ಕೋಲಾರ, ಜನವರಿ ೧೫ (ಹಿ.ಸ.) :
ಆ್ಯಂಕರ್ : ಹಲವಾರು ಬಾರಿ ಮುಂದೂಡಲಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಜಂಟಿ ಸರ್ವೆಯನ್ನು ಬುಧವಾರ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಆರಂಭಿಸಿದರು. ಬೆಳಗ್ಗೆ ಒಂಬತ್ತು ಗಂಟೆಗೆ ಜಿಲ್ಲಾಧಿಕಾರಿ ಎಂ.ಆರ್ ರವಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ದೂರುದಾರರಾದ ರಮೇಶ್ ಕುಮಾರ್ ಸಮ್ಮುಖದಲ್ಲಿ ಜಂಟಿ ಸರ್ವೆ ಆರಂಭವಾಯಿತು.
ಕಳೆದ ಹದಿನಾಲ್ಕು ವರ್ಷಗಳಿಂದ ಒಂದಲ್ಲಾ ಒಂದು ಕಾರಣಗಳಿಂದ ಜಂಟಿ ಸರ್ವೆಯನ್ನು ಮುಂದೂಡಲಾಗಿತ್ತು. ಕಳೆದ ವರ್ಷ ನವೆಂಬರ್ ೬ ಮತ್ತು ೨೦ ರಂದು ನಿಗಧಿಯಾಗಿದ್ದ ಜಂಟಿ ಸರ್ವೆಯನ್ನು ತಾಂತ್ರಿಕ ಕಾರಣಗಳನ್ನು ನೀಡಿ ಮುಂದೂಡಲಾಗಿತ್ತು ರಾಜ್ಯ ಹೈಕೋರ್ಟ್ ಆದೇಶವನ್ನು ದಿಕ್ಕರಿಸಿ ಬೆಂಗಳೂರು ಪ್ರಾದೇಶಿಕ ಆಯುಕ್ತರು ಕೋಲಾರ ಸಹಾಯಕ ಕಮೀಷನರ್, ಶ್ರೀನಿವಾಸಪುರ ತಾಹಶೀಲ್ದಾರ್, ಪ್ರಾದೇಶಿಕ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೋಲಾರ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.
ಪ್ರಾದೇಶಿಕ ಆಯುಕ್ತರ ಈ ನಡೆ ತೀವ್ರ ವಿವಾದಕ್ಕೆ ಈಡಾಗಿತ್ತು. ಇದರಿಂದಾಗಿ ಸರ್ವೆ ನಡೆಯುವ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ರಮೇಶ್ ಕುಮಾರ್ ಅನುಕೂಲ ಪಡೆಯಬಹುದು ಎಂಬ ಆರೋಪ ಕೇಳಿಬಂದಿತ್ತು. ವಕೀಲ ಕೆವಿ ಶಿವಾರೆಡ್ಡಿ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಒತ್ತುವರಿ ಗುರುತಿಸಲು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆಸಬೇಕೆಂದು ಮನವಿ ಮಾಡಿದ್ದರು.
ಅರ್ಜಿಯನ್ನು ಕಳೆದ ಡಿಸೆಂಬರ್ ೩೧ ರಂದು ಇತ್ಯರ್ಥ ಪಡಿಸಿದ ಹೈಕೋರ್ಟ್ ಜಂಟಿ ಸರ್ವೆಯನ್ನು ಜನವರಿ ರಮೇಶ್ ಕುಮಾರ್ ಸಮ್ಮುಖದಲ್ಲಿ ನಡೆಸಬೇಕು ಅವರ ಹಾಜರಾತಿ ಕಡ್ಡಾಯ ಗೊಳಿಸಿ ಜಿಲ್ಲಾಧಿಕಾರಿಗಳು ನೋಟೀಸ್ ಜಾರಿ ಮಾಡಬೇಕು ಒಂದು ವೇಳೆ ಗೈರು ಹಾಜರಾದರು ಸಹ ಜನವರಿ ೧೫ ರಂದು ಸರ್ವೆ ನಡೆಸಿ ಫೆಬ್ರವರಿ ೬ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೆಶನ ನೀಡಿತ್ತು. ಅಲ್ಲದೆ ಪ್ರಾದೇಶಿಕ ಆಯುಕ್ತರು ರಚಿಸಿದ್ದ ಸಮಿತಿಯನ್ನು ನ್ಯಾಯಾಲಯ ರದ್ದು ಪಡಿಸಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ಜಂಟಿ ಸರ್ವೆ ಆರಂಭಗೊಂಡಿತು. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ನಾಲ್ಕು ತಂಡಗಳನ್ನು ರಚಿಸಿ ಸರ್ವೆ ಕಾರ್ಯ ಆರಂಭಿಸಲಾಯಿತು. ಮೊದಲು ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಹೋಬಳಿ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ ೧ ಮತ್ತು ೨ ಗ್ರಾಮಗಳ ಗಡಿಯನ್ನು ರೋವರ್ ಉಪಕರಣದ ಮೂಲಕ ಸರ್ವೆ ಆರಂಭಿಸಲಾಯಿತು.
ನಾಲ್ಕು ತಂಡಗಳು ರೋವರ್ ಸರ್ವೆ ರೀಡಿಂಗ್ ಮಾಹಿತಿಯನ್ನು ಸಲ್ಲಿಸಿದರು. ಆನಂತರ ಸರ್ವೆ ತಂಡಗಳು ತಾಂತ್ರಿಕ ಸರ್ವೆ ಕಾರ್ಯವನ್ನು ಮುಂದುವರೆಸಿದರು. ಆನಂತರ ಅರಣ್ಯ ಭೂಮಿಯ ಗಡಿಯನ್ನು ಗುರುತಿಸಲಾಗುತ್ತದೆ. ಸಂಜೆ ೫ ಗಂಟೆಯ ತನಕ ಸರ್ವೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಎಸ್ಪಿ ನಿಖಿಲ್ ಬಿ, ಕೋಲಾರ ಪ್ರಾದೇಶಿಕ ಉಪರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗಾರ್ ಭೂ ದಾಖಲೆಗಳ ಉಪ ನಿರ್ದೇಶಕ ಸಂಜಯ್ ಕೋಲಾರ ಉಪ ವಿಭಾಗಾಧಿಕಾರಿ ಡಾ. ಮೈತ್ರಿ ಶ್ರೀನಿವಾಸಪುರ ತಹಶೀಲ್ದಾರ್ ಜಿಎನ್. ಸುಧೀಂದ್ರ ಉಪಸ್ಥಿತರಿದ್ದರು.
ಚಿತ್ರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ ೧ ಮತ್ತು ೨ ರ ಜಮೀನುಗಳಲ್ಲಿ ಬುಧವಾರ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ಗುರುತಿಸಲು ಜಂಟಿ ಸರ್ವೆ ನಡೆಸಿದರು.
ಚಿತ್ರ : ಜಂಟಿ ಸರ್ವೆ ಸಮಯದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್