ಕೋಲಾರ, ಜನವರಿ ೧೫ (ಹಿ.ಸ.) :
ಆ್ಯಂಕರ್ : ಶಾಸಕ ಕೊತ್ತೂರು ಜಿ ಮಂಜುನಾಥ್ ರವರನ್ನು ಬಂಧಿಸಲು ಸರ್ಕಾರದ ಮೇಲೆ ಹಾಗೂ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಜನವರಿ ೨೨ ರ ಬುಧವಾರ ಕೋಲಾರ ನಗರದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ದಲಿತ ಸಿಂಹ ಸೇನೆ ಸಂಸ್ಥಾಪಕ ಅಧ್ಯಕ್ಷ ಹೂಹಳ್ಳಿ ಪ್ರಕಾಶ್ ತಿಳಿಸಿದರು.
ಕೋಲಾರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹೂಹಳ್ಳಿ ಪ್ರಕಾಶ್ ನ್ಯಾಯಾಲಯ ಶಾಸಕ ಕೊತ್ತೂರು ಜಿ.ಮಂಜುನಾಥ್ ಕಳೆದ ೨೦೧೩ ರಲ್ಲಿ ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ವಿಧಾನ ಸಭ ಕ್ಷೇತ್ರದಿಂದ ಸ್ಪರ್ದಿಸಿ ಆಯ್ಕೆಯಾಗಿದ್ದರು. ಮಂಜುನಾಥ್ ಭೈರಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಅವರು ಪರಿಶಿಷ್ಟ ಜಾತಿ ಬುಡ್ಗ ಜಂಗಮ ಜಾತಿಗೆ ಸೇರಿಲ್ಲ. ಮಂಜುನಾಥ್ ಆಯ್ಕೆಯನ್ನು ಪ್ರಶ್ನೆ ಮಾಡಿ ರಾಜ್ಯ ಹೈಕೋರ್ಟ್ನಲ್ಲಿ ಚುನಾವಣಾ ತಕ೫ರಾರು ಅರ್ಜಿಯನ್ನು ಪರಾಜಿತ ಅಭ್ಯರ್ಥಿ ಮುನಿಆಂಜಿನಪ್ಪ ಹಾಗೂ ಇತರರು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಮಂಜುನಾಥ್ ಪರಿಶಿಷ್ಟ ಜಾತಿ ಬುಡ್ಗ ಜಂಗಮ ಜಾತಿಗೆ ಸೇರಿಲ್ಲ ಅವರು ಬದಲಾಗಿ ಹಿಂದುಳಿದ ವರ್ಗಗಳ ಜಾತಿ ಭೈರಾಗಿಗೆ ಸೇರಿದ್ದಾರೆ ಎಂದು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿತ್ತು. ಆ ನಂತರ ೨೦೧೮ ರಲ್ಲಿ ಮಂಜುನಾಥ್ ವಿರುದ್ದ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಿದ ಆರೋಪ ಮೇಲೆ ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯ ಮೇರೆಗೆ ಕೋಲಾರದ ನಾಗರೀಕ ಜಾರಿ ಹಕ್ಕು ನಿರ್ದೇಶನಾಲಯದಿಂದ ಮುಳಬಾಗಿಲು ಪೋಲೀಸರಿಗೆ ದೂರು ನೀಡಲಾಗಿತ್ತು.ಪೋಲೀಸರು ಕೊತ್ತೂರು ಮಂಜುನಾಥ್ ವಿರುದ್ದ ದುರು ದಾಖಲಿಸಿದ್ದರು ಎಂದು ಪ್ರಕಾಶ್ ತಿಳಿಸಿದರು.
ಕೊತ್ತೂರು ಮಂಜುನಾಥ್ ಪ್ರಭಾವಿ ರಾಜಕಾರಣಿ ಹಾಗಿರುವ ಕಾರಣ ದೂರು ನೀಡಿ ಆರು ವರ್ಷ ಕಳೆದರು ತನಿಖೆ ಆರಂಭಿಸಿಲ್ಲ ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿ ಬಾಕಿ ಇದೆ ಎಂದು ಕಾರಣ ನೀಡಿ ಕಡತದ ಮೇಲೆ ಮುಳಬಾಗಿಲು ಪೋಲೀಸರು ಕುಳಿತಿದ್ದರು. ಇತ್ತೀಚೆಗೆ ರಿಟ್ ಅರ್ಜಿಯನ್ನು ಇತ್ಯರ್ಥಗೊಳಿಸಿದ ಹೈಕೋರ್ಟ್ ನ್ಯಾಯಾಮೂರ್ತಿ ನಾಗಪ್ರಸನ್ನ ಅವರು ಅರ್ಜಿ ಬಾಕಿ ಇದೆ ಎಂಬ ಕಾರಣಕ್ಕಾಗಿ ತನಿಖೆ ನಡೆಸದೇ ಸುಮ್ಮನಿರುವುದು ಸರಿಯಲ್ಲ ತ್ವರಿತವಾಗಿ ಪೋಲೀಸರು ತನಿಖೆಯನ್ನು ಮುಗಿಸುವಂತೆ ನಿರ್ದೇಶನ ನೀಡಿದ್ದರು ಎಂದು ವಿವರಿಸಿದರು.
ಮಂಜುನಾಥ್ ರಾಜ್ಯ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ ಮಂಜುನಾಥ್ ಜಾತಿ ಪ್ರಮಾಣ ಪತ್ರದ ಪ್ರಕರಣವನ್ನು ವಿಚಾರಣೆ ನಡೆಸಿದ ಹಿಂದಿನ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಂಜುನಾಥ್ ಭೈರಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ ಶಾಲಾ ದಾಖಲಾತಿಗಳು ಇತರ ದಾಖಲಾತಿಗಳಲ್ಲಿ ಅವರು ಪರಿಶಿಷ್ಟ ಜಾತಿ ಬುಡ್ಗ ಜಂಗಮಕ್ಕೆ ಸೇರಿದವರು ಎಂಬುದಕ್ಕೆ ಯಾವುದೇ ಉಲ್ಲೇಖವಿಲ್ಲ ಎಂದು ವರದಿ ಸಲ್ಲಿಸಿದರು. ಈ ವರದಿಯನ್ನು ಒಪ್ಪಿದ ರಾಜ್ಯ ಹೈಕೋರ್ಟ್ ಮಂಜುನಾಥ್ ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿದರು. ಇದುವರೆಗೂ ನಡೆದ ನ್ಯಾಯಾಂಗ ಹೋರಾಟದಲ್ಲಿ ಮಂಜುನಾಥ್ ಅವರಿಗೆ ಹಿನ್ನಡೆಯಾಗಿದೆ ಅವರು ಪರಿಶಿಷ್ಟ ಜಾತಿ ಬುಡ್ಗ ಜಂಗಮ ಜಾತಿಗೆ ಸೇರಿಲ್ಲ ಎಂಬುದನ್ನು ರಾಜ್ಯ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಆದೇಶಗಳು ಸ್ಪಷ್ಟಪಡಿಸಿವೆ ಎಂದು ತಿಳಿಸಿದರು.
ಮಂಜುನಾಥ್ ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಕಾರಣ ಪೋಲೀಸರು ಸುಳ್ಳು ಜಾತಿ ಪ್ರಮಾಣ ಪತ್ರದ ದೂರನ್ನು ತನಿಖೆ ನಡೆಸುತ್ತಿಲ್ಲ ರಾಜ್ಯದ ಮುಖ್ಯಂತ್ರಿ ಸಿದ್ದರಾಮಯ್ಯ ತಾವು ದಲಿತ ಪರ ಎಂದು ಹೇಳುತ್ತಿದ್ದಾರೆ. ಮೀಸಲು ವಿದಾನಸಭಾ ಕ್ಷೇತ್ರದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸ್ಪರ್ದಿಸಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಪ್ರಕಾಶ್ ಒತ್ತಾಯಿಸಿದರು.
ಜನವರಿ ೨೨ ರಂದು ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಹಲವಾರು ಸಂಘಟನೆಗಳ ಸುಮಾರು ಐದು ಸಾವಿರ ಜನ ಕಾರ್ಯಕರ್ತರು ನಗರದ ಬಂಗಾರ ಪೇಟೆ ವೃತ್ತದಲ್ಲಿರು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆಕ್ಕೆ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಮಂಜುನಾಥ್ ಬಂದನಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ದಲಿತ ನಾರಾಯಣ ಸ್ವಾಮಿ ಮಾತನಾಡಿ ಸುಳ್ಳು ಜಾತಿ ಪ್ರಮಾಣದ ಮೂಲಕ ಶಾಸಕರಾದ ಮೇಲೆ ೨೦೧೩ ರಿಂದ ನಿರಂತರವಾಗಿ ಜಿ.ಮಂಜುನಾಥ್ ವಿರುದ್ಧ ಅನೇಕ ಹೋರಾಟಗಳನ್ನು ನಡೆಸುತ್ತಾ ಬರುತ್ತಿದ್ದು,ಪ್ರಸ್ತುತ ನ್ಯಾಯಾಲಯ ಜಿ.ಮಂಜುನಾಥ್ ವಿರುದ್ಧ ತೀರ್ಪು ನೀಡಿದ್ದು,ದಲಿತರಿಗೆ ನ್ಯಾಯ ಸಿಕ್ಕಿದೆ. ಆದರೆ ದಲಿತರಿಗೆ ಮೋಸ ಮಾಡಿರುವ ಮಂಜುನಾಥ್
ಅವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಲವು ದಲಿತ ಪರ ಸಂಘಟನೆಗಳ ಮುಖಂಡರಾದ ಸಾಹುಕಾರ್ ಶಂಕರಪ್ಪ, ಮಂಜುನಾಥ್, ಹನುಮಾನ್, ಅಮ್ಜದ್ ಪಾಷ, ದೇವರಾಜ್, ಸುಮನ್, ಅನಂತ ಕೀರ್ತಿ, ತೆನಾಲಿ ವೆಂಕಟೇಶ್, ಚಿಕ್ಕ ನಾರಾಯಣಪ್ಪ, ಅಂಬರೀಶ್,ಮೆಕ್ಯಾನಿಕ್ ನಾರಾಯಣ್, ವಿನಯ್, ಶ್ರೀನಿವಾಸ್, ಪಿ.ವಿ.ಸಿ.ಮಣಿ, ಮುರಳಿಧರ್,ಸದಾಶಿವ, ಮುನಿರಾಜು, ರವಿಚಂದ್ರ, ಮಂಜುಳ ಭಾಗವಹಿಸಿದ್ದರು.
ಚಿತ್ರ: ಕೋಲಾರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಬಂಧನಕ್ಕೆ ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್