ಪ್ಯಾರಿಸ್, 09 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಆಗಸ್ಟ್ 28 ರಿಂದ ಶುರುವಾದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಿನ್ನೆ ರಾತ್ರಿ ಮುಕ್ತಾಯಗೊಂಡಿದೆ. ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ಗೆ ತೆರೆ ಎಳೆಯಲಾಯಿತು. ಅಲ್ಲದೆ ಮುಂದಿನ ಪ್ಯಾರಾಲಿಂಪಿಕ್ಸ್ ಆತಿಥ್ಯದ ಧ್ವಜವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.
ಇನ್ನು ಈ ಸಮಾರಂಭದಲ್ಲಿ ಭಾರತವನ್ನು ಹರ್ವಿಂದರ್ ಸಿಂಗ್ ಮತ್ತು ಅಥ್ಲೀಟ್ ಪ್ರೀತಿ ಪಾಲ್ ಧ್ವಜಧಾರಿಗಳಾಗಿ ಮುನ್ನಡೆಸಿದರು. ಇಬ್ಬರೂ ಭಾರತೀಯ ತ್ರಿವರ್ಣ ಧ್ವಜದೊಂದಿಗೆ ಸಮಾರೋಪ ಸಮಾರಂಭದಲ್ಲಿ ಕಾಣಿಸಿಕೊಂಡರು. ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ವರ್ಣರಂಜಿತ ಸಮಾರಂಭವು ಸಂಗೀತ, ಬೆಳಕಿನ ವೈಭವದೊಂದಿಗೆ ಪ್ರೇಕ್ಷಕರ ಮನಸೊರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದು ಚೀನಾ. 94 ಚಿನ್ನ, 76 ಬೆಳ್ಳಿ ಮತ್ತು 50 ಕಂಚಿನ ಪದಕಗಳೊಂದಿಗೆ ಚೀನಾ ದೇಶವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು ಗ್ರೇಟ್ ಬ್ರಿಟನ್ 124 ಪದಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಯುಎಸ್ಎ 105 ಪದಕ ಗೆದ್ದು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ನೆದರ್ಲ್ಯಾಂಡ್ಸ್ 56 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಇನ್ನು ಈ ಬಾರಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರೀಡಾಪಟುಗಳು ಒಟ್ಟು 29 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಒಟ್ಟು 29 ಪದಕಗಳೊಂದಿಗೆ 18ನೇ ಸ್ಥಾನ ಪಡೆದುಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್