ರಾಯಚೂರು, 15 ಜನವರಿ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿರುವ ಕ್ರೀಡಾಶಾಲೆಗೆ 2025-26ನೇ ಸಾಲಿನ ಪ್ರವೇಶಕ್ಕೆ ಮಸ್ಕಿ ತಾಲೂಕಿನಲ್ಲಿ ಮಸ್ಕಿ ಕೆ.ಪಿ.ಎಸ್ ಪ್ರೌಢ ಶಾಲೆಯಲ್ಲಿ ಜ.18ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಕ್ರೀಡಾಪಟುಗಳು ಬೆಳಿಗ್ಗೆ 10 ಗಂಟೆಗೆ ಶಿವಪ್ಪ ಮೊ ಸಂ: 9483304481, ಲಕ್ಷ್ಮಣ ಮೊ ಸಂ: 9900859864, ರಾಮಪ್ಪ ಮೊ ಸಂ; 9632963017 ಇವರಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಕಿರಿಯರ ವಿಭಾಗದ ಕ್ರೀಡಾ ವಸತಿ ಶಾಲೆಗಳ ಆಯ್ಕೆಯನ್ನು ಪ್ರಸ್ತುತ 7ನೇ ತರಗತಿ ಅಭ್ಯಾಸ ಮಾಡುತ್ತಿರುವ ಬಾಲಕ ಬಾಲಕಿಯರಿಗಾಗಿ ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ಫುಟ್‍ಬಾಲ್, ಜಿಮ್ನಾಸ್ಟಿಕ್, ಹಾಕಿ, ಜುಡೋ, ವಾಲಿಬಾಲ್ ಮತ್ತು ಕುಸ್ತಿ ವಿಭಾಗಗಳಲ್ಲಿ ಆಯ್ಕೆಯನ್ನು ನಡೆಸಲಾಗುವುದು. ಆಯ್ಕೆಯಲ್ಲಿ ಭಾಗವಹಿಸುವವರು. 01-06-2025 ರಂದು 14 ವರ್ಷದೊಳಗಿರಬೇಕು ಮತ್ತು 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು. ಮತ್ತು ತಾವು ವ್ಯಾಸಾಂಗ ಮಾಡುತ್ತಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣಪತ್ರ ಹಾಗೂ ವ್ಯಾಸಂಗ ಮಾಡುತ್ತಿರುವ ತರಗತಿಯ ವಿವರಗಳನ್ನೊಳಗೊಂಡ ದೃಢೀಕರಣ ಪತ್ರವನ್ನು ಆಯ್ಕೆ ದಿನದಂದು ಕಡ್ಡಾಯವಾಗಿ ತರಬೇಕು.
ಹಿರಿಯರ ವಿಭಾಗದ ಕ್ರೀಡಾ ವಸತಿ ಶಾಲೆಗಳ ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು 01-06-2025 ರಂದು 18 ವರ್ಷದೊಳಗಿದ್ದು, ಪ್ರಥಮ ಪಿ.ಯು.ಸಿ ಪ್ರವೇಶ ಪಡೆಯಲು ಅರ್ಹರಿರಬೇಕು. ಆಯ್ಕೆಯನ್ನು ಪ್ರಸ್ತುತ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕ ಬಾಲಕಿಯರಿಗಾಗಿ ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ಫುಟ್‍ಬಾಲ್, ಜಿಮ್ನಾಸ್ಟಿಕ್, ಹಾಕಿ, ಜುಡೋ, ವಾಲಿಬಾಲ್ ಮತ್ತು ಕುಸ್ತಿ ಸ್ಪರ್ಧೆಗಳ ಆಯ್ಕೆ ನಡೆಸಲಾಗುವುದು.
ಅರ್ಹ ಕ್ರೀಡಾಪಟುಗಳು ನಿಗದಿತ ನಮೂನೆಯ ಅರ್ಜಿಗಳನ್ನು ಈ ಕಚೇರಿಯಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ತಾಲ್ಲೂಕು ಮಟ್ಟದ ಆಯ್ಕೆಯಲ್ಲಿ ಪಾಲ್ಗೊಳ್ಳುವ ಆಸಕ್ತ ಕ್ರೀಡಾಪಟುಗಳು ಆಯಾ ದಿನಾಂಕಗಳಂದು ಬೆಳಿಗ್ಗೆ 10 ಗಂಟೆಗೆ ಆಯ್ಕೆ ನಡೆಯುವ ಸ್ಥಳಗಳಲ್ಲಿ ವರದಿಮಾಡಿಕೊಳ್ಳಲು ಸೂಚಿಸಲಾಗಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ 5ನೇ ತರಗತಿಯಿಂದ 10ನೇ ತರಗತಿಯವರೆಗೆ (ಕ್ರೀಡಾ ಕೌಶಲ್ಯ ನೀಡಿದಲ್ಲಿ) ಸರ್ಕಾರದ ವತಿಯಿಂದ ಉಚಿತ ವಸತಿ, ಪೌಷ್ಠಿಕ ಆಹಾರ, ತಜ್ಞ ತರಬೇತುದಾರರಿಂದ ಕ್ರೀಡಾ ತರಬೇತಿ, ಸಮವಸ್ತ್ರ ಮುಂತಾದವುಗಳನ್ನು ಒದಗಿಸಲಾಗುವುದು. ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ವಿಧವಾದ ಭತ್ಯೆಯನ್ನು ನೀಡಲಾಗುವುದಿಲ್ಲ.
ಆಯ್ಕೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಯಾವುದೇ ವಿಧದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರು ಇಲ್ಲಿ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್