನ್ನು ಚಿಕಿತ್ಸಾ ಬೆಂಬಲಿಗರಾಗಿ ಒಬ್ಬ ಆರೋಗ್ಯ ಕಾರ್ಯಕರ್ತರು ಅಥವಾ ಸಮುದಾಯ ಸ್ವಯಂ ಸೇವಕರಾದ ಆಶಾ ಅಥವಾ ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಯಿತು. ಇದರಿಂದಾಗಿ ಚಿಕಿತ್ಸೆಯ ಗುಣಮಟ್ಟ ಹೆಚ್ಚಾಗಿದ್ದಲ್ಲದೇ ರೋಗಿಗಳ ಕ್ಷಯರೋಗದಿಂದ ವಾಸಿಯಾಗುವ ಪ್ರಮಾಣ ಹೆಚ್ಚಿತು. ಕ್ಷಯರೋಗದ ಪತ್ತೆಯಿಂದ ಹಿಡಿದು ಗುಣಮುಖವಾಗುವವರೆಗೆ ಅಂದರೆ ಕಫ ಪರೀಕ್ಷೆ, ಕ್ಷ-ಕಿರಣ ಪರೀಕ್ಷೆ ಮತ್ತು ಔಷಧೋಪಾಚಾರ ಎಲ್ಲವೂ ಈ ಕಾರ್ಯಕ್ರಮದಲ್ಲಿ ಉಚಿತವಾಗಿದೆ.
ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಬದಲಾಯಿಸಿ ಡಿಸೆಂಬರ್ 2019 ರಿಂದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಎಂದು ಮಾರ್ಪಡಿಸಲಾಯಿತು. ಇದರ ಗುರಿ 2025ಕ್ಕೆ ಕ್ಷಯ ಮುಕ್ತ ಭಾರತವನ್ನಾಗಿಸುವುದು. ಇದರೊಂದಿಗೆ ಕ್ಷಯರೋಗದ ಪತ್ತೆ ಮತ್ತು ಚಿಕಿತ್ಸೆಗೆ ಕ್ಷಯರೋಗಿಯಿಂದ ಯಾವುದೇ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳುವುದು ಮತ್ತು ಕ್ಷಯರೋಗದಿಂದ ಮರಣ ಹೊಂದುವವರ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿದೆ.
ಕ್ಷಯರೋಗದ ಅಂಕಿ ಅಂಶಗಳು:
ಜಾಗತಿಕ ಮಟ್ಟದಲ್ಲಿ ಭಾರತವು ಟಿಬಿ ಖಾಯಿಲೆಯಲ್ಲಿ ಒಂದನೇ ನಾಲ್ಕು ಭಾಗ ಆವರಿಸಿದೆ(25.90 ಲಕ್ಷ). ಶೇಕಡ 40 ಕ್ಕಿಂತ ಹೆಚ್ಚು ಜನರು ಭಾರತದಲ್ಲಿ ಟಿಬಿಯಿಂದ ಸೋಂಕಿತರಾಗಿದ್ದಾರೆ. ಅದರಲ್ಲಿ ಪ್ರತಿ ಶತ 10 ರಷ್ಟು ಜನರಿಗೆ ಕ್ಷಯರೋಗ ಉಲ್ಬಣವಾಗುತ್ತದೆ.
ಪ್ರತಿ ದಿನ ಭಾರತದಲ್ಲಿ 60 ಸಾವಿರ ಜನರಿಗೆ ಕ್ಷಯರೋಗದ ಸೋಂಕು ಹರಡುತ್ತಿದ್ದು, ಅದರಲ್ಲಿ 6000 ಜನರು ಕ್ಷಯರೋಗಿಗಳಾಗಿ ಮಾರ್ಪಡು ಹೊಂದುತ್ತಿದ್ದಾರೆ.
ಭಾರತದಲ್ಲಿ ಪ್ರತಿದಿನ ಸುಮಾರು 1000 ಕ್ಕಿಂತ ಹೆಚ್ಚು ಜನರು ಟಿಬಿಯಿಂದ ಸಾವನ್ನಪ್ಪುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ 2024ನೇ ಸಾಲಿಗೆ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ 2850 (ಸರಕಾರಿ ವಲಯ-2120, ಖಾಸಗಿವಲಯ-730) ಕ್ಷಯರೋಗಿಗಳ ಪತ್ತೆಯ ಗುರಿಯನ್ನು ಹೊಂದಲಾಗಿದ್ದು, ಸರಕಾರಿ ವಲಯದಲ್ಲಿ 2799 ಕ್ಷಯರೋಗಿಗಳು ಪತ್ತೆಯಾಗಿರುತ್ತಾರೆ. ಖಾಸಗಿ ವಲಯದಲ್ಲಿ 90 ಪತ್ತೆಯಾಗಿರುತ್ತಾರೆ. ಒಟ್ಟು 2889 ಕ್ಷಯರೋಗಿಗಳು ಪತ್ತೆಯಾಗಿರುತ್ತಾರೆ. ಇನ್ನೂ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಬೇಕಾಗಿರುತ್ತದೆ. 98 ಬಹು ಔಷದ ನಿರೋದಕ ಕ್ಷಯ ರೋಗಿಗಳು ಹಾಗೂ 147 ಹೆಚ್‍ಐವಿ ಸೊಂಕಿತ ಟಿಬಿ ರೋಗಿಗಳು ಪತ್ತೆಯಾಗಿರುತ್ತಾರೆ. 2023ನೇ ಸಾಲಿಗೆ ಹೋಲಿಸಿದಾಗ 2024ನೇ ಸಾಲಿನಲ್ಲಿ ಕ್ಷಯರೋಗ ಪತ್ತೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯರೋಗದ ಹರಡುವಿಕೆಯನ್ನು ತಡೆಗಟ್ಟಲು ಹಮ್ಮಿಕೊಂಡಿರುವ ಅನೇಕ ಯೋಜನೆಗಳಾಗಿವೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 57 ಕಫ ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 38,969 ಪರೀಕ್ಷೆಗಳಾಗಿದ್ದು, 303 ಕ್ಷಯರೋಗಿಗಳು ದೃಢಪಟ್ಟಿರುತ್ತವೆ. ಅದೇ ರೀತಿ ಜಿಲ್ಲೆಯಲ್ಲಿ 4 ಸಿಬಿನಾಟ್ ಕೇಂದ್ರಗಳು ಜಿಲ್ಲಾ ಆಸ್ಪತ್ರೆ, ಕೊಪ್ಪಳ, ಉಪ ವಿಭಾಗ ಆಸ್ಪತ್ರೆ ಗಂಗಾವತಿ, ಸ.ಆ. ಕೇಂದ್ರ ಕನಕಗಿರಿ ಮತ್ತು ಸಾ.ಆಸ್ಪತ್ರೆ, ಕುಷ್ಟಗಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 2024ನೇ ಸಾಲಿನಲ್ಲಿ ಸಿಬಿನಾಟ್ ಕೇಂದ್ರಗಳಲ್ಲಿ 18,947 ಪರೀಕ್ಷೆಗಳು ಆಗಿದ್ದು, ಅದರಲ್ಲಿ 1360 ಕ್ಷಯರೋಗಿಗಳು ದೃಢಪಟ್ಟು ಇದರಲ್ಲಿ 47 ಬಹುಔಷಧ ನಿರೋಧಕ ಕ್ಷಯರೋಗಿಗಳಾಗಿ ಪತ್ತೆ ಮಾಡಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಕ್ಷಯರೋಗದ ಪತ್ತೆ ಮತ್ತು ಅನುಸರಣೆಗಾಗಿ ಇನ್ನು ಹೆಚ್ಚಿನ ಯಂತ್ರೋಪಕರಣಗಳ ಅವಶ್ಯಕತೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.
ಇದರೊಂದಿಗೆ 10 ಟ್ರೂನಾಟ್ ಕೇಂದ್ರಗಳು ಸಾ.ಆ. ಯಲಬುರ್ಗಾ, ಸ.ಆ.ಕೇಂದ್ರ ಕುಕನೂರು, ಸ.ಆ,ಕೇಂದ್ರ ಕಾರಟಗಿ ಮತ್ತು ಸಾ.ಆ. ಕುಷ್ಟಗಿಯಲ್ಲಿ ಎರಡು ಮಾಡ್ಯೂಲ್ ಹಾಗೂ ಶ್ರೀರಾಮನಗರ, ಹನುಮನಾಳ್, ಹೂಲಗೇರ, ಬೇವೂರು, ಮಂಗಳೂರು, ಮತ್ತು ಅಳವಂಡಿಯಲ್ಲಿ ಒಂದು ಮಾಡ್ಯೂಲ್‍ನ ಟ್ರೂನಾಟ್ ಯಂತ್ರ ಕಾರ್ಯನಿರ್ವಹಿಸುವ ಮೂಲಕ ಹೆಚ್ಚು ಕ್ಷಯರೋಗಿಗಳನ್ನು ಪತ್ತೆ ಮಾಡಲಾಗುತ್ತಿದೆ. 2024ನೇ ಸಾಲಿನಲ್ಲಿ ಟ್ರೂನಾಟ್ ಕೇಂದ್ರಗಳಲ್ಲಿ 8352 ಪರೀಕ್ಷೆಗಳು ಆಗಿದ್ದು, ಅದರಲ್ಲಿ 395 ಕ್ಷಯರೋಗಿಗಳು ದೃಢಪಟ್ಟು ಇದರಲ್ಲಿ 6 ಬಹುಔಷಧ ನಿರೋಧಕ ಕ್ಷಯರೋಗಿಗಳಾಗಿ ಪತ್ತೆಯಾಗಿರುತ್ತದೆ.
ನಿಕ್ಷಯ್ ಪೋಷಣ ಯೋಜನೆ: 2024ನೇ ಸಾಲಿನಲ್ಲಿ ಒಟ್ಟು 2889 ಕ್ಷಯರೋಗಿಗಳನ್ನು ಪತ್ತೆ ಮಾಡಲಾಗಿದ್ದು, ಸದರಿ ಕ್ಷಯರೋಗಿಗಳಿಗೆ ಚಿಕಿತ್ಸೆ ಮುಗಿಯುವವರೆಗೆ ಪ್ರತಿ ತಿಂಗಳು ರೂ. 500 ಗಳನ್ನು ನಿಕ್ಷಯ್ ಪೋಷಣ ಯೋಜನೆ ಅಡಿಯಲ್ಲಿ ಪೌಷ್ಟಿಕ ಆಹಾರಕ್ಕಾಗಿ ನೀಡಲಾಗುತ್ತಿದ್ದು, ನವಂಬರ್ 2024 ರಿಂದ ಹೊಸದಾಗಿ ಪತ್ತೆಯಾದ ಕ್ಷಯರೋಗಿಗಳಿಗೆ ಪ್ರತಿ ತಿಂಗಳು ಮಾಸಿಕ ರೂ. 1000 ಕ್ಕೆ ಹೆಚ್ಚಿಸಲಾಗಿದೆ.
ವಿನೂತನ ಕ್ರಮಗಳು: ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕ್ಷಯರೋಗಿಗಳ ಅನುಕೂಲಕ್ಕಾಗಿ ನಿಕ್ಷಯ್ ದಿವಸ ಆಚರಣೆ, ಟಿ.ಬಿ. ಗುರುವಾರ, ಕ್ಷಯ ಮುಕ್ತ ಶಾಲೆ, ಕ್ಷಯಮುಕ್ತ ಕಾರ್ಯಸ್ಥಳ, ಹಾಗೂ ವಿಭಿನ್ನ ಆರೈಕೆ ಮಾದರಿ ಮತ್ತು ಆಸ್ಪತ್ರೆಗಳಲ್ಲಿ ಒಳರೋಗಿಗಳ ತಪಾಸಣೆ ಕಾರ್ಯಕ್ರಮದ ಮೂಲಕ ಕ್ಷಯರೋಗಿಗಳ ತಪಾಸಣೆ ಮಾಡಲಾಗುತ್ತಿದ್ದು, ಇನ್ನು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ-2025ರ ವೇಳೆಗೆ ಭಾರತವನ್ನು ಕ್ಷಯಮುಕ್ತವಾಗಿಸುವ ಉದ್ದೇಶಕ್ಕೆ ಪೂರಕವಾಗುವಂತೆ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಸರ್ಕಾರಿ, ಸರ್ಕಾರೇತರ ಸಂಸ್ಥೇಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಖಾನೆಗಳು, ಸಂಘ ಸಂಸ್ಥೆಗಳು ಮನವೊಲಿಸಿ ನಿಕ್ಷಯ್ ಮಿತ್ರ ಯೋಜನೆಯಲ್ಲಿಯಲ್ಲಿ ದೃಢಪಟ್ಟ ಕ್ಷಯರೋಗಿಗಳಿಗೆ ಚಿಕಿತ್ಸೆ ಮುಗಿಯುವವರೆಗೆ ಪೌಷ್ಟಿಕ ಆಹಾರ ಒದಗಿಸುವುದಾಗಿದೆ.
100 ದಿನಗಳ ಕ್ಷಯಮುಕ್ತ ಅಭಿಯಾನ: ಭಾರತ ದೇಶದ 347 ಜಿಲ್ಲೆಗಳಲ್ಲಿ ಏಕಕಾಲದಲ್ಲಿ 100 ದಿನಗಳ ಕ್ಷಯಮುಕ್ತ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ 2024ರ ಡಿಸೆಂಬರ್ 7 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಿಯವರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆಯನ್ನು ನೀಡಲಾಯಿತು.
ಈ ಅಭಿಯಾನವು ದುರ್ಬಲ ಮತ್ತು ಅಪಾಯದ ಅಂಚಿನಲ್ಲಿನ ಜನಸಂಖ್ಯೆಯನ್ನು ಕೇಂದ್ರೀಕರಿಸಿದ್ದು, ಮುಖ್ಯವಾಗಿ ಮಧುಮೇಹಿ, ಹೆಚ್.ಐ.ವಿ. ಸೋಂಕಿತರು, ಹಳೇ ಕ್ಷಯರೋಗಿಗಳು ಮತ್ತು ಅವರ ಸಂಪರ್ಕಿತರು, ತಂಬಾಕು ಸೇವನೆ ಮಾಡುವವರು, 60 ವರ್ಷ ಮೇಲ್ಪಟ್ಟವರು ಮತ್ತು ಇತರೆ ಕಾರಣಗಳಿಂದ ರೋಗನಿರೋಧಕ ಶಕ್ತಿ ಕುಂಠಿತವಾಗಿರುವವರನ್ನು ಗುರಿಯನ್ನಾಗಿಸಿಕೊಂಡಿದ್ದು, ಈ ಅಭಿಯಾನದಲ್ಲಿ 2,00,000 ಹೊಸ ಕ್ಷಯರೋಗಿಗಳ ಪತ್ತೆ ಮಾಡುವುದು ಮತ್ತು ಕ್ಷಯರೋಗದ ಮರಣದರವನ್ನು ಕಡಿಮೆ ಮಾಡುವುದಾಗಿದೆ.
ಕ್ಷಯರೋಗವು ಅಘೋಷಿತ ಮುಂದುವರಿದ ತುರ್ತು ಆರೋಗ್ಯ ಪರಿಸ್ಥಿತಿಯಾಗಿದ್ದು, ಕ್ಷಯರೋಗ ನಿರ್ಮೂಲನೆಯು ಸರ್ಕಾರದ ಕ್ರಮಗಳೊಂದಿಗೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಮಾತ್ರ ಸಾಧ್ಯವಾಗಿರುತ್ತದೆ. ಕಾರಣ ಕೊಪ್ಪಳ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಈ ಅಭಿಯಾನದಲ್ಲಿ ಕೈಜೋಡಿಸಿ ಕೊಪ್ಪಳ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು.
- ಡಾ. ಶಶೀಧರ್ ಎ.
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು,
ಕೊಪ್ಪಳ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್