ನವದೆಹಲಿ, 07 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಎಸ್ಐಪಿ ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಎಂಬುದು ನೀವು ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಒಂದು ಯೋಜನೆ. ನೀವು ಉಳಿಸಿದ ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡಲು ನೆರವಾಗುತ್ತದೆ. ಬ್ಯಾಂಕ್ನಲ್ಲಿ ಮರುಕಳಿಸುವ ಠೇವಣಿಗಳಲ್ಲಿ ಪ್ರತೀ ತಿಂಗಳು ಹಣ ಕಟ್ಟುವಂತೆ, ಅಥವಾ ಚೀಟಿಯಲ್ಲಿ ತಿಂಗಳಿಗೆ ಹಣ ಕಟ್ಟುವಂತೆ ನೀವು ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ನಿಯಮಿತವಾಗಿ ಹಣ ಹೂಡಿಕೆ ಮಾಡಬಹುದು. ವ್ಯವಸ್ಥಿತ ಹೂಡಿಕೆ ಯೋಜನೆ ಎಂಬುದು ಈಗ ಮ್ಯೂಚುವಲ್ ಫಂಡ್ಗೆ ಹೆಚ್ಚು ಜೋಡಿತವಾಗಿದೆ. ಷೇರುಗಳಲ್ಲೂ ನೇರವಾಗಿ ನೀವು ವ್ಯವಸ್ಥಿತ ಹೂಡಿಕೆ ಯೋಜನೆ ಮಾಡಲು ಅವಕಾಶ ಇದೆ. ಡಿಜಿಟಲ್ ಗೋಲ್ಡ್ ಸೇರಿದಂತೆ ಯಾವುದೇ ಹೂಡಿಕೆಯಲ್ಲೂ ನೀವು ವ್ಯವಸ್ಥಿತ ಹೂಡಿಕೆ ಯೋಜನೆ ಪ್ಲಾನ್ ಮೂಲಕ ಮುಂದಡಿ ಇಡಬಹುದು.
ಈಗ ವ್ಯವಸ್ಥಿತ ಹೂಡಿಕೆ ಯೋಜನೆ ಎಂದರೆ ಹೆಚ್ಚಾಗಿ ಮ್ಯೂಚುವಲ್ ಫಂಡ್ ಎಸ್ಐಪಿ ಎಂದೇ ಪರಿಭಾವಿಸಬಹುದು. ಯಾರಾದರೂ ಈಗ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಮಾಡುತ್ತೇನೆ ಎಂದರೆ ಅದು ಮ್ಯೂಚುವಲ್ ಫಂಡ್ ಆಗಿರುತ್ತದೆ. ಭಾರತದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಜುಲೈ ತಿಂಗಳೊಂದರಲ್ಲೇ 23,331 ಕೋಟಿ ರೂ ಮೊತ್ತದ ಹಣವು ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಹೂಡಿಕೆ ಆಗಿದೆ.
ವ್ಯವಸ್ಥಿತ ಹೂಡಿಕೆ ಯೋಜನೆಯಿಂದ ಅನುಕೂಲಗಳೇನು?
ನೀವು ಮ್ಯೂಚುವಲ್ ಫಂಡ್ನಲ್ಲಿ ನಿಯಮಿತವಾಗಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನೀವು ಹಣ ಉಳಿಸಲು ಶುರು ಮಾಡುತ್ತೀರಿ.
ಮಾರುಕಟ್ಟೆಯ ಎಲ್ಲಾ ಏರಿಳಿತಗಳಲ್ಲಿ ನಿಮ್ಮ ಹೂಡಿಕೆ ಇರುತ್ತದೆ. ಇದರಿಂದ ಪಕ್ಕಾ ಸರಾಸರಿಯಾದ ಆದಾಯ ನಿಮಗೆ ಸಿಗುತ್ತದೆ.ನೀವು ನಿಯಮಿತವಾಗಿ ಮತ್ತು ದೀರ್ಘಾವಧಿಗೆ ಹೂಡಿಕೆ ಮಾಡುವುದರಿಂದ ಹಣ ಬಹಳ ಚಮತ್ಕಾರ ಎನಿಸುವ ರೀತಿಯಲ್ಲಿ ಬೆಳೆಯುತ್ತದೆ. ಇದಕ್ಕೆ ಗಣಿತದಲ್ಲಿ ಕಾಂಪೌಂಡಿಂಗ್ ಎಫೆಕ್ಟ್ ಎನ್ನುತ್ತಾರೆ. ಬಡ್ಡಿಗೆ ಚಕ್ರ ಬಡ್ಡಿ ಸೇರುವ ರೀತಿಯಲ್ಲಿ ಹಣ ಬೆಳೆಯುತ್ತಾ ಹೋಗುತ್ತದೆ. ನೀವು 500 ರೂನಷ್ಟು ಸಣ್ಣ ಮೊತ್ತದಿಂದ ವ್ಯವಸ್ಥಿತ ಹೂಡಿಕೆ ಯೋಜನೆ ಹೂಡಿಕೆ ಆರಂಭಿಸಬಹುದು. ಈಗ ಕನಿಷ್ಠ ಹೂಡಿಕೆ 250 ರೂಗೂ ಇದೆ.ನೀವು ಸುಲಭವಾಗಿ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ ಮ್ಯಾಂಡೇಟ್ ಕೊಟ್ಟುಬಿಟ್ಟರೆ ನಿಗದಿತ ದಿನಾಂಕಕ್ಕೆ ತನ್ನಂತಾನೆ ಹಣ ಕಡಿತ ಆಗುತ್ತದೆ. ಇಲ್ಲವಾದರೆ ಮ್ಯಾನುಯಲ್ ಆಗಿಯೂ ನೀವು ವ್ಯವಸ್ಥಿತ ಹೂಡಿಕೆ ಯೋಜನೆಗೆ ಹಣ ಹಾಕಬಹುದು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್